ರಿಯಾಜಅಹ್ಮದ ದೊಡ್ಡಮನಿ
ಗಾಳಿಗುಂಡಿ ಬೆಟ್ಟ ಪ್ರವಾಸಿತಾಣ ವಲಯದಲ್ಲಿ ರಾಖಿ ಮೂಲಕ ವೃಕ್ಷ ಬಂಧನ ನಡೆಯುತ್ತಿದೆ. ಬೆಳೆಯುವ ಮರ- ಗಿಡ, ಬಳ್ಳಿಗಳ ಬೀಜಗಳನ್ನು ಬಳಸಿ ತಯಾರಿಸಿದ ಪ್ಲಾಸ್ಟಿಕ್ ಮುಕ್ತ ರಾಖಿಗಳನ್ನು ಕಪ್ಪತ್ತಗುಡ್ಡದ ಗಿಡಮರಗಳಿಗೆ ಕಟ್ಟಲಾಗಿದೆ. ಮಳೆಗೆ ರಾಖಿಗಳ ಬೀಜಗಳು ನೆಲಕ್ಕೆ ಬಿದ್ದು ಮೊಳಕೆಯೊಡೆದು ಕಪ್ಪತ್ತಗುಡ್ಡ ಇನ್ನಷ್ಟು ಹಸಿರಾಗಲಿ ಎಂಬ ಆಶಯ ಇದರ ಹಿಂದಿದೆ.
ವಿಶೇಷ ವಿನ್ಯಾಸದ ಮಾದರಿ ಹಾಗೂ ಪರಿಸರ ಕಾಳಜಿ ಆಧರಿಸಿ ಸಿಮೆಂಟನ್ನು ಬಳಸಿ ದೊಡ್ಡಮರದ ತುಂಡಿನ ಆಕಾರದಲ್ಲಿ ಕಪ್ಪತ್ತಗುಡ್ಡದಲ್ಲಿ ಪ್ರವೇಶದ ಜಾಗದಲ್ಲಿ ಟಿಕೆಟ್ ಕೌಂಟರ್ ನಿರ್ಮಾಣ ಮಾಡಲಾಗಿದೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.ಹಸ್ತಪ್ರತಿಜ್ಞೆ: ಡೋಣಿ ಗ್ರಾಮದ ಪ್ರವೇಶ ದ್ವಾರದಲ್ಲಿರುವ ಟಿಕೆಟ್ ಕೌಂಟರ್ ಬಳಿ ಪ್ರವಾಸಿಗರಿಗೆ ಪರಿಸರಸ್ನೇಹಿ ಬಣ್ಣವನ್ನು ಕೈಗೆ ಹಚ್ಚಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆ ಬಣ್ಣದ ಕೈಯನ್ನು ಅಲ್ಲಿಯೇ ಪಕ್ಕದಲ್ಲಿ ಅರಣ್ಯ ಇಲಾಖೆಯಿಂದ ಅಳವಡಿಸಲಾದ ಬೋರ್ಡ್ ಮೇಲೆ ಒತ್ತಿ ತಮ್ಮ ಗುರುತನ್ನು ಮೂಡಿಸಬೇಕು. ನಂತರ ಬೋರ್ಡ್‌ಲ್ಲಿರುವ ಕ್ಯು ಆರ್ ಕೋಡ್ ಸ್ಕ್ಯಾನ್ ಮಾಡಿ ತಮ್ಮ ವಿವರಗಳನ್ನು ಅಪ್‌ಲೋಡ್ ಮಾಡಿದ ತಕ್ಷಣ, ಅವರ ಹೆಸರಿನಲ್ಲಿರುವ ಪ್ರಮಾಣಪತ್ರವು ಅವರ ಮೊಬೈಲ್‌ಗೆ ಬರುತ್ತದೆ. ಈ ಪ್ರಮಾಣಪತ್ರದಲ್ಲಿ ಕಪ್ಪತ್ತಗುಡ್ಡದ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣಕ್ಕೆ ಸಹಕರಿಸುವ ಪ್ರತಿಜ್ಞೆ ಇರುತ್ತದೆ.
ನಮ್ಮ ಕಪ್ಪತ್ತಗುಡ್ಡ: ಇಲ್ಲಿ ಅಳವಡಿಸಲಾಗಿರುವ ನಮ್ಮ ಪ್ರೀತಿಯ ಕಪ್ಪತ್ತಗುಡ್ಡದ ಲೋಗೊ ಮುಂದೆ ತಮ್ಮ ಮೊಬೈಲ್‌ನಲ್ಲಿ ಪ್ರವಾಸಿಗರು ಫೋಟೋ ಕ್ಲಿಕ್ಕಿಸಿಕೊಳ್ಳಲು ನೆಚ್ಚಿನ ತಾಣವಾಗಿದೆ. ಇಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಪ್ಪತ್ತಗುಡ್ಡದ ಲೋಗೊವನ್ನು ಹಂಚಿಕೊಳ್ಳುತ್ತಿರುವ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ.
ಮಾರ್ಗ ಫಲಕಗಳು: ಪ್ರವಾಸಿಗರು ಸರಿದಾರಿಯ ಮೂಲಕ ಕಪ್ಪತ್ತಗುಡ್ಡಕ್ಕೆ ತಲುಪಬೇಕು ಎನ್ನುವ ಹಿನ್ನೆಲೆ ಗುಡ್ಡದ ಸಮೀಪದ ಪ್ರತಿ ಮುಖ್ಯರಸ್ತೆ ಮತ್ತು ಗ್ರಾಮೀಣ ಭಾಗಗಳಲ್ಲಿ ಕಪ್ಪತ್ತಗುಡ್ಡಕ್ಕೆ ತೆರಳುವ ವಿವಿಧ ಪ್ರಾಣಿಗಳ ಚಿತ್ರವಿನ್ಯಾಸವಿರುವ ಮಾರ್ಗಫಲಕಗಳನ್ನು ಬಹಳ ಸುಂದರವಾಗಿ ನಿರ್ಮಿಸಲಾಗಿದೆ.