ಕೊಪ್ಪಳ ಜಿಲ್ಲೆಗೆ ಪ್ರವಾಸಿಗರು ಬಂದರೂ ಮೂಲ ಸೌಕರ್ಯವಿಲ್ಲ

KannadaprabhaNewsNetwork |  
Published : Sep 04, 2025, 01:01 AM IST
3ಕೆಪಿಎಲ್31 ಹೇಮಲತಾ ನಾಯಕ | Kannada Prabha

ಸಾರಾಂಶ

2024ರಲ್ಲಿಯೇ ಜಿಲ್ಲೆಯ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ 53.43 ಲಕ್ಷ ಪ್ರವಾಸಿಗರು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯೇ ತಿಳಿಸಿದೆ. ಆದರೆ, ಇಲ್ಲಿರುವ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೆ ಪ್ರವಾಸಿಗರು ಪರದಾಡುತ್ತಿದ್ದಾರೆ.

ಕೊಪ್ಪಳ:

ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ಪ್ರವಾಸಿ ತಾಣಗಳಿಗೆ ಲಕ್ಷ ಲಕ್ಷ ಪ್ರವಾಸಿಗರು ಆಗಮಿಸುತ್ತಿದ್ದರೂ ಸಹ ಮೂಲಭೂತ ಸೌಕರ್ಯ ಶೋಚನೀಯವಾಗಿದೆ ಎಂದು ವಿಪ ಸದಸ್ಯೆ ಹೇಮಲತಾ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2024ರಲ್ಲಿಯೇ ಜಿಲ್ಲೆಯ ವಿವಿಧ ಧಾರ್ಮಿಕ ಮತ್ತು ಐತಿಹಾಸಿಕ ಕ್ಷೇತ್ರಗಳಿಗೆ 53.43 ಲಕ್ಷ ಪ್ರವಾಸಿಗರು ಬಂದಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯೇ ತಿಳಿಸಿದೆ. ಆದರೆ, ಇಲ್ಲಿರುವ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯ ಇಲ್ಲದೆ ಪ್ರವಾಸಿಗರು ಪರದಾಡುತ್ತಿದ್ದಾರೆ. ೨೦೨೨ರಲ್ಲಿ ೪೫ ಲಕ್ಷ ದೇಶೀಯ ಹಾಗೂ ೯,೮೦೦ ವಿದೇಶಿ, ೨೦೨೩-೨೪ರಲ್ಲಿ ೪೯.50 ಲಕ್ಷ ದೇಶೀಯ, ೫,೭೦೦ ವಿದೇಶಿಗರು, ೨೦೨೪ ರಲ್ಲಿ ೫೪.43 ಲಕ್ಷ ದೇಶೀಯರು ಮತ್ತು ೪೭,೫೦೦ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಜಿಲ್ಲೆಗೆ ಇಷ್ಟು ಪ್ರವಾಸಿಗರೂ ಆಗಮಿಸಿದರೂ ಅವರಿಗೆ ಮೂಲಭೂತ ಸೌಲಭ್ಯ ಕಲ್ಪಿಸದೆ ಇರುವುದು ಸರ್ಕಾರದ ಕಾರ್ಯವೈಖರಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ೨೦೨೦ರ ಆಯವ್ಯಯದಲ್ಲಿ ಬಿಜೆಪಿ ಸರ್ಕಾರ ₹ ೨೦ ಕೋಟಿ ಘೋಷಿಸಿತ್ತು. ನಂತರ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ₹ ೧೦೦ ಕೋಟಿ ಮಂಜೂರು ಮಾಡಿ ಭೂಸ್ವಾಧೀನ ಪ್ರಕ್ರಿಯೆಗೂ ಚಾಲನೆ ನೀಡಿತ್ತು. ೨೦೨೩ರಲ್ಲಿ ₹ ೧೦೦ ಕೋಟಿ ಪೈಕಿ ಮೊದಲನೆ ಹಂತದಲ್ಲಿ ₹ ೨೧.೦೦ ಕೋಟಿ ಅಂದಾಜು ಮೊತ್ತದ ಡಾರ್ಮಿಟರಿ ಬ್ಲಾಕ್, ಸಾರ್ವಜನಿಕ ಶೌಚಾಲಯ, ಪ್ರದಕ್ಷಿಣಾ ಪಥ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿ ೩ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಬಸವರಾಜ ಬೊಮ್ಮಾಯಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಇದರ ಭಾಗವಾಗಿ ಗುತ್ತಿಗೆದಾರರಿಗೆ ₹ 10 ಕೋಟಿ ಬಿಡುಗಡೆಯಾಗಿದೆ. ಆದರೆ, ಈಗಿನ ಸರ್ಕಾರ ಅನುದಾನ ನೀಡದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ಡಿ. ೩ರಂದು ಹನುಮಮಾಲಾ ಕಾರ್ಯಕ್ರಮದ ನಿಮಿತ್ತ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಲಕ್ಷ್ಯಾಂತರ ಭಕ್ತರು ಹನುಮಮಾಲಾ ವಿಸರ್ಜನೆಗೆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ವೇಳೆ ಅವರಿಗೆ ವಾಸ, ಸ್ನಾನ ಹಾಗೂ ಇತರೆ ಕಾರ್ಯಗಳಿಗೆ ವ್ಯವಸ್ಥೆ ಇಲ್ಲದೆ ತೊಂದರೆಯಾಗಲಿದೆ. ಆದರಿಂದ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಯನ್ನು ಅಷ್ಟರೊಳಗೆ ಪೂರ್ಣಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

PREV

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