ಬೆಂಗಳೂರು ನಗರದಲ್ಲಿ 4 ವರ್ಷದ ಬಳಿಕ ಮತ್ತೆ ಟೋಯಿಂಗ್‌ ಆರಂಭ

KannadaprabhaNewsNetwork |  
Published : Mar 26, 2026, 03:45 AM ISTUpdated : Mar 26, 2026, 09:16 AM IST
towing

ಸಾರಾಂಶ

ನಾಲ್ಕು ವರ್ಷಗಳ ಬಳಿಕ ರಾಜಧಾನಿಯಲ್ಲಿ ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳ ‘ದಂಡ’ ವಿಧಿಸಲು ಮತ್ತೆ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ. ಸಂಚಾರ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಿದ್ದು, ಶುಕ್ರವಾರ ಅಥವಾ ಸೋಮವಾರ ಟೋಯಿಂಗ್‌ಗೆ ಹಸಿರು ನಿಶಾನೆ ಸಿಗಲಿದೆ

 ಬೆಂಗಳೂರು :  ನಾಲ್ಕು ವರ್ಷಗಳ ಬಳಿಕ ರಾಜಧಾನಿಯಲ್ಲಿ ವಾಹನ ನಿಲುಗಡೆ ನಿಷೇಧ ಪ್ರದೇಶದಲ್ಲಿ ನಿಲ್ಲಿಸುವ ವಾಹನಗಳ ‘ದಂಡ’ ವಿಧಿಸಲು ಮತ್ತೆ ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ.

ಮೊದಲ ಬಾರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ಸಂಚಾರ ವಿಭಾಗದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಲಿದ್ದು, ಶುಕ್ರವಾರ ಅಥವಾ ಸೋಮವಾರ ಟೋಯಿಂಗ್‌ಗೆ ಹಸಿರು ನಿಶಾನೆ ಸಿಗಲಿದೆ.

ಮೊದಲ ಹಂತದಲ್ಲಿ ಕೇಂದ್ರ ಮತ್ತು ಪಶ್ಚಿಮ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರು ಟೋಯಿಂಗ್ ವಾಹನಗಳು ರಸ್ತೆಗಿಳಿಯಲಿವೆ. ನಂತರ ಹಂತ ಹಂತವಾಗಿ ಎಲ್ಲ ಐದು ಪಾಲಿಕೆಗಳ ಸರಹದ್ದಿನಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಸಂಬಂಧ ‘ಕನ್ನಡಪ್ರಭ’ ಜತೆ ಬುಧವಾರ ಮಾತನಾಡಿದ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಕಾರ್ತಿಕ್ ರೆಡ್ಡಿ ಅವರು, ಟೋಯಿಂಗ್ ವ್ಯವಸ್ಥೆ ಮರು ಜಾರಿಗೆ ಹೊಸದಾಗಿ ನಿಯಮಾವಳಿಗಳನ್ನು ರೂಪಿಸಲಾಗಿದೆ. ಪ್ರಥಮ ಬಾರಿಗೆ ಜಿಬಿಎ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಸಹಭಾಗಿತ್ವದಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಹೇಳಿದರು.

ಟೋಯಿಂಗ್‌ಗೆ ವಾಹನಗಳು ಹಾಗೂ ಸಿಬ್ಬಂದಿಯನ್ನು ಜಿಬಿಎ ಒದಗಿಸಲಿದೆ. ಸದ್ಯ ಕೇಂದ್ರ ಪಾಲಿಕೆ ಎರಡು ಹಾಗೂ ಪಶ್ಚಿಮ ಪಾಲಿಕೆಯಿಂದ ಒಂದು ಸೇರಿದಂತೆ ಮೂರು ವಾಹನಗಳು ಬಂದಿವೆ. ಮೊದಲ ಹಂತದಲ್ಲಿ ಈ ಎರಡು ಪಾಲಿಕೆಗಳ ವ್ಯಾಪ್ತಿಯಲ್ಲಿ ಟೋಯಿಂಗ್ ಕಾರ್ಯಾಚರಣೆ ನಡೆಯಲಿದ್ದು, ಮುಂದಿನ ದಿನಗಳಲ್ಲಿ ಇನ್ನುಳಿದ ಪಾಲಿಕೆಗಳು ವಾಹನ ನೀಡಿದ ಕೂಡಲೇ ಆರಂಭಿಸಲಾಗುತ್ತದೆ ಎಂದು ಜಂಟಿ ಆಯುಕ್ತರು ವಿವರಿಸಿದರು.

ಎಎಸ್‌ಐ ಸೇರಿ ಐವರು ಸಿಬ್ಬಂದಿ:

ಪ್ರತಿ ವಾಹನದಲ್ಲಿ ಇಬ್ಬರು ಪೊಲೀಸರು ಹಾಗೂ ಮೂವರು ಜಿಬಿಎ ನೌಕರರು ಸೇರಿ ಐವರು ಸಿಬ್ಬಂದಿ ಇರಲಿದ್ದಾರೆ. ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್ಐ) ಸೇರಿ ಇಬ್ಬರು ಪೊಲೀಸರನ್ನು ಸಂಚಾರ ವಿಭಾಗ ನಿಯೋಜಿಸಿದರೆ, ವಾಹನ ಜತೆ ಮೂವರು ಸಿಬ್ಬಂದಿಯನ್ನು ಜಿಬಿಎ ಒದಗಿಸಲಿದೆ. ಟೋಯಿಂಗ್ ನಿರ್ವಹಣೆಗೆ ಜಿಬಿಎ ಹೊರಗುತ್ತಿಗೆ ನೀಡಿದೆ.

