4 ವರ್ಷದಿಂದ ನಿಂತಿದ್ದ ಟೋಯಿಂಗ್‌ ಮತ್ತೆ ಶುರು

KannadaprabhaNewsNetwork |  
Published : Apr 07, 2026, 04:15 AM IST
Towing 1 | Kannada Prabha

ಸಾರಾಂಶ

ನಾಲ್ಕು ವರ್ಷದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು ನೋ ಪಾರ್ಕಿಂಗ್‌ಗಳಲ್ಲಿ ಇದ್ದ ಕೆಲ ವಾಹನಗಳನ್ನು ತೆರವುಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಲ್ಕು ವರ್ಷದ ನಂತರ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಕಾರ್ಯಾಚರಣೆ ನಡೆಸಿರುವ ಸಂಚಾರ ಪೊಲೀಸರು ನೋ ಪಾರ್ಕಿಂಗ್‌ಗಳಲ್ಲಿ ಇದ್ದ ಕೆಲ ವಾಹನಗಳನ್ನು ತೆರವುಗೊಳಿಸಿದ್ದಾರೆ.

ನಗರ ಸಂಚಾರ ಪೊಲೀಸರು ಮತ್ತು ಜಿಬಿಎ ಅಧಿಕಾರಿಗಳೊಂದಿಗೆ ಸೋಮವಾರ ಜಂಟಿ ಕಾರ್ಯಾಚರಣೆ ನಡೆಸಿ ಪ್ರಾಥಮಿಕವಾಗಿ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್‌ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಬಿಎನ ಎಲ್ಲಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಟೋಯಿಂಗ್ ನಡೆಸಲಾಗುತ್ತದೆ. ಹೀಗಾಗಿ ವಾಹನ ಸವಾರರು ನಿಷೇಧಿತ ಸ್ಥಳದಲ್ಲಿ ವಾಹನ ನಿಲುಗಡೆ ಮಾಡದೆ ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಟೋಯಿಂಗ್‌ ವಾಹನಕ್ಕೆ ಸಿಸಿ ಕ್ಯಾಮೆರಾ ಅಳವಡಿಕೆ:

ವಾಹನಗಳನ್ನು ಟೋಯಿಂಗ್‌ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಆಗುತ್ತಿದ್ದಂಹ ತಿಕ್ಕಾಟ ತಪ್ಪಿಸಲು ಇದೀಗ ಟೋಯಿಂಗ್‌ ವಾಹನಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ವಾಹನ ಟೋಯಿಂಗ್‌ ಮಾಡುವ ದೃಶ್ಯಗಳು ಅದರಲ್ಲಿ ಸೆರೆಯಾಗಲಿದೆ. ಟೋಯಿಂಗ್‌ ಪ್ರಕ್ರಿಯೆ ವೇಳೆ ವಾಹನಗಳಿಗೆ ಹಾನಿ ಆಗದ್ದಂತೆ ಹೇಗೆ ತೆಗೆದುಕೊಂಡು ಹೋಗಬೇಕು ಎಂದು ಪೊಲೀಸರು ಹಾಗೂ ಜಿಬಿಎ ಸಿಬ್ಬಂದಿಗೆ ಸಲಹೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟೋಯಿಂಗ್‌ ಕಾರ್ಯಾಚರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಈ ಹಿಂದೆ ಟೋಯಿಂಗ್‌ ವೇಳೆ ಸಾರ್ವಜನಿಕರಿಂದ ಪೊಲೀಸರ ವಿರುದ್ಧ ಹಲವು ಆರೋಪಗಳು ಕೇಳಿಬಂದಿದ್ದವು. ವಾಹನ ಹಾನಿ, ಅನಾವಶ್ಯಕ ದಂಡ ವಸೂಲಿ ಹಾಗೂ ಗಲಾಟೆ ಪ್ರಕರಣಗಳು ಹೆಚ್ಚಾಗುತ್ತಿದ್ದ ಹಿನ್ನೆಲೆ ಈ ನೂತನ ಕ್ರಮಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಿಬಿಎಯಿಂದಲೇ ಟೋಯಿಂಗ್ ವಾಹನ:

