ವೀಕೆಂಡ್‌ನಲ್ಲೂ ಹಂಪಿಯತ್ತ ಸುಳಿಯದ ಪ್ರವಾಸಿಗರು!

KannadaprabhaNewsNetwork |  
Published : May 15, 2024, 01:30 AM IST
14ಎಚ್‌ಪಿಟಿ1- ಹಂಪಿ ವಿಜಯ ವಿಠ್ಠಲ ದೇವಾಲಯದ ಆವರಣದಲ್ಲಿರುವ ಕಲ್ಲಿನ ತೇರು ಸ್ಮಾರಕದ ಒಂದು ನೋಟ. | Kannada Prabha

ಸಾರಾಂಶ

ಈಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ಮಕ್ಕಳೊಂದಿಗೆ ವೀಕೆಂಡ್‌ನಲ್ಲಿ ಪಾಲಕರು ಹಂಪಿಗೆ ಭೇಟಿ ನೀಡುತ್ತಿಲ್ಲ. ಒಂದೆರಡು ಬಾರಿ ಮಳೆ ಸುರಿದರೂ ಹಂಪಿಯತ್ತ ಮಾತ್ರ ಪ್ರವಾಸಿಗರು ಸುಳಿಯುತ್ತಿಲ್ಲ.

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿಗೆ ವೀಕೆಂಡ್‌ನಲ್ಲೂ ದೇಶ, ವಿದೇಶಿ ಪ್ರವಾಸಿಗರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪ್ರವಾಸೋದ್ಯಮ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದವರಿಗೂ ಉದ್ಯೋಗ ಇಲ್ಲದಂತಾಗಿದೆ.

ಹಂಪಿಯಲ್ಲಿ ಒಂದು ಕಡೆ ಭಾರೀ ಬಿಸಿಲು ಏರಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಇಲ್ಲದಂತಾಗಿದ್ದಾರೆ.

ಈಗ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ಮಕ್ಕಳೊಂದಿಗೆ ವೀಕೆಂಡ್‌ನಲ್ಲಿ ಪಾಲಕರು ಹಂಪಿಗೆ ಭೇಟಿ ನೀಡುತ್ತಿಲ್ಲ. ಒಂದೆರಡು ಬಾರಿ ಮಳೆ ಸುರಿದರೂ ಹಂಪಿಯತ್ತ ಮಾತ್ರ ಪ್ರವಾಸಿಗರು ಸುಳಿಯುತ್ತಿಲ್ಲ. ಇದರಿಂದ ಪ್ರವಾಸಿ ಮಾರ್ಗದರ್ಶಿಗಳು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ಸಣ್ಣ ಪುಟ್ಟ ಅಂಗಡಿ ಹೊಂದಿದವರ ದಿನ ನಿತ್ಯದ ಬದುಕಿಗೂ ತೊಡಕಾಗಿ ಪರಿಣಮಿಸಿದೆ. ಇನ್ನೂ ರೆಸಾರ್ಟ್‌ ಹಾಗೂ ಹೋಟೆಲ್‌ಗಳಲ್ಲೂ ಪ್ರವಾಸಿಗರು ಇಲ್ಲದೇ ರೂಮ್‌ಗಳು ಖಾಲಿ ಬೀಳುತ್ತಿವೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ.

ವೀಕೆಂಡ್‌ನಲ್ಲಿ ಶನಿವಾರ ಹಾಗೂ ಭಾನುವಾರವೇ 60 ಸಾವಿರದಿಂದ ಒಂದು ಲಕ್ಷದ ವರೆಗೆ ಪ್ರವಾಸಿಗರು ಹಂಪಿ ಸ್ಮಾರಕಗಳ ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ, ಈಗ ಬಿಸಿಲಿನ ತಾಪಮಾನದಿಂದಾಗಿ ಹಂಪಿಯತ್ತ ಪ್ರವಾಸಿಗರೇ ಸುಳಿಯುತ್ತಿಲ್ಲ. ಇದರಿಂದ ಹಂಪಿ ಸ್ಮಾರಕಗಳು ಕೂಡ ಭಣಗುಡಲಾರಂಭಿಸಿವೆ. ಹಂಪಿಯ ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಸದಾ ಪ್ರವಾಸಿಗರು ಓಡಾಡುತ್ತಿದ್ದರು. ಆದರೆ, ಈಗ ಪ್ರವಾಸಿಗರು ಇಲ್ಲದೇ ಸ್ಮಾರಕಗಳು ಬಿಕೋ ಎನ್ನುತ್ತಿವೆ.

