ಕನ್ನಡಪ್ರಭ ವಾರ್ತೆ ಮಂಗಳೂರು
ಕಾಶ್ಮೀರದಲ್ಲಿ ಹಿಂದು ಪ್ರವಾಸಿಗರನ್ನು ಉಗ್ರಗಾಮಿಗಳು ಹತ್ಯೆ ಮಾಡಿರುವ ಘಟನೆ ಖಂಡನೀಯ. ಇದಕ್ಕೆ ಸೂಕ್ತ ಉತ್ತರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೀಡಲಿದ್ದಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.ಕಾಶ್ಮೀರದ ಪ್ರವಾಸಿ ತಾಣದಲ್ಲಿ ಮಂಗಳವಾರ ಉಗ್ರಗಾಮಿಗಳು ಹಿಂದೂ ಪ್ರವಾಸಿಗರನ್ನು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಮಿನಿವಿಧಾನಸೌಧದ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಪ್ರವಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದ ಅಮಾಯಕ ಹಿಂದುಗಳನ್ನು ಅವರು ಹಿಂದುಗಳೆಂದು ಖಚಿತಪಡಿಸಿ ಹತ್ಯೆ ಮಾಡಿರುವ ಭಯೋತ್ಮಾದಕರ ಕೃತ್ಯವನ್ನು ದೇಶವಾಸಿಗಳೆಲ್ಲರೂ ಖಂಡಿಸಬೇಕಿದೆ. ಪಾಕಿಸ್ತಾನಕ್ಕೆ ಸೈನಿಕರನ್ನು ನುಗ್ಗಿಸಿ ಹೊಡೆಸುವ ತಾಕತ್ತು ಪ್ರಧಾನಿಯವರಿಗೆ ಇದೆ ಎಂದರು.ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ನವ ಭಾರತದ ಪ್ರಗತಿಯನ್ನು ಸಹಿಸದ ಜೆಹಾದಿ ಶಕ್ತಿಗಳನ್ನು ದೇಶವನ್ನು ಅಸ್ಥಿರಗೊಳಿಸಲು ಮಾಡಿದ ಕೃತ್ಯ ಇದಾಗಿದೆ. ಇದು ಸಮಸ್ತ ಹಿಂದೂ ಸಮಾಜ, ನಮ್ಮ ಅಸ್ಮಿತೆ ಮತ್ತು ಸಂಸ್ಕೃತಿಯ ಮೇಲೆ ನಡೆದ ದಾಳಿ. ಈ ಮಾನಸಿಕತೆಯ ವಿರುದ್ಧ ಇಡೀ ದೇಶ ಒಂದಾಗಿ ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಇಂತಹ ಮಾನಸಿಕತೆಗಳು ದೇಶದ ಎಲ್ಲೇ ಇದ್ದರೂ ಕೊನೆಯ ದಿನಗಳನ್ನು ಎಣಿಸಲು ಸಿದ್ಧರಾಗಿ ಎಂದರು.ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಹಿಂದೂಗಳಾಗಿ ನಮಗೆ ಇನ್ನೂ ಅರ್ಥವಾಗದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ‘ಜಾತಿ’ ಇಲ್ಲ ಎಂದು ಹೇಳುತ್ತಿದ್ದರು. ಆದರೆ ಕಾಶ್ಮೀರದಲ್ಲಿ ನಡೆದ ಘಟನೆ ಭಯೋತ್ಪಾದನೆಗೆ ಜಾತಿ ಇದೆ, ಹಿಂದೂಗಳ ವಿರುದ್ಧ ಮಾತ್ರ ಎಂದು ಅರಿವು ಮೂಡಿಸಿದೆ. ಹಿಂದೂಗಳು ಒಗ್ಗಟ್ಟಾಗಿದ್ದರೆ ಮಾತ್ರ ಜಿಹಾದಿ ಶಕ್ತಿಗಳು ಹೆದರಲು ಸಾಧ್ಯ ಎಂದರು.ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಅಂದಿನ ನಾಯಕರು ತಮ್ಮ ಪಟ್ಟ ಉಳಿಸಲು ಹಾಕಿದ ವಿಷ ಬೀಜ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರವಾಸಿಗರನ್ನು ಹತ್ಯೆ ಮಾಡುವಾಗ ನೀನು ಕಾಂಗ್ರೆಸ್‌ನ ಹಿಂದೂವೇ ಅಥವಾ ಬಿಜೆಪಿ ಹಿಂದೂವೇ ಎಂದು ಕೇಳಿಲ್ಲ. ಕಾಂಗ್ರೆಸ್‌ನಲ್ಲಿರುವ ಹಿಂದೂಗಳು ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮಾಜಿ ಸಚಿವ ನಾಗರಾಜ ಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಕ್ಯಾ. ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಪ್ರೇಮಾನಂದ ಶೆಟ್ಟಿ, ಸುಲೋಚನಾ ಭಟ್, ಪೂಜಾ ಪೈ, ಭಾಸ್ಕರ ಚಂದ್ರ ಶೆಟ್ಟಿ, ನಂದನ್ ಮಲ್ಯ, ರಮೇಶ್ ಕಂಡೆಟ್ಟು, ರಾಜಗೋಪಾಲ್ ರೈ, ರಾಜೇಶ್ ಕೊಟ್ಟಾರಿ, ಅರುಣ್ ಜಿ.ಶೇಟ್ ಮತ್ತಿತರರಿದ್ದರು.