ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಜೋಗ ಜಲಪಾತಕ್ಕೆ ಜೀವಕಳೆ । ಜಲಪಾತದ ವೈಭವ ಕಣ್ತುಂಬಿಕೊಂಡ ಪ್ರವಾಸಗರು
----
ಕನ್ನಡಪ್ರಭವಾರ್ತೆ ಸಾಗರ
ವಾರಾಂತ್ಯ ರಜಾ ದಿನವಾದ ಭಾನುವಾರ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಗರ ದಂಡೇ ಹರಿದು ಬಂದಿತ್ತು.
ಮೋಡ, ಮಳೆ, ಬಿಸಿಲಿನ ಕಣ್ಣುಮುಚ್ಚಾಲೆಯ ನಡುವೆ ಆಗಾಗ ಜಲಪಾತ ತೆರೆದುಕೊಂಡಾಗ ಪ್ರವಾಸಿಗರ ಹರ್ಷೋದ್ಘಾರ ಮುಗಿಲುಮುಟ್ಟುತ್ತಿತ್ತು.
ಕಳೆದ ೧೦ ದಿನಗಳಿಂದ ಶರಾವತಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾದ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಜೀವಕಳೆ ಬಂದಿತ್ತು. ಹಾಗಾಗಿ ಜಲಪಾತ ವೀಕ್ಷಣೆಗೆ ಶನಿವಾರ, ಭಾನುವಾರ ಬೇರೆ ಬೇರೆ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ಜಲಪಾತ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳಲು ಪ್ರವಾಸಿಗರು ಬಹುದೂರದವರೆಗೆ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂತು. ಪ್ರವಾಸಿ ವಾಹನಗಳ ದಟ್ಟಣೆಯಿಂದ ಆಗಾಗ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು.
ಮುದ ನೀಡಿದ ಕನ್ನಡ ಗೀತೆಗಳು: ಭೋರ್ಗರೆಯುವ ಜಲಪಾತದ ಸದ್ದಿನ ಜೊತೆ ಜೊತೆಗೆ ಕಲಾತಂಡ ಶಿವಮೊಗ್ಗ ಇವರು ಹಾಡಿದ ಸುಮಧುರ ಕನ್ನಡ ಗೀತೆಗಳು ಬಂದಿದ್ದ ಸಾವಿರಾರು ಪ್ರವಾಸಿಗರಿಗೆ ಮುದ ನೀಡಿತು. ಕೇವಲ ಜಲಪಾತ ನೋಡಿ ಹೋಗುತ್ತಿದ್ದ ಪ್ರವಾಸಿಗರಿಗೆ ವಿಭಿನ್ನವಾದ ಏನನ್ನಾದರೂ ನೀಡಬೇಕೆಂಬ ಅಭಿಲಾಷೆಯೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜೋಗ ನಿರ್ವಹಣಾ ಪ್ರಾಧಿಕಾರ ಜೊತೆಗೂಡಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶಿವಮೊಗ್ಗದ ಕಲಾತಂಡದ ಸದಸ್ಯರು ಜೋಗ ಜಲಪಾತ ವೀಕ್ಷಣಾ ಸ್ಥಳದಲ್ಲಿ ೨ ಗಂಟೆಗಳಿಗೂ ಹೆಚ್ಚು ಕಾಲ ಕನ್ನಡದ ಸುಮಧುರ ಗೀತೆಗಳನ್ನು ಹಾಡಿ ನೆರೆದಿದ್ದ ಪ್ರವಾಸಿಗರನ್ನು ರಂಜಿಸಿದರು.
ಶಿಕಾರಿಪುರದ ಡೊಳ್ಳು ಕುಣಿತದ ತಂಡವು ತಮ್ಮ ಡೊಳ್ಳು ಸದ್ದಿನೊಂದಿಗೆ ಪ್ರದರ್ಶಿಸಿದ ಆಕರ್ಷಕ ನೃತ್ಯ ನೆರೆದಿದ್ದ ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಆಗಾಗ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ಪ್ರವಾಸಿಗರು ಕಲಾತಂಡವು ಪ್ರಸ್ತುತಪಡಿಸಿದ ಗಾಯನವನ್ನು ತನ್ಮಯರಾಗಿ ಕೇಳುತ್ತಾ ನಿಂತಿದ್ದು ಕಂಡುಬಂತು.
ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ವರನಟ ಡಾ.ರಾಜಕುಮಾರ್ ಅವರ ಹಾಡಿಗೆ ಜಲಪಾತ ನೋಡಲು ಆಗಮಿಸಿದ್ದ ಯುವಕ ಯುವತಿಯರು ಹೆಜ್ಜೆ ಹಾಕಿ ಕುಣಿದದ್ದು ವಿಶೇಷವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜೋಗ ನಿರ್ವಹಣಾ ಪ್ರಾಧಿಕಾರದ ನಡೆಯನ್ನು ಪ್ರವಾಸಿಗರು ಮುಕ್ತ ಕಂಠದಿಂದ ಪ್ರಶಂಸಿಸಿದರು. ಪ್ರತಿ ವಾರವು ಇಂತಹ ಒಂದು ಕಾರ್ಯಕ್ರಮ ಆಯೋಜಿಸಿದರೆ ಪ್ರವಾಸಿಗರಿಗೂ ಮನರಂಜನೆ ದೊರಕುತ್ತದೆ ಎಂದು ಅನೇಕರು ಹೇಳಿದರು.
ಜೋಗವಲ್ಲದೆ ತಾಲೂಕಿನ ಸಿಗಂದೂರು, ವರದಹಳ್ಳಿ ಶ್ರೀಧರಾಶ್ರಮ ಮತ್ತಿತರ ಪ್ರವಾಸಿ ತಾಣಗಳಿಗೂ ಸಾವಿರಾರು ಪ್ರವಾಸಿಗರು ಭೇಟಿ ನೀಡಿದ್ದರು. ಸಿಗಂದೂರು ಮಾರ್ಗದಲ್ಲಿ ಸಿಗುವ ಶರಾವತಿ ಹಿನ್ನೀರಿಗೆ ಕಟ್ಟಲಾದ ತುಮರಿ ಸೇತುವೆಯ ವೈಭವ ನೋಡಿ ಪ್ರವಾಸಿಗರು ಬೆರಗಾದರು. ಸೇತುವೆ ಮೇಲೆ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸೇತುವೆ ಮೇಲಿಂದ ಕಾಣುವ ಪ್ರಕೃತಿಯ ರಮ್ಯತೆ ಪ್ರವಾಸಿಗರನ್ನು ಆಕರ್ಷಿಸಿತು. ಕಣ್ಣು ಹಾಯಿಸಿದಷ್ಟು ಕಾಣುವ ಶರಾವತಿ ಹಿನ್ನೀರಿನ ವೈಭವಕ್ಕೆ ಮನಸೋತರು. ಒಟ್ಟಿನಲ್ಲಿ ಶನಿವಾರ, ಭಾನುವಾರ ತಾಲೂಕಿನ ಪ್ರವಾಸಿ ತಾಣಗಳು ಜನರಿಂದ ತುಂಬಿಕೊಂಡಿತ್ತು.
ಫೋಟೊ
೯ಕೆ.ಎಸ್.ಎ.ಜಿ.೧
ಫೋಟೊ
ಭಾನುವಾರ ಕಂಡು ಬಂದ ವಿಶ್ವವಿಖ್ಯಾತ ಜೋಗ ಜಲಪಾತದ ವೈಭವ
ಫೋಟೊ
೯ಕೆ.ಎಸ್.ಎ.ಜಿ.೨
ಭಾನುವಾರ ಜೋಗ ಜಲಪಾತದ ವೀಕ್ಷಣಾ ಸ್ಥಳದಲ್ಲಿ ಶಿವಮೊಗ್ಗದ ಕಲಾತಂಡದ ಸದಸ್ಯರು ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.