ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಾರದರ್ಶಕ ಹಾಗೂ ಸಮಾನತೆ ತತ್ವದ ಆಧಾರದಲ್ಲಿ ಆಹಾರ ಒದಗಿಸಲು ಜಿಲ್ಲೆಯಲ್ಲಿ ಆಹಾರ ಭದ್ರತೆ, ಸುರಕ್ಷತಾ ಕಾಯ್ದೆಯ ಸಮರ್ಪಕ ಅನುಷ್ಟಾನಕ್ಕೆ ಮುಂದಾಗುವಂತೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಾರದರ್ಶಕ ಹಾಗೂ ಸಮಾನತೆ ತತ್ವದ ಆಧಾರದಲ್ಲಿ ಆಹಾರ ಒದಗಿಸಲು ಜಿಲ್ಲೆಯಲ್ಲಿ ಆಹಾರ ಭದ್ರತೆ, ಸುರಕ್ಷತಾ ಕಾಯ್ದೆಯ ಸಮರ್ಪಕ ಅನುಷ್ಟಾನಕ್ಕೆ ಮುಂದಾಗುವಂತೆ ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ. ಎಚ್. ಕೃಷ್ಣ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ 2013ರ ಆಹಾರ ಭದ್ರತಾ ಕಾಯ್ದೆಯ ಅನುಷ್ಟಾನ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಆಹಾರ ಜನರ ಹಕ್ಕು ಆಗಿದೆ. ಲಿಂಗ, ಜಾತಿ, ಧರ್ಮ, ವರ್ಗ, ಉದ್ಯೋಗಾಧಾರಿತ ಅಸಮಾನತೆಯನ್ನು ತಡೆದು ಬಡವರು, ದುರ್ಬಲರು, ಮಹಿಳೆಯರು, ಅಂಗವಿಕಲರು, ವೃದ್ಧರು ಸೇರಿದಂತೆ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು, ಸ್ವಚ್ಚತೆ, ಆರೋಗ್ಯ, ಶಿಕ್ಷಣ, ಗುಣಮಟ್ಟ ಹಾಗೂ ಸುರಕ್ಷತೆಯಿಂದ ಕೂಡಿರುವ ಆಹಾರ ಒದಗಿಸುವುದು ಆಹಾರ ಭದ್ರತಾ ಕಾಯ್ದೆಯ ಪ್ರಮುಖ ಉದ್ದೇಶವಾಗಿದೆ. ಕಾಯ್ದೆಯ ವ್ಯಾಪ್ತಿಗೆ ಬರುವ 14 ಇಲಾಖೆಗಳ ಅಧಿಕಾರಿಗಳು ಯೋಜನೆ, ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರ ಹಾಗೂ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆಹಾರದ ಹಕ್ಕುಗಳಿಗೆ ಕಾನೂನಾತ್ಮಕ ರಕ್ಷಣೆ ಇದ್ದು, ಜನರು ತಮ್ಮ ಆಹಾರದ ಹಕ್ಕು ಬಗ್ಗೆ ಜಾಗೃತಿ ಹೊಂದಬೇಕು. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟಲ್‌ಗಳ ವ್ಯವಸ್ಥೆ ಸುಧಾರಣೆಗಾಗಿ ಅಧಿಕಾರಿಗಳು ವಾರದಲ್ಲಿ ಒಂದು ದಿನ ಖುದ್ದಾಗಿ ಭೇಟಿಕೊಟ್ಟು ಮಕ್ಕಳ ಸಮಸ್ಯೆ, ಕುಂದುಕೊರತೆಗಳನ್ನು ಪರಿಶೀಲಿಸಿ ಪರಿಹರಿಸಬೇಕು. ಹಾಸ್ಟಲ್‌ಗಳಲ್ಲಿ ತಯಾರಾಗುವ ಆಹಾರದ ಮಾದರಿ ಸಂಗ್ರಹಿಸಿ ಪರೀಕ್ಷೆಗೊಳಪಡಿಸಬೇಕು. ಮಕ್ಕಳಿಗೆ ಸುರಕ್ಷತೆಯಿಂದ ಕೂಡಿದ ಗುಣಮಟ್ಟದ ಆಹಾರ ನೀಡಬೇಕು ಎಂದರು.
ಮಧ್ಯಾಹ್ನದ ಬಿಸಿಯೂಟ ಯೋಜನೆ, ಹಾಸ್ಟಲ್ ಹಾಗೂ ಅಂಗನವಾಡಿಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಬೇಕು. ಮೆನು ಪ್ರಕಾರವೇ ಊಟ, ಉಪಹಾರ ನೀಡಬೇಕು. ಮಕ್ಕಳ ಹಾಜರಾತಿ, ದಾಸ್ತಾನು ವಹಿಯ ಭೌತಿಕ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಬಿಸಿಯೂಟ ತಯಾರಾಗುವ ಸ್ಥಳ ಸ್ವಚ್ಚತೆಯಿಂದ ಕೂಡಿರಬೇಕು. ಅಡುಗೆ ಸಿಬ್ಬಂದಿ ಸ್ವಚ್ಚತಾ ಪರಿಕರಗಳನ್ನು ಬಳಸಬೇಕು. ಶೌಚಾಲಯ ಸ್ವಚ್ಚವಾಗಿರಬೇಕು. ಹಾಸ್ಟಲ್, ಅಂಗನವಾಡಿ ಹಾಗೂ ಅಡುಗೆ ಸಿಬ್ಬಂದಿಗೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಬೇಕು. ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉತ್ತಮ ಆಹಾರ ನೀಡಬೇಕು ಎಂದು ಆಹಾರ ಆಯೋಗದ ಅಧ್ಯಕ್ಷರಾದ ಡಾ. ಎಚ್. ಕೃಷ್ಣ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರೂಪ ಅವರು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಜಿಲ್ಲೆಯ ಶಾಲೆಗಳು, ವಿದ್ಯಾರ್ಥಿನಿಲಯ, ಅಂಗನವಾಡಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಗಮನಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಯೋಗದ ಅಧ್ಯಕ್ಷರು ತಿಳಿಸಿರುವ ಸಲಹೆ, ಸೂಚನೆಗಳನ್ನು ಜಿಲ್ಲಾಮಟ್ಟದ ಅಧಿಕಾರಿಗಳು ಪಾಲಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ತಿಳಿಸಿದರು.
ಇದೇ ವೇಳೆ ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಅಹವಾಲುಗಳನ್ನು ಸಲ್ಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜು ಕೋಟೆ, ಸುಮಂತ್ ರಾವ್, ಕೆ.ಎಸ್. ವಿಜಯಲಕ್ಷ್ಮಿ, ಎ. ರೋಹಿಣಿಪ್ರಿಯ, ಮಾರುತಿ ದೊಡ್ಡಣ್ಣನವರ್, ಆಹಾರ ಇಲಾಖೆಯ ಉಪನಿರ್ದೇಶಕರಾದ ವಸುಂಧರಾ ಹೆಗಡೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.