ಈ ಮೊದಲು ಖಾಸಗಿ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡು ಟೋಯಿಂಗ್ ವಾಹನಗಳ ಬಳಸಲಾಗುತ್ತಿತ್ತು. ಆದರೆ, ಇದೀಗ ಜಿಬಿಎ ವತಿಯಿಂದಲೇ 10 ಟೋಯಿಂಗ್ ವಾಹನಗಳು ಹಾಗೂ ಟೋಯಿಂಗ್‌ ಸಿಬ್ಬಂದಿ ಜತೆ ಸಂಚಾರ ಪೊಲೀಸ್ ವಿಭಾಗದಿಂದ ಪಿಎಸ್ಐ ಅಥವಾ ಎಎಸ್‌ಐ ಹಂತದ ಅಧಿಕಾರಿಯೊಬ್ಬರು ಹಾಗೂ ಇಬ್ಬರು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಇರಲಿದ್ದಾರೆ.ಕಾರಿಗೆ ಟೋಯಿಂಗ್ ಶುಲ್ಕ 1000

ಜಿಬಿಎಯಿಂದ ಟೋಯಿಂಗ್ ವಾಹನಗಳ ಬಂದಿದ್ದು, ಪ್ರಾಯೋಗಿಕವಾಗಿ ಜಿಬಿಎ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಟೋಯಿಂಗ್ ಆರಂಭಿಸಲಾಗಿದೆ. ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಯಲಿದೆ. ಬೈಕ್‌ಗೆ ಟೋಯಿಂಗ್ ಶುಲ್ಕ 650 ರು., ನೋ ಪಾರ್ಕಿಂಗ್ ಶುಲ್ಕ 500 ರು. ಇದೆ. ಹಾಗೆಯೇ ಕಾರಿಗೆ ಟೋಯಿಂಗ್ ಶುಲ್ಕ 1000 ರು. ಇದ್ದು, ನೋ ಪಾರ್ಕಿಂಗ್‌ ಶುಲ್ಕ 500 ರು. ಇರಲಿದೆ.

ಇಂದಿನಿಂದ ಅನಾಥ ವಾಹನಗಳ

ಟೋಯಿಂಗ್‌ ಮಾಡಿ: ಮಹೇಶ್ವರ್

ನಗರದ ರಸ್ತೆಗಳಲ್ಲಿ, ರಸ್ತೆ ಬದಿಯಲ್ಲಿ ಹಲವು ತಿಂಗಳಿನಿಂದ ನಿಲ್ಲಿಸಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಕೂಡಲೇ ಟೋಯಿಂಗ್ ಕಾರ್ಯ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನಿರ್ದೇಶನ ನೀಡಿದ್ದಾರೆ. ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸೋಮವಾರ ನಡೆದ ಸಮನ್ವಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತರ ಮತ್ತು ಕೇಂದ್ರ ನಗರ ಪಾಲಿಕೆಯಿಂದ ಖರೀದಿಸಿರುವ ಟೋಯಿಂಗ್ ವಾಹನಗಳನ್ನು ಈಗಾಗಲೇ ಸಂಚಾರ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಉತ್ತರ ನಗರ ಪಾಲಿಕೆಯಿಂದ ಅನಾಥ ವಾಹನಗಳಿರುವ ರಸ್ತೆ ಪಟ್ಟಿಯನ್ನೂ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರದಿಂದಲೇ ಟೋಯಿಂಗ್ ಕಾರ್ಯ ಪ್ರಾರಂಭಿಸುವಂತೆ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಟೋ ಚಾಲಕರಿಗೆ 20000 ಪರಿಹಾರಕ್ಕೆ ಆಗ್ರಹ
ನಿರ್ಲಕ್ಷ್ಯ ಚಾಲನೆಯಿಂದ ಬೈಕ್‌ಗೆಡಿಕ್ಕಿ: ಟೆಕ್ಕಿಗೆ ಹೈಕೋರ್ಟ್‌ ತರಾಟೆ