ಪಟ್ಟಣ ಪಂಚಾಯಿತಿಯ ಕಡತ ನಾಪತ್ತೆ ಪ್ರಕರಣ: ಸಿಬ್ಬಂದಿಯನ್ನು ತಕ್ಷಣದಿಂದಲೇ ಅಮಾನತು ಮಾಡಿದ ಅಧ್ಯಕ್ಷೆ

KannadaprabhaNewsNetwork |  
Published : Jul 24, 2025, 12:45 AM IST
ಪಟ್ಟಣ ಪಂಚಾಯಿತಿಯ ಕಡತ ನಾಪತ್ತೆ ಪ್ರಕರಣ: ತಾಂತ್ರಿಕ ವಿಭಾಗದ ಸಿಬ್ಬಂದಿ ಮೇಲ್ನೋಟಕ್ಕೆ ಆರೋಪ ಸಾಬೀತು: ಪಪಂ ನಲ್ಲಿ ಬಿಸಿ ಬಿಸಿ ಚರ್ಚೆ | Kannada Prabha

ಸಾರಾಂಶ

ಪಟ್ಟಣ ಪಂಚಾಯಿತಿ ಕಚೇರಿಯ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ತಾಂತ್ರಿಕ ವಿಭಾಗದ ಸಿಬ್ಬಂದಿ ಕಡತ ತೆಗೆದುಕೊಂಡು ಹೋಗಿರುವ ಕುರಿತು ಜುಲೈ ೧೯ರಂದು ಸಿಸಿ ಫುಟೇಜ್‌ನಲ್ಲಿ ದಾಖಲಾಗಿದೆ. ಕಡತವನ್ನು ತಾಂತ್ರಿಕ ವಿಭಾಗದ ಸಿಬ್ಬಂದಿ ಅವರೇ ತೆಗೆದುಕೊಂಡು ಹೋಗಿರುವ ಕುರಿತು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ತಕ್ಷಣದಿಂದಲೇ ಅಮಾನತು ಮಾಡಿರುವುದಾಗಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಪಟ್ಟಣ ಪಂಚಾಯಿತಿಯ ಪ್ರಮುಖ ಕಡತವೊಂದು ನಾಪತ್ತೆಯಾಗಿರುವ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬುಧವಾರ ಪಟ್ಟಣ ಪಂಚಾಯಿತಿಯಲ್ಲಿ ಬಿರುಸಿನ ಚರ್ಚೆ ನಡೆಯಿತು.ಬೆಳಗಿನಿಂದಲೇ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಹಲವು ಸದಸ್ಯರ ಸಮ್ಮುಖದಲ್ಲಿ ಮುಖ್ಯಾಧಿಕಾರಿ ಸತೀಶ್ ಉಪಸ್ಥಿತಿಯಲ್ಲಿ ಕಡತ ನಾಪತ್ತೆಯಾಗಿರುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ನಂತರ ಪೊಲೀಸ್ ಠಾಣೆಗೆ ದೂರು ನೀಡಿದ ಮುಖ್ಯಾಧಿಕಾರಿ, ಕಡತ ನಾಪತ್ತೆ ಕುರಿತು ಪರಿಶೀಲನೆ ನಡೆಸಿ ಕ್ರಮ ಜರುಗಿಸಬೇಕೆಂದು ತಿಳಿಸಿದರು.

ನಂತರ ಸಂಜೆ ಸಿಸಿ ಫುಟೇಜ್ ತೆಗೆಸಿ ನೋಡಲಾಗಿ, ಅದರಲ್ಲಿ ಪಟ್ಟಣ ಪಂಚಾಯಿತಿ ಕಚೇರಿಯ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ ತಾಂತ್ರಿಕ ವಿಭಾಗದ ಸಿಬ್ಬಂದಿ ಕಡತ ತೆಗೆದುಕೊಂಡು ಹೋಗಿರುವ ಕುರಿತು ಜುಲೈ ೧೯ರಂದು ಸಿಸಿ ಫುಟೇಜ್‌ನಲ್ಲಿ ದಾಖಲಾಗಿದೆ. ಕಡತವನ್ನು ತಾಂತ್ರಿಕ ವಿಭಾಗದ ಸಿಬ್ಬಂದಿ ಅವರೇ ತೆಗೆದುಕೊಂಡು ಹೋಗಿರುವ ಕುರಿತು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ತಕ್ಷಣದಿಂದಲೇ ಅಮಾನತು ಮಾಡಿರುವುದಾಗಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ತಿಳಿಸಿದರು.ಮುಖ್ಯಾಧಿಕಾರಿಗಳ ಕೊಠಡಿಯಲ್ಲಿರುವ ಸಿಸಿ ಟಿವಿ ಪರಿಶೀಲನೆ ವೇಳೆ ಅಧ್ಯಕ್ಷೆ ಜಯಂತಿ ಶಿವಕುಮಾರ್, ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಸದಸ್ಯರಾದ ಶೀಲಾ ಡಿಸೋಜಾ, ಮೃತ್ಯುಂಜಯ, ಜೀವನ್, ಶುಭಾಕರ್, ಪಿ.ಕೆ.ಚಂದ್ರು ಹಾಗೂ ಪಪಂ ಸಿಬ್ಬಂದಿಗಳ ಸಮ್ಮುಖದಲ್ಲಿ ಎರಡು ಗಂಟೆಗಳಿಗೂ ಅಧಿಕ ಕಾಲ ಪರಿಶೀಲನೆ ನಡೆಸಲಾಯಿತು. ಅಂತಿಮವಾಗಿ ಕಡತವನ್ನು ತಾಂತ್ರಿಕ ವಿಭಾಗದ ಸಿಬ್ಬಂದಿ ತೆಗೆದುಕೊಂಡು ಹೋಗಿರುವ ಕುರಿತು ಮುಖ್ಯಾಧಿಕಾರಿ ಸತೀಶ್ ತಿಳಿಸಿದರು. ಅಲ್ಲದೇ ಅವರ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿಯೂ ಹೇಳಿಕೆ ನೀಡಿದರು.