ಆರ್ಥಿಕ ಸಂಕಷ್ಟ

ದೇಶ, ವಿದೇಶಿಯರ ಭೇಟಿಯಿಂದ ಹಂಪಿಯಲ್ಲಿ ವ್ಯಾಪಾರ, ವಹಿವಾಟು ನಡೆಯುತ್ತದೆ. ಪ್ರವಾಸಿಗರ ಸಂಖ್ಯೆ ಕ್ಷೀಣವಾಗುತ್ತಿದ್ದಂತೆ ಹಂಪಿ ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹೂ, ಹಣ್ಣು, ಕಾಯಿ ವ್ಯಾಪಾರಸ್ಥರು, ಗೂಡಂಗಡಿಯಲ್ಲಿ ಟೀ, ಟಿಫಿನ್ ಹೋಟೆಲ್ ವ್ಯಾಪಾರಸ್ಥರು, ಎಳನೀರು, ಬಾಳೆಹಣ್ಣು, ಮಾರಾಟ ಮಾಡುವವರು ಸೇರಿದಂತೆ ಸ್ಥಳೀಯ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

ಹಂಪಿ ತುಂಗಭದ್ರಾ ನದಿ ತೀರ, ಗ್ರಾಮ ಪಂಚಾಯ್ತಿ ಎದುರು ಪಾರ್ಕಿಂಗ್ ಜಾಗ, ಹೇಮಕೂಟದ ಬಳಿ, ಉಗ್ರ ನರಸಿಂಹ ದೇವಾಲಯದ ಎದುರಿನ ರಸ್ತೆ, ಪ್ರವಾಸೋದ್ಯಮ ಕಚೇರಿ ಬಳಿ, ವಿಜಯ ವಿಠಲ ದೇವಾಲಯ ಸೇರಿದಂತೆ ವಿವಿಧೆಡೆ ಸಣ್ಣ-ಪುಟ್ಟ ಅಂಗಡಿ ಹಾಗೂ ತಳ್ಳುಬಂಡಿಗಳಲ್ಲಿ ವ್ಯಾಪಾರ ನಡೆಸಿ, ಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು ಈಗ ತೊಂದರೆ ಅನುಭವಿಸುತ್ತಿದ್ದಾರೆ.

ಖಾಲಿ ಖಾಲಿ

ಹೊಸಪೇಟೆ, ಕಮಲಾಪುರ ಹಾಗೂ ಹಂಪಿ ಸುತಮುತ್ತ ಇರುವ ಲಾಡ್ಜ್-ಹೋಟೆಲ್‌ಗಳ ಕೊಠಡಿಗಳು, ಪ್ರವಾಸಿಗರಿಲ್ಲದೇ ಖಾಲಿ, ಖಾಲಿಯಾಗಿವೆ. ಆನ್‌ಲೈನ್‌ನಲ್ಲಿ ರೂಮ್ ಬುಕ್ ಆಗುವುದು ಕಡಿಮೆಯಾಗಿದೆ. ಇದರಿಂದ ಹೋಟೆಲ್‌ ಉದ್ಯಮ ಕೂಡ ಅಷ್ಟಕಷ್ಟೇ ಆಗಿದೆ.

ಹಂಪಿಯ ಸಾಸಿವೆಕಾಳು ಗಣಪತಿ, ಕಡಲೆಕಾಳು ಗಣಪತಿ, ಶ್ರೀಕೃಷ್ಣ ದೇವಾಲಯ, ಉಗ್ರ ನರಸಿಂಹ, ಬಡವಿ ಲಿಂಗ, ನೆಲಸ್ತರದ ಶಿವಾಲಯ, ಹಜಾರರಾಮ ದೇಗುಲ, ಮಹಾನವಮಿ ದಿಬ್ಬ, ಪುಷ್ಕರಣಿ, ರಾಣಿ ಸ್ನಾನ ಗೃಹ, ಕಮಲ ಮಹಲ್, ಗಜಶಾಲೆ, ಪುರಂದರ ದಾಸರ ಮಂಟಪ, ಸುಗ್ರೀವ ಗುಹೆ, ವಿಜಯವಿಠಲ ದೇವಾಲಯ, ಹಜಾರ ರಾಮ ದೇವಾಲಯ ಸ್ಮಾರಕಗಳು ಪ್ರವಾಸಿಗರಿಲ್ಲದೇ ಭಣಗುಡಲಾರಂಭಿಸಿವೆ. ಹಂಪಿಯಲ್ಲಿ ಈಗ ಪ್ರವಾಸಿಗರಿಲ್ಲದೇ ಸ್ಮಾರಕಗಳು ಬೀಕೋ ಎನ್ನುತ್ತಿವೆ. ಮಳೆಗಾಲ ಆರಂಭಗೊಂಡರೆ ಪ್ರವಾಸಿಗರು ಬರಬಹುದು ಎಂಬ ಲೆಕ್ಕಾಚಾರದಲ್ಲಿ ಪ್ರವಾಸಿ ಗೈಡ್‌ಗಳಿದ್ದಾರೆ.ತೊಂದರೆ

ಈ ಬಾರಿ ಹಂಪಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿಲ್ಲ. ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ಪ್ರವಾಸಿ ಮಾರ್ಗದರ್ಶಿಗಳು ಸೇರಿದಂತೆ ಪ್ರವಾಸೋದ್ಯಮ ನೆಚ್ಚಿಕೊಂಡವರಿಗೆ ತೊಂದರೆಯಾಗಿದೆ.

ವಿರೂಪಾಕ್ಷಿ, ಹಂಪಿ ಪ್ರವಾಸಿ ಮಾರ್ಗದರ್ಶಿ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