ಬೈಕ್‌ಗೆ ₹1000, ಕಾರಿಗೆ ₹1,500 ದಂಡ!

ಟೋಯಿಂಗ್‌ನಿಂದ ವಸೂಲಿಯಾಗುವ ಹಣದಲ್ಲಿ ಸಂಚಾರ ನಿಮಯ ಉಲ್ಲಂಘನೆಗೆ ಸಂಬಂಧಿಸಿದ ದಂಡ ಪೊಲೀಸರಿಗೆ ಸೇರಿದರೆ, ಟೋಯಿಂಗ್ ವಾಹನ ಶುಲ್ಕವು ಜಿಬಿಎ ಖಜಾನೆ ಸೇರಲಿದೆ. ಅಂತೆಯೇ ನೋ ಪಾರ್ಕಿಂಗ್‌ಗೆ 500 ರು. ದಂಡವಿದೆ, ಆದರೆ ಟೋಯಿಂಗ್‌ಗೆ ಬೈಕ್‌ಗಳಿಗೆ 650 ರು. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1 ಸಾವಿರ ರು. ಶುಲ್ಕ ಇರಲಿದೆ. ಒಟ್ಟಾರೆ ಟೋಯಿಂಗ್‌ಗೆ ಬೈಕ್‌ಗಳಿಗೆ 1 ಸಾವಿರ ರು. ಹಾಗೂ ನಾಲ್ಕು ಚಕ್ರದ ವಾಹನಗಳು 1,500 ರು. ದಂಡ ಪಾವತಿಸಬೇಕಾಗುತ್ತದೆ ಎಂದು ತಿಳಿದು ಬಂದಿದೆ.

ಮೈಕ್‌ನಲ್ಲಿ ಪ್ರಕಟಣೆ ಬಳಿಕ ವಾಹನ ಟೋಯಿಂಗ್‌

ಟೋಯಿಂಗ್ ಮುನ್ನ ನಿಲುಗಡೆ ನಿಷೇಧಿತ ಪ್ರದೇಶದಿಂದ ವಾಹನ ತೆರವುಗೊಳಿಸುವಂತೆ ಪೊಲೀಸರು ಮೈಕ್‌ನಲ್ಲಿ ಪ್ರಕಟಿಸಲಿದ್ದಾರೆ. ಈ ಸೂಚನೆ ಪಾಲಿಸದೆ ಹೋದರೆ ಆ ವಾಹನಗಳನ್ನು ಟೋಯಿಂಗ್ ಮಾಡಲಾಗುತ್ತದೆ. ಮೊದಲಿನಂತೆ ಮನ ಬಂದಂತೆ ವಾಹನಗಳನ್ನು ಟೋಯಿಂಗ್ ಮಾಡುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಂಚಾರ ಅಡ್ಡಿ ಕಡೆ ಮಾತ್ರ ಟೋಯಿಂಗ್

ಎಲ್ಲೆಂದರಲ್ಲಿ ಟೋಯಿಂಗ್ ಮಾಡದೆ ಕೇವಲ ವಾಹನ ದಟ್ಟಣೆಯ ರಸ್ತೆಗಳಲ್ಲಿ ಮಾತ್ರ ಟೋಯಿಂಗ್ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಅಂತೆಯೇ ಹೊಸೂರು ರಸ್ತೆ, ವಿಧಾನಸೌಧ, ಕಬ್ಬನ್ ಪಾರ್ಕ್‌, ತುಮಕೂರು ರಸ್ತೆ, ಮೈಸೂರು ರಸ್ತೆ ಹಾಗೂ ಬಳ್ಳಾರಿ ರಸ್ತೆ ಸೇರಿ ವಾಹನ ಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಟೋಯಿಂಗ್ ಜಾರಿಗೆ ಬರಲಿದೆ.

ಇಂದು ಪ್ರಾಯೋಗಿಕ ಟೋಯಿಂಗ್‌

ಟೋಯಿಂಗ್ ವಾಹನಗಳ ಪರೀಕ್ಷಾರ್ಥವಾಗಿ ವಿಧಾನಸೌಧ ಸುತ್ತಮುತ್ತ ರಸ್ತೆಗಳಲ್ಲಿ ಗುರುವಾರ ಕೆಲ ಹೊತ್ತು ಟೋಯಿಂಗ್ ನಡೆಯಲಿದೆ ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ನೀಟ್ ರದ್ದಾಗಿದ್ದಕ್ಕೆ ಜೀವ ಕಳಕೊಂಡ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್ !
ಹೆಣ ಹುಡುಕಿಕೊಂಡು ಹೋದ ಖಾಕಿಗೆ ಸಿಕ್ಕಿದ್ದು ಸತ್ತ ಹೆಗ್ಗಣ!