ಏನಿದು ಪ್ರಕರಣ?

ಪಟ್ಟಣ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ನಿವೇಶನ ನೀಡಲು ಪಿ.ಕೆ.ಚಂದ್ರು ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಂದಿನ ಶಾಸಕರಾಗಿದ್ದ ಅಪ್ಪಚ್ಚುರಂಜನ್ ಅವರ ಸಮ್ಮುಖದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈವರೆಗೆ ನಿವೇಶನ ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ವಾರದಲ್ಲಿ ಮಹದೇಶ್ವರ ಬ್ಲಾಕ್‌ನ ಹೊಸ ಬಡಾವಣೆಯಲ್ಲಿ ಶೆಡ್ ನಿರ್ಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ, ಪ್ರತ್ಯಾರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಜುಲೈ ೧೮ರಂದು ಪಟ್ಟಣ ಪಂಚಾಯಿತಿಯಲ್ಲಿ ತುರ್ತು ಸಭೆಯನ್ನು ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಸಿ, ಹೊಸ ಬಡಾವಣೆಯಲ್ಲಿ ಪೌರ ಕಾರ್ಮಿಕರಿಗೆ ನೀಡಲು ಉದ್ದೇಶಿಸಿರುವ ನಿವೇಶನದ ವಿಚಾರ ಚರ್ಚಿಸಲಾಯಿತು.

ಈ ಸಂದರ್ಭ ೧೫ ಫಲಾನುಭವಿಗಳ ಪಟ್ಟಿಯನ್ನು ತರಿಸಿ ನೋಡಲಾಗಿತ್ತು. ಈಗಾಗಲೇ ೨೧ ಫಲಾನುಭವಿಗಳು ನಿವೇಶನಕ್ಕೆ ಅರ್ಹರಾಗಿದ್ದರೂ, ತುರ್ತಾಗಿ ೧೫ ಪೌರಕಾರ್ಮಿಕರಿಗೆ ಮಾತ್ರ ನೀಡಲು ಸಾಧ್ಯ ಎಂದು ನಿರ್ಣಯ ಮಾಡಲಾಗಿತ್ತು. ಈ ಕಡತ ೧೯ರಿಂದ ಕಾಣೆಯಾಗಿತ್ತು ಎನ್ನಲಾಗಿದೆ. ಉಳಿದ ಆರು ಪೌರ ಕಾರ್ಮಿಕರು ತಮಗೆ ಸದ್ಯಕ್ಕೆ ನಿವೇಶನ ದೊರಕುವುದಿಲ್ಲ ಎಂದು ಮನದಟ್ಟು ಮಾಡಿಕೊಂಡು ಶಾಸಕ ಮಂತರ್ ಗೌಡ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರು ಕಡತವನ್ನು ತರುವಂತೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದಾಗ, ಕಡತ ನಾಪತ್ತೆಯಾಗಿರುವುದು ಕಂಡು ಬಂದಿತ್ತು. ಪ್ರಕರಣದ ಕುರಿತು ಎರಡು ಬಾರಿ ಮುಖ್ಯಾಧಿಕಾರಿ ಸತೀಶ್ ಅವರು ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸ್ ನಿರೀಕ್ಷಕ ಮುದ್ದುಮಾದೇವ ಅವರು, ನಿಮ್ಮ ಕಚೇರಿಯ ಸಮಸ್ಯೆಯನ್ನು ನೀವೇ ತೀರ್ಮಾನ ಮಾಡಿಕೊಳ್ಳಿ ಎಂದು ವಾಪಾಸ್‌ ಕಳುಹಿಸಿದ್ದಾರೆ. ನಂತರ ದೂರು ನೀಡಲು ತಾಂತ್ರಿಕ ವಿಭಾಗದ ಸಿಬ್ಬಂದಿ ಕೂಡ ದೂರು ನೀಡಲು ಠಾಣೆಗೆ ತೆರಳಿದಾಗಲೂ ಕೂಡ ಪೊಲೀಸರು ಸ್ವೀಕರಿಸದೇ ವಾಪಸ್‌ ಕಳುಹಿಸಿದ್ದಾರೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