ಟೌನ್ ಶಿಪ್ ಕುಮಾರಸ್ವಾಮಿಯ ಕನಸಿನ ಕೂಸು: ಬಾಲಕೃಷ್ಣ

KannadaprabhaNewsNetwork | Published : Mar 29, 2025 12:30 AM

ಸಾರಾಂಶ

ಮಾಜಿ ಶಾಸಕ ಎ. ಮಂಜುನಾಥ್ ರವರು ನಮಗೆ ಮಾರ್ಗದರ್ಶನ ಕೊಡುತ್ತಿದ್ದಾರೆ, 15 ದಿನದ ಒಳಗೆ ಪಟ್ಟಣದಲ್ಲಿ ಹೊಸ ಆಸ್ಪತ್ರೆ ಕಟ್ಟಲು ಸೂಕ್ತ ಸರ್ಕಾರಿ ಜಾಗ ತೋರಿಸಿದರೆ ಅಲ್ಲೇ ಆಸ್ಪತ್ರೆ ಕಟ್ಟಲು ಸಿದ್ಧ ಎಂದು ಶಾಸಕ ಎಚ್.ಸಿ‌.ಬಾಲಕೃಷ್ಣ ಹೇಳಿದರು

ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಶಾಸಕ ಎ. ಮಂಜುನಾಥ್ ರವರು ನಮಗೆ ಮಾರ್ಗದರ್ಶನ ಕೊಡುತ್ತಿದ್ದಾರೆ, 15 ದಿನದ ಒಳಗೆ ಪಟ್ಟಣದಲ್ಲಿ ಹೊಸ ಆಸ್ಪತ್ರೆ ಕಟ್ಟಲು ಸೂಕ್ತ ಸರ್ಕಾರಿ ಜಾಗ ತೋರಿಸಿದರೆ ಅಲ್ಲೇ ಆಸ್ಪತ್ರೆ ಕಟ್ಟಲು ಸಿದ್ಧ ಎಂದು ಶಾಸಕ ಎಚ್.ಸಿ‌.ಬಾಲಕೃಷ್ಣ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶು ಆಸ್ಪತ್ರೆ, ಕೆಂಪೇಗೌಡ ಉದ್ಯಾನ ಹಾಗೂ ತಾಲೂಕು ಕಚೇರಿ ತೆರವು ಮಾಡಿ ಹೊಸ ಆಸ್ಪತ್ರೆ ನಿರ್ಮಾಣ ಮಾಡುವುದಕ್ಕೆ ಮಾಜಿ ಶಾಸಕ ಎ. ಮಂಜುನಾಥ್ ರವರು ವಿರೋಧ ವ್ಯಕ್ತಪಡಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವ ಜಾಗವನ್ನು ಇನ್ನು 15 ದಿನದಲ್ಲಿ ತೋರಿಸಿದರೆ ಆ ಜಾಗದಲ್ಲೇ ಆಸ್ಪತ್ರೆ ನಿರ್ಮಾಣ ಮಾಡುತ್ತವೆ, ಇಲ್ಲವಾದರೆ ಈ ಜಾಗದಲ್ಲೇ ಆಸ್ಪತ್ರೆ ಕಟ್ಟುತ್ತೇವೆ. ಸರ್ಕಾರಿ ಆಸ್ಪತ್ರೆಗೆ ಬರುವವರು ಬಡವರಾಗಿದ್ದು, ಶ್ರೀಮಂತರಾರು ಸರ್ಕಾರಿ ಆಸ್ಪತ್ರೆಗೆ ಬರುವುದಿಲ್ಲ. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದೇವೆ, ಇದನ್ನು ವಿರೋಧ ಮಾಡುವುದು ಸರಿಯಲ್ಲ, ಆಸ್ಪತ್ರೆ ಎಲ್ಲೋ ಕಟ್ಟಲು ಆಗುವುದಿಲ್ಲ. 15 ದಿನದಲ್ಲಿ ಸೂಕ್ತ ಜಾಗ ತೋರಿಸುವಂತೆ ಮಾಜಿ ಶಾಸಕ ಎ. ಮಂಜುನಾಥ್ ರಿಗೆ ಶಾಸಕ ಬಾಲಕೃಷ್ಣ ಕಾಲಾವಕಾಶ ನೀಡಿದರು.

ಟೌನ್ ಶಿಪ್ ಕುಮಾರಸ್ವಾಮಿಯ ಕನಸಿನ ಕೂಸು:

ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಯೋಜನೆಯಡಿ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರುವುದು. ಕುಮಾರಸ್ವಾಮಿಯವರು ಶಾಸಕರಾಗಿದ್ದ ಅವಧಿಯಲ್ಲಿ ಈ ಯೋಜನೆಯನ್ನು ರೂಪಿಸಿದ್ದು, ಬಿ.ಎಸ್. ಯಡಿಯೂರಪ್ಪನವರು. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇದನ್ನು ಕೈ ಬಿಡಿ ಎಂದು ಕೇಳಿಕೊಂಡಾಗ ಕುಮಾರಸ್ವಾಮಿಯವರು ನೋಟಿಫಿಕೇಶನ್ ಮಾಡಿಸಿದ್ದಾರೆ, ಕೈ ಬಿಡಲು ಆಗುವುದಿಲ್ಲ ಎಂದಿದ್ದರೂ ಎಚ್ ಡಿಕೆಯವರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲೂ ಕೂಡ ಮಾಜಿ ಶಾಸಕ ಎ.ಮಂಜುನಾಥ್ ರವರು ಈ ಯೋಜನೆಯನ್ನು ಕೈ ಬಿಡಿಸಬಹುದಾಗಿತ್ತು. ಆದರೆ ಆ ಕೆಲಸವನ್ನು ಮಾಡಲಿಲ್ಲ ಎಂದರು. ಬೈರಮಂಗಲಕ್ಕೆ ಕುಮಾರಸ್ವಾಮಿಯವರು ಬಂದಾಗ ಜನಗಳು ವಿರೋಧಿಸಿದರೂ ಆಗ ಈ ಯೋಜನೆ ಕೈ ಬಿಡುವುದಿಲ್ಲ, ಬೇರೆ ರೀತಿ ಕಾರ್ಯಕ್ರಮ ಹಾಕಿಕೊಂಡಿರುವುದಾಗಿ ಜನಗಳಿಗೆ ತಿಳಿಸಿದ್ದಾರೆ, ಈಗ ವಿರೋಧ ಮಾಡುತ್ತಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ ನಾರಾಯಣ್ ರವರು ಸಚಿವರಾಗಿದ್ದಾಗ ಕೆಇಡಿಬಿಯವರು ಈ ಯೋಜನೆಯ ಅಡಿಯಲ್ಲೇ ಒಂದು ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಂಡರು. ಆಗ ಮಾಜಿ ಶಾಸಕರು ಏನು ಮಾಡುತ್ತಿದ್ದರು. ಟೌನ್‌ಶಿಪ್ ಮಾಡುವ ನಿಟ್ಟಿನಲ್ಲಿ ಮೊದಲ ಹಂತವಾಗಿ ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದು, ಕುಮಾರಸ್ವಾಮಿಯವರ ಕನಸಿನ ಕೂಸನ್ನು ನಾವು ಮುಂದುವರಿಸುತ್ತಿದ್ದೇವೆ ಎಂದು ಶಾಸಕ ಬಾಲಕೃಷ್ಣ ಸ್ಪಷ