ಗುತ್ತಿಗೆ ಏಜೆನ್ಸಿಗಳಿಂದಾಗುತ್ತಿರುವ ಶೋಷಣೆ ತಪ್ಪಿಸಿ

KannadaprabhaNewsNetwork | Published : Apr 24, 2025 12:01 AM

ಸಾರಾಂಶ

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಹಾಸ್ಟಲ್, ವಸತಿ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಏಜೆನ್ಸಿಗಳಿಂದ ಆಗುತ್ತಿರುವ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಬೀದರ್ ಮಾದರಿಯಲ್ಲಿ ಸೊಸೈಟಿ ನಿರ್ಮಾಣಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮೇಗೌಡ, ತುಮಕೂರು ಜಿಲ್ಲಾಧ್ಯಕ್ಷ ರವಿಕುಮಾರ್‌ ಅವರ ನೇತೃತ್ವದಲ್ಲಿ ನೂರಾರು ನೌಕರರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ,ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಹನುಮಂತೇಗೌಡ, ಮೊದಲಿಗೆ ನಾವು ಸರಕಾರಕ್ಕೆಅಭಿನಂದನೆ ಸಲ್ಲಿಸುತ್ತೇವೆ. ಹೊರಗುತ್ತಿಗೆ ನೌಕರರಿಗೆ ಕನಿಷ್ಠ 31 ಸಾವಿರ ವೇತನ ನೀಡಬೇಕೆಂದು ಸರಕಾರದ ಮೇಲೆ ಒತ್ತಡತಂದಿದ್ದು, ಸರಕಾರ ಏ.11 ರಂದು ಮಾಸಿಕ 25,714 ರೂಗಳಿಗೆ ಕನಿಷ್ಠ ವೇತನ ನಿಗದಿ ಪಡಿಸಿದೆ. ಇದಕ್ಕಾಗಿ ಸರಕಾರದ ಮುಖ್ಯಮಂತ್ರಿಗಳು,ಉಪಮುಖ್ಯ ಮಂತ್ರಿಗಳು ,ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಿಗೆ ಸಂಘ ಅಭಿನಂದನೆ ಸಲ್ಲಿಸುತ್ತದೆ.ಸರಕಾರದ ಮುಂದೆ ಎಲ್ಲಾ ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ, ಸೇವಾ ಭದ್ರತೆ ಒದಗಿಸಬೇಕು. ನಿವೃತ್ತಿಯವರೆಗೂ ಅವರನ್ನು ಕೆಲಸದಿಂದ ಬಿಡುಗಡೆ ಮಾಡಬಾರದು ಎಂಬುದು ನಮ್ಮಗಳ ಬೇಡಿಕೆಯಾಗಿದೆ. ಈ ಬಗ್ಗೆ ಸರಕಾರ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ಒತ್ತಾಯವಾಗಿದೆ ಎಂದರು.ಕರ್ನಾಟಕ ರಾಜ್ಯ ಸರಕಾರಿ ಹಾಸ್ಟಲ್, ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರವಿಕುಮಾರ್ ಮಾತನಾಡಿ, ಸರಕಾರ ನಮ್ಮ ಮನವಿಗೆ ಸ್ಪಂದಿಸಿ, ಹೊರಗುತ್ತಿಗೆ ನೌಕರರಿಗೆ 25,417 ರು ನಿಗದಿ ಮಾಡಿರುವುದು ಸ್ವಾಗತಾರ್ಹ. ಆದರೆ ಬೀದರ್ ಮಾದರಿಯ ಸೊಸೈಟಿ ಮಾಡುವಂತೆ ಕಳೆದ 6 ತಿಂಗಳ ಹಿಂದೆಯೇ ಸರಕಾರ ಆದೇಶ ಮಾಡಿದ್ದರೂ ಜಿಲ್ಲಾಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೊರಗುತ್ತಿಗೆ ನೌಕರರು ಜಿಲ್ಲಾಡಳಿತದ ಕಣ್ಣಿಗೆಕಾಣುತ್ತಿಲ್ಲವೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದೆ ಎಂದರು. ಆರು ತಿಂಗಳಲ್ಲಿ ಮೂರು ಬಾರಿ ಮನವಿ ಕೊಟ್ಟಿದ್ದರೂ ಸ್ಪಂದಿಸಿಲ್ಲ. ನಾವು ಕೊಟ್ಟ ಮನವಿಗಳನ್ನು ಎಲ್ಲಿಗೆ ಹಾಕುತ್ತಿದ್ದಾರೆ ಎಂಬುದೇ ತಿಳಿಯದಾಗಿದೆ. ಹಾಸ್ಟೆಲ್‌ಗಳಲ್ಲಿ ಹೊರಗುತ್ತಿಗೆಯಲ್ಲಿ ಲಕ್ಷಾಂತರ ಜನರು ದುಡಿಯುತ್ತಿದ್ದಾರೆ. ಬೇರೆ ಇಲಾಖೆಗಳ ಕಡೆಗೆ ಗಮನ ಹರಿಸಿ, ಖಾಯಂ ಮಾಡಲಾಗುತ್ತಿದೆ.ನೀಡುವ ಹಿರಿಯ ಅಧಿಕಾರಿಗಳು ಹಾಸ್ಟಲ್ ಹೊರಗುತ್ತಿಗೆ ನೌಕರರನ್ನು ಕಡೆಗಣಿಸುತ್ತಿದ್ದಾರೆ. ಬೀದರ ಮಾದರಿ ಸೊಸೈಟಿ ನಿರ್ಮಿಸುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು. ಈ ಸಂಬಂಧ ಮನವಿಯನ್ನುಜಿಲ್ಲಾಕಾರ್ಮಿಕ ಅಧಿಕಾರಿ ತೇಜಾವತಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್, ಎನ್.ಎಸ್, ಮುಖಂಡರಾದ ಹೇಮಂತ್, ಮಂಜುನಾಥ್, ಆನಂದ್, ಶಿವಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಜಿ.ಹೆಚ್.ರವಿಕುಮಾರ್, ಮಾರುತಿ.ಜಿ.ಹೆಚ್, ಗಂಗನರಸಯ್ಯ,ಶಿವಲಿಂಗಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Share this article