ಆಗಸದಿಂದ ಹಂಪಿ ನೋಡಿ ಅಬ್ಬಾ ಎಂದ ಪ್ರವಾಸಿಗರು!

KannadaprabhaNewsNetwork |  
Published : Feb 03, 2024, 01:53 AM IST
ಬೈಸ್ಕೈ ನಲ್ಲಿ ಹಾರಿದ ರೈತ ದಂಪತಿಗಳು  | Kannada Prabha

ಸಾರಾಂಶ

ಆಗಸದಿಂದ ಹಂಪಿಯನ್ನು ವೀಕ್ಷಿಸುವ ಉದ್ದೇಶದಿಂದಾಗಿ ಹಮ್ಮಿಕೊಳ್ಳಲಾಗಿರುವ ಹಂಪಿ ಬೈಸ್ಕೈ ತೆರಳುವ ಜನರ ಪ್ರಮಾಣ ತೀರಾ ಕಡಿಮೆ ಇದ್ದುದರಿಂದ ವ್ಯವಸ್ಥಾಪಕರು ಬೇಸರ ವ್ಯಕ್ತ ಪಡಿಸಿದರು

ಬಿ.ಎಚ್.ಎಂ. ಅಮರನಾಥಶಾಸ್ತ್ರಿ ಹಂಪಿ

ವಿಶ್ವವಿಖ್ಯಾತ ಹಂಪಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಬೈ ಸ್ಕೈ ಮೂಲಕ ಪ್ರವಾಸಿಗರು ಹಂಪಿಯ ಸೌಂದರ್ಯವನ್ನು ಸವಿಯುವ ಮೂಲಕ ಹರ್ಷ ವ್ಯಕ್ತಪಡಿಸಿದರು.

ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ ಆವರಣದಲ್ಲಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಗಸದಿಂದ ಹಂಪಿಯ ಸೊಬಗನ್ನು ಸವಿಯಲು ಅನುಕೂಲವಾಗುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಬೈ ಸ್ಕೈಗೆ ಗುರುವಾರ ವಿಧ್ಯುಕ್ತ ಚಾಲನೆ ದೊರೆತಿದೆ. 8 ನಿಮಿಷಗಳ ಕಾಲ ಹಾರಾಟಕ್ಕೆ ₹4300 ಟಿಕೇಟ್ ದರವನ್ನು ನಿಗದಿಪಡಿಸಲಾಗಿದೆ. ಇನ್ನು ಬೈಸ್ಕೈ ಆರಂಭಗೊಂಡ ಎರಡನೇ ದಿನವಾದ ಶುಕ್ರವಾರ ಹೊಸಪೇಟೆ ಸೇರಿದಂತೆ ಇತರೆಡೆಗಳಿಂದ ಹಂಪಿಗೆ ಆಗಮಿಸಿದ್ದ ಪ್ರವಾಸಿಗರು ಬೈಸ್ಕೈನಲ್ಲಿ ತೆರಳುವ ಮೂಲಕ ಹಂಪಿಯ ಸ್ಮಾರಕಗಳು, ತುಂಗಾಭದ್ರಾ ಜಲಾಶಯ ಸೇರಿದಂತೆ ಹಂಪಿಯ ಪ್ರಾಕೃತಿಕ ಸೊಬಗನ್ನು ಸವಿಯುವ ಮೂಲಕ ಪುಳಕಿತಗೊಂಡರು.

ಬೈಸ್ಕೈನಲ್ಲಿ ರೈತ ದಂಪತಿ: ಹಂಪಿ ಉತ್ಸವಕ್ಕೆ ಆಗಮಿಸಿದ್ದ ಸಿರುಗುಪ್ಪ ಮೂಲದ ರೈತ ದಂಪತಿಗಳಾದ ಜಡೇಗೌಡ ಹಾಗೂ ಜೀವಿತ ಅವರು ಹೆಲಿಕಾಪ್ಟರ್‌ನಲ್ಲಿ ತೆರಳುವ ಮೂಲಕ ಆಗಸದಿಂದ ಹಂಪಿಯನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಸುಮಾರು 10 ವರ್ಷಗಳಿಂದ ನಾವು ಹಂಪಿ ಉತ್ಸವದ ವೀಕ್ಷಣೆಗೆ ಆಗಮಿಸುತ್ತಿದ್ದು, ಒಂದು ಬಾರಿಯಾದರೂ ಹೆಲಿಕಾಪ್ಟರ್‌ನಲ್ಲಿ ತೆರಳಿ ಆಗಸದಿಂದ ಹಂಪಿಯನ್ನು ವೀಕ್ಷಿಸಬೇಕೆಂಬ ಆಸೆಯನ್ನು ಇರಿಸಿದ್ದೆವು. ಅದರಂತೆ ಇಂದು ಆಕಾಶದಿಂದ ಹಂಪಿಯನ್ನು ವೀಕ್ಷಿಸಿದ್ದೇವೆ. ಪುಳಕಿತಗೊಂಡಿದ್ದೇವೆ. ಅಲ್ಲದೇ ಇದು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣವಾಗಿದೆ.

