ಜಮ್ಮು ಕಾಶ್ಮೀರಕ್ಕೆ ತೆರಳಿದ್ದ ಹಾವೇರಿ ಜಿಲ್ಲೆಯ ಪ್ರವಾಸಿಗರು ಸುರಕ್ಷಿತ

KannadaprabhaNewsNetwork | Published : Apr 24, 2025 12:01 AM

ಸಾರಾಂಶ

ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಹಾವೇರಿಯ ವೀರೇಶ ದಂಪತಿ ಹಾಗೂ ಶಿಗ್ಗಾಂವಿಯ ನಾಗರಾಜ್ ದಂಪತಿಯ ಕುಟುಂಬದವರು ಸುರಕ್ಷಿತವಾಗಿದ್ದಾರೆ.

ಹಾವೇರಿ: ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ಭಯೋತ್ಪಾದರು ನಡೆಸಿದ ಗುಂಡಿನ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಇದೇ ವೇಳೆ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಜಿಲ್ಲೆಯ ಎರಡು ಕುಟುಂಬಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿದೆ.ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದ ಪ್ರವಾಸದಲ್ಲಿರುವ ಹಾವೇರಿಯ ವೀರೇಶ ದಂಪತಿ ಹಾಗೂ ಶಿಗ್ಗಾಂವಿಯ ನಾಗರಾಜ್ ದಂಪತಿಯ ಕುಟುಂಬದವರು ಸುರಕ್ಷಿತವಾಗಿದ್ದಾರೆ. ಸದ್ಯ ಜಮ್ಮುವಿನ ವೈಷ್ಣೋದೇವಿ ದೇವಸ್ಥಾನದ ಸಮೀಪದ ಕತ್ರಾದಲ್ಲಿರುವ ಇವರು, ತಾವೆಲ್ಲಾ ಸುರಕ್ಷಿತವಾಗಿ ಇರುವುದಾಗಿ ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.ಹಾವೇರಿಯ ಈ ಪ್ರವಾಸಿಗರ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಸಂಬಂಧಿಕರು ಆತಂಕದಲ್ಲಿದ್ದರು. ಇದೀಗ ಕರೆ ಮಾಡಿರುವ ಈ ಕುಟುಂಬಗಳು ತಾವು ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದರಿಂದ ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಎರಡು ಕುಟುಂಬಗಳಲ್ಲದೇ ಹಾವೇರಿ, ಶಿಗ್ಗಾಂವಿ ಮತ್ತು ಹಾನಗಲ್ಲ ತಾಲೂಕಿನಿಂದ ಒಟ್ಟು ೧೦೭ಜನರು ಶಿವಮೊಗ್ಗದ ಗುರುಶಾಂತವೀರ ಟ್ರಾವೆಲ್ ಏಜೆನ್ಸಿ ಮೂಲಕ ಕಾಶ್ಮೀರಕ್ಕೆ ಪ್ರಯಾಣಿಸಿದ್ದರು. ಈ ಎಲ್ಲರೂ ಕಾಶ್ಮೀರದ ಕಾಟ್ರಾದಲ್ಲಿ ಪ್ರವಾಸದಲ್ಲಿದ್ದು, ಪಹಲ್ಗಾಮ್‌ನ ಘಟನೆ ಬೆನ್ನಲ್ಲೇ ಪ್ರವಾಸ ಮೊಟಕುಗೊಳಿಸಿ ವಾಪಸಾಗುತ್ತಿದ್ದಾರೆ. ಇನ್ನೂ ೨- ೩ ದಿನಗಳ ಪ್ರವಾಸ ಇದ್ದು, ವಿಮಾನ ಮೂಲಕ ವಾಪಸ್ ಬರಲು ಬುಕ್ಕಿಂಗ್ ಕೂಡ ಆಗಿತ್ತು. ಆದರೆ ಭಯೋತ್ಪಾದಕರ ದಾಳಿ ಬೆನ್ನಲ್ಲೇ ಇದೀಗ ಕಾಟ್ರಾದಿಂದ ರಸ್ತೆ ಮೂಲಕ ಎರಡು ಬಸ್‌ಗಳಲ್ಲಿ ದೆಹಲಿಗೆ ಪ್ರಯಾಣ ಆರಂಭಿಸಿದ್ದು, ದೆಹಲಿಯಿಂದ ರಾಜ್ಯಕ್ಕೆ ವಾಪಾಸ್ ಬರಲಿದ್ದಾರೆ.

ನೆರವಿಗೆ ಸಿದ್ಧ: ಜಿಲ್ಲೆಯಿಂದ ಜಮ್ಮು ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದವರು ಅಲ್ಲಿ ಸಿಲುಕಿಕೊಂಡಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಇದುವರೆಗೆ ಯಾರು ಕೂಡ ಸಹಾಯ ಕೋರಿ ಸಂಪರ್ಕಿಸಿಲ್ಲ. ಜಮ್ಮು ಕಾಶ್ಮೀರಕ್ಕೆ ತೆರಳಿರುವ ಪ್ರವಾಸಿಗರು ನೆರವು ಕೋರಿದರೆ ಜಿಲ್ಲಾಡಳಿತ ನೆರವಿಗೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದರು.

Share this article