ಶಿರಸಿ: ಬನವಾಸಿ ಹಾಗೂ ಗೋಕರ್ಣವನ್ನು ಕೇಂದ್ರೀಕರಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅಗತ್ಯ ಪ್ರಸ್ತಾವನೆ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಚರ್ಚಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ವಿಶ್ವಕರ್ಮ ಚಿಕ್ಕ ಸಮಾಜವಾಗಿದ್ದು, ಸಂಘಟನೆ ಬಲಿಷ್ಠವಾಗಬೇಕಿದೆ. ಆಗ ಆಗ್ರಹಪೂರ್ವವಾಗಿ ನಮಗೆ ದೊರೆಯಬೇಕಾದ ಹಕ್ಕನ್ನು ಪಡೆಯಬಹುದು. ಸಮಾಜ ವೈವಿಧ್ಯಮಯ ಹಾಗೂ ವೈಶಿಷ್ಟಪೂರ್ಣವಾಗಿದ್ದು, ಜ್ಞಾನ, ಕೌಶಲ್ಯ, ತ್ಯಾಗ, ಶೌರ್ಯವನ್ನು ಪರಿಗಣಿಸಿದ್ದೇವೆ. ಶಿಲ್ಪಕಲೆಯಲ್ಲಿ ಅದ್ಭುತ ಸಾಧನೆ ಮಾಡಿದ ಜಕಣಾಚಾರ್ಯರು ನಮಗೆ ಪ್ರೇರಣೆ. ಕೌಶಲ್ಯ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಕರ್ಮಕರನ್ನು ರಾಷ್ಟ್ರ ನಿರ್ಮಾಣದ ಶಿಲ್ಪಿ ಎಂಬುದಾಗಿ ಉಲ್ಲೇಖಿಸಿದ್ದಾರೆ. ಗುರುತಿಸುವಿಕೆ ಜತೆಯಲ್ಲಿ ವಿಶ್ವಸಮುದಾಯದ ಜೀವನದ ಏಳ್ಗೆಗೆ ಯೋಜನೆ ರೂಪಿಸಿದ್ದಾರೆ. ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಯುವ ಸಮುದಾಯಲ್ಲಿ ಕೌಶಲ್ಯ ಬೆಳೆಸುವ ಪ್ರಯತ್ನ ಮಾಡಲಾಗಿದೆ. ಜಿಲ್ಲೆಯಲ್ಲಿ 5 ಸಾವಿರ ಜನರಿಗೆ ಬೇರೆ ಬೇರೆ ವಿಭಾಗದಲ್ಲಿ ತರಬೇತಿ ನೀಡಲಾಗಿದೆ. ಸಾಲ ಸೌಲಭ್ಯದ ವ್ಯವಸ್ಥೆ ನೀಡಲಾಗುತ್ತಿದೆ ಎಂದರು.
ಶಿರಸಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಗೋಕರ್ಣದ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನದ ಅಧ್ಯಕ್ಷ ಮಧುಕರ ಆಚಾರ್ಯ, ಬನವಾಸಿ ಗ್ರಾಪಂ ಅಧ್ಯಕ್ಷೆ ಬಿಬಿ ಆಯಿಷಾ ಖಾನ್, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ರಜತಕುಮಾರ ಹಬ್ಬು, ಗ್ರಾಪಂ ಸದಸ್ಯ ಶಿವಕುಮಾರ, ಮುಖಂಡ ರಮೇಶ ನಾಯ್ಕ ಕುಪ್ಪಳ್ಳಿ ಮತ್ತಿತರರು ಉಪಸ್ಥಿತರಿದ್ದರು. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತುದಾರ ಪ್ರಶಾಂತ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು. ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.