ಹಂಪಿ ಬೈ ಸ್ಕೈ ಯೋಜನೆಗೆ ₹4300 ದರ ನಿಗದಿಪಡಿಸಿದ್ದು, ಸಾಮಾನ್ಯ ಜನರಿಗೆ ನಮ್ಮಂಥ ರೈತರಿಗೆ ಇದು ಹೊರೆಯಾಗಲಿದೆ. ಕೈಗೆಟಕುವ ದರದಲ್ಲಿ ವ್ಯವಸ್ಥೆ ಕಲ್ಪಿಸಿದಲ್ಲಿ ತುಂಬಾ ಜನರಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂತಸಪಟ್ಟ ಮಕ್ಕಳು: ಯಾದಗಿರಿ ಜಿಲ್ಲೆಯ ಸುರಪುರದಿಂದ ಹಂಪಿ ವೀಕ್ಷಣೆಗೆ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು ಬೈಸ್ಕೈ ಹಾರಾಟಕ್ಕೆ ತೆರಳುತ್ತಿದ್ದವರನ್ನು ವೀಕ್ಷಿಸಿ, ಹೆಲಿಕಾಪ್ಟರ್ ಹಾರಾಟವನ್ನು ನೋಡುತ್ತ ಕೇಕೆ ಹಾಕುತ್ತ ಸಂಭ್ರಮಿಸಿದರು.

ಆಗಸದಿಂದ ಹಂಪಿಯನ್ನು ವೀಕ್ಷಿಸುವ ಉದ್ದೇಶದಿಂದಾಗಿ ಹಮ್ಮಿಕೊಳ್ಳಲಾಗಿರುವ ಹಂಪಿ ಬೈಸ್ಕೈ ತೆರಳುವ ಜನರ ಪ್ರಮಾಣ ತೀರಾ ಕಡಿಮೆ ಇದ್ದುದರಿಂದ ವ್ಯವಸ್ಥಾಪಕರು ಬೇಸರ ವ್ಯಕ್ತ ಪಡಿಸಿದರು. ಎರಡನೇ ದಿನವಾದ ಶುಕ್ರವಾರ ಬರೀ 18 ಜನರ ನೊಂದಣಿಯಾಗಿದ್ದು, ನಿರೀಕ್ಷೆಯಷ್ಟು ಜನರು ಭಾಗವಹಿಸಿಲ್ಲ. ಇನ್ನು ಶನಿವಾರದಿಂದ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಗೆ ₹500 ವಿನಾಯಿತಿ ದೊರೆಯಲಿದ್ದು, ಹಂಪಿ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಗಸದಿಂದ ಹಂಪಿಯನ್ನು ವೀಕ್ಷಿಸುವ ಮೂಲಕ ಹೊಸ ಅನುಭವವನ್ನು ಪಡೆಯುವಂತೆ ವ್ಯವಸ್ಥಾಪಕರು ಮನವಿ ಮಾಡಿಕೊಂಡರು.

ಸೆಲ್ಫಿ ಪಡೆಯುವವರೆ ಹೆಚ್ಚು: ಬೈಸ್ಕೈನಲ್ಲಿ ತೆರಳುವವರಿಗಿಂತ ಹೆಲಿಕಾಪ್ಟರ್‌ ಹಾರಾಟ ಹಾಗೂ ಅದರ ಬಳಿ ನಿಂತು ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರೆ ಹೆಚ್ಚಾಗಿದ್ದರಲ್ಲದೇ ಇವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುವ ದೃಶ್ಯಗಳು ಕಂಡುಬಂದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