ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಾಂಗಲಿ ಸಂಸ್ಥಾನದ ಆಳ್ವಿಕೆಯ ಪ್ರದೇಶವಾಗಿದ್ದ ರಬಕವಿ ಸುತ್ತಲಿನಲ್ಲಿ ಮರಾಠಿ ಭಾಷೆಯದೇ ಪಾರುಪತ್ಯವಿತ್ತು. ಸಂಸ್ಥಾನಿಕರ ಮಾತೃಭಾಷೆಯ ಹೊರತಾಗಿ ರಬಕವಿ-ಬನಹಟ್ಟಿಯಲ್ಲಿ ಕನ್ನಡದ ಕಂಪು ಹರಡಲು ೧೨೫ ವರ್ಷಗಳ ಹಿಂದೆ ಸಂಕಲ್ಪಿಸಿ ರಬಕವಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲು ಟೊಂಕ ಕಟ್ಟಿ ನಿಂತ ಕೈ.ಮಡಿವಾಳಪ್ಪ ವೀರಪ್ಪ ಪಟ್ಟಣ. ಅವರ ದಿಟ್ಟತೆಯಿಂದಾಗಿ ಇಂದು ಈ ಪ್ರದೇಶಗಳು ಕನ್ನಡಾಭಿಮಾನದ ಪ್ರದೇಶಗಳಾಗಿವೆ. ಇಂತಹ ಅದಮ್ಯ ಚೇತನರ ೭೫ನೇ ಪುಣ್ಯಾರಾಧನೆಯನ್ನು ೪ ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿದೆ ಎಂದು ರಬಕವಿ ಶಿಕ್ಷಣ ಸಂಸ್ಥೆಯ ಚೇರಮನ್ ಬಸವರಾಜ ಯಂಡಿಗೇರಿ ನುಡಿದರು.ಶನಿವಾರ ರಬಕವಿಯ ಎಂ.ವಿ.ಪಟ್ಟಣ ಪಿಯು ಕಾಲೇಜು ಸಭಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸ್ತ್ರೀ ಶಿಕ್ಷಣಕ್ಕೆ ಆಸ್ಪದವೇ ಇಲ್ಲದ ಕಾಲದಲ್ಲಿ ತಾಲೂಕಿನಲ್ಲೇ ಮೊಟ್ಟಮೊದಲಿಗೆ ಬಾಲಕಿಯರಿಗೆ ಪ್ರತ್ಯೇಕ ಶಿಕ್ಷಣ ನೀಡಲು ಮಡಿವಾಳಪ್ಪನವರು ಬಾಲಕಿಯರ ಪ್ರೌಢಶಾಲೆಯನ್ನು ಆರಂಭಿಸಿದರು. ಇಂದು ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ, ಪಪೂ ಹಾಗೂ ಪದವಿ ಕಾಲೇಜುಗಳು ನಡೆಯುತ್ತಿವೆ. ಡಿ.೧೭ರಿಂದ ೨೦ರವರೆಗೆ ಒಟ್ಟು ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಡಿ.೧೭ರಂದು ಕನ್ನಡಜೀವಿ, ಶಿಕ್ಷಣ ಪ್ರೇಮಿ ಮಡಿವಾಳಪ್ಪ ವೀರಪ್ಪ ಪಟ್ಟಣ ಭಾವಚಿತ್ರಕ್ಕೆ ಮಾಜಿ ಚೇರಮನ್ ಬಿ.ಎಂ.ಪಟ್ಟಣ ಪೂಜೆ ಸಲ್ಲಿಸುವರು. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ನಗರದ ಪ್ರಮುಖ ಬೀದಿಗಳಲ್ಲಿ ಪಟ್ಟಣ ಪಲ್ಲಕ್ಕಿ ಮೆರವಣಿಗೆ ನಡೆಸುವರು. ಶಾಲಾ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಸಿದ್ಧರಾಮ ಮನಹಳ್ಳಿ, ಸರ್ಕಾರಿ ಡಿಪ್ಲೋಮಾ ಕಾಲೇಜಿನ ಡಿ.ಸಿ.ಗುರವ, ಬಿಇಒ ಅಶೋಕ ಬಸಣ್ಣವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಬಹುಮಾನ ವಿತರಿಸುವರು. ಸಂಸ್ಥೆಯ ಚೇರಮನ್ ಬಸವರಾಜ ಯಂಡಿಗೇರಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ.೧೮ರಂದು ಪ್ರತಿಭಾ ಪುರಸ್ಕಾರ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಬಾಗೇಶ ಮುರಡಿ, ಡಾ.ಎಸ್.ಆರ್. ಹಂದಿಗುಂದ ಪಾಲ್ಗೊಳ್ಳುವರು. ಡಿ.೧೯ರಂದು ಪೂರ್ವ ಪ್ರಾಥಮಿಕ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಬಿ.ಎಂ.ಪಟ್ಟಣ, ಸಿಆರ್‌ಪಿ ಎಸ್.ಎ.ಕೊಕಟನೂರ, ನಿರ್ದೇಶಕ ಎಸ್.ಸಿ.ದಡ್ಡ, ಶಿಕ್ಷಣ ಸಂಯೋಜಕ ಬಿ.ಎಂ.ಹಳೇಮನಿ, ಸಿ.ಎಸ್.ಭೂಯ್ಯಾರ ಪಾಲ್ಗೊಳ್ಳುವರು.ಈ ಸಂದರ್ಭದಲ್ಲಿ ಬಿ.ಎಂ.ಮಟ್ಟಿಕಲ್ಲಿ, ಎಂ.ಎಸ್.ಹೊಸಮನಿ, ಪಿ.ಆರ್.ಪಾವಟೆ, ಪ್ರಾಚಾರ್ಯ ಬಿ.ಎಸ್.ಕಾಂಬಳೆ, ಪ್ರೊ.ರಾಜೇಶ ನೋಟದ ಉಪಸ್ಥಿತರಿದ್ದರು.