- ಒಳ ಕಚ್ಚಾಟದಿಂದಲೇ ಕಾಂಗ್ರೆಸ್ ಸರ್ಕಾರ ಪತನ:
- ಬಿಜೆಪಿ ಮುಖಂಡ ರೇಣುಕಾಚಾರ್ಯ ಭವಿಷ್ಯ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ, ಗೃಹ ಸಚಿವ ಡಾ.ಜಿ.ಪರಮೇಶ್ವರ ಶಾಸಕರ ಬೆಂಬಲ ಪಡೆಯಲು ನಿರಂತರ ಪ್ರತ್ಯೇಕ ಸಭೆ ಮಾಡುತ್ತಿದ್ದಾರೆ. ಸಿಎಂ ಕುರ್ಚಿಗೆ ಟವಲು ಹಾಕಿದ್ದಾರೆ. ಅವರ ಒಳ ಕಚ್ಚಾಟದಿಂದಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭವಿಷ್ಯ ನುಡಿದರು.
ನಗರದಲ್ಲಿ ಶನಿವಾರ ಸಾರ್ವಜನಿಕ ವಿಜಯದಶಮಿ ಶೋಭೋಯಾತ್ರೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿ ಕುರ್ಚಿಗೆ ಟವಲು ಹಾಕಿ ಕಾದಿರುವ ಡಿ.ಕೆ.ಶಿವಕುಮಾರ, ಡಾ. ಜಿ.ಪರಮೇಶ್ವರ ಶಾಸಕರ ಬೆಂಬಲ ಪಡೆಯಲು ನಿರಂತರ ಸಭೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ಸಿನ ಸಚಿವರು, ಶಾಸಕರು ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಇದರಿಂದ ಕ್ಷೇತ್ರದಲ್ಲಿ ಅವಮಾನವಾಗುತ್ತಿದೆ ಎಂದು, ರಾಜೀನಾಮೆ ಕೊಡಲು ಮುಂದಾಗಿದ್ದಾರೆ. ಈ ಬಗ್ಗೆ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ ಬಹಿರಂಗವಾಗಿಯೇ ಹೇಳಿಕೆ ನೀಡಿರುವುದು ಗಮನಾರ್ಹ. ಕಾಂಗ್ರೆಸ್ ಸರ್ಕಾರವನ್ನು ಅದೇ ಪಕ್ಷದವರೇ ಪತನಗೊಳಿಸುವ ದಿನಗಳೂ ಇನ್ನು ದೂರವಿಲ್ಲ ಎಂದು ಹೇಳಿದರು.3-4 ವರ್ಷಗಳ ಹಿಂದೆ ದೇಶದ್ರೋಹಿ, ಮತಾಂಧ ಅಲ್ಪಸಂಖ್ಯಾತಗೂಂಡಾಗಳು ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ, ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದರು. ಆ ಎಲ್ಲರ ಮೇಲೆ ನಮ್ಮ ಬಿಜೆಪಿ ಸರ್ಕಾರ ಕ್ರಮ ವಹಿಸಿ, ಬಂಧಿಸಿತ್ತು. ಓಟ್ ಬ್ಯಾಂಕ್‌ನ ಕಾಂಗ್ರೆಸ್ ಸರ್ಕಾರ ಆ ಎಲ್ಲ 120 ಜನರ ಮೇಲಿನ ಮೊಕದ್ದಮೆ ಹಿಂಪಡೆದಿದೆ. ಅಷ್ಟೇ ಅಲ್ಲ, ಆರೆಸ್ಸೆಸ್ ಕಚೇರಿಗೆ ಒದಗಿಸಿದ್ದ ಬಿಗಿ ಭದ್ರತೆಯನ್ನೂ ಸಡಿಲಗೊಳಿಸಿ, ಮಸೀದಿಗಳು, ಮೌಲ್ವಿಗಳಿಗೆ ಬಂದೋಬಸ್ತ್ ಒದಗಿಸುತ್ತಿದೆ. ಇಂತಹ ದೇಶದ್ರೋಹಿ, ಧರ್ಮವಿರೋಧಿ ಕಾಂಗ್ರೆಸ್ ಸರ್ಕಾರವು ಇನ್ನು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ. ಶೀಘ್ರ ಈ ಸರ್ಕಾರ ಪತನವೂ ಆಗಲಿದೆ ಎಂದು ಹೇಳಿದರು.
ಮೈಸೂರು ಸಂಸ್ಥಾನ ಆಡಳಿತದಲ್ಲಿದ್ದ ಕಾಲದಲ್ಲಿ ಶ್ರೀ ಚಾಮುಂಡೇಶ್ವರಿ ದೇವಾಲಯ ಈಗ ಮುಜರಾಯಿ ಇಲಾಖೆಗೆ ಸೇರಿದೆ. ಆದರೂ, ಧರ್ಮದ ಬಗ್ಗೆ ಕಿಂಚಿತ್ತೂ ಯೋಚಿಸದ ಕಾಂಗ್ರೆಸ್ ಸರ್ಕಾರ ಶ್ರೀ ಚಾಮುಂಡೇಶ್ವರಿ ಬೆಟ್ಟದ ಪ್ರಾಧಿಕಾರ ರಚಿಸುವ ಮೂಲಕ ಮನಸೋಯಿಚ್ಛೆ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹಿಂದೂ ಧರ್ಮದ ಪದ್ಧತಿ, ಸಂಸ್ಕೃತಿ ಪ್ರಕಾರ ಮೈಸೂರಿನ ಶ್ರೀ ಚಾಮುಂಡೇಶ್ವರಿ ಬನ್ನಿ ಮಂಟಪದಲ್ಲಿ ಮಹಿಷಾಸುರನ ಮರ್ಧನ ಮಾಡಿ, ವಿಜಯ ದಶಮಿ ಆಚರಿಸುವ ಪ್ರತೀತಿ ಇದೆ. ಅದೇ ರೀತಿ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ದೇಶದ್ರೋಹಿ ಕಾಂಗ್ರೆಸ್ ಸರ್ಕಾರವು ಕೆಲವೇ ದಿನಗಳಲ್ಲಿ ಮರ್ಧನವಾಗಲಿದೆ ಎಂದು ಪುನರುಚ್ಚರಿಸಿದರು.ಮೈಸೂರಿನ ಮುಡಾ ನಿವೇಶನ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ, ರಾಜ್ಯಪಾಲಕರು, ಜನಪ್ರತಿನಿಧಿಗಳ ನ್ಯಾಯಾಲಯ ಮತ್ತು ಹೈಕೋರ್ಟ್, ಜಾರಿ ನಿರ್ದೇಶನಾಲಯ (ಇ.ಡಿ)ಕ್ಕೆ ತನಿಖೆಗೆ ಆದೇಶ ನೀಡಿದೆ. ಆದರೂ ಈಗಿನ ಕಾಂಗ್ರೆಸ್ ಸರ್ಕಾರವು ಶ್ರೀ ಚಾಮುಂಡೇಶ್ವರಿ ಭಾವಚಿತ್ರ ಹಾಕಿಕೊಂಡು, ಸರ್ಕಾರಿ ಹಣದಲ್ಲಿ ಜಾಹೀರಾತು ನೀಡಿದೆ. ಈ ಸರ್ಕಾರಕ್ಕೆ ಅದೆಂತಹ ಭಂಡತನ ಇರಬೇಕು ಎಂದು ರೇಣುಕಾಚಾರ್ಯ ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಭ್ರಷ್ಟರಲ್ಲ. ಕಾಂಗ್ರೆಸ್ ಸರ್ಕಾರದ ಎಲ್ಲ ಸಚಿವರು, ಶಾಸಕರು ಭ್ರಷ್ಟರು. ಭ್ರಷ್ಟಾಚಾರ ನಡೆಸಿ, ಜಾಹೀರಾತು ಕೊಡುತ್ತಾರೆಂದರೆ, ಆ ತಾಯಿ ಚಾಮುಂಡೇಶ್ವರಿ ಇಂತಹವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಧನಂಜಯ ಕಡ್ಲೇಬಾಳು ಇತರರು ಇದ್ದರು.
- - - -ಫೋಟೋಳ: ರೇಣುಕಾಚಾರ್ಯ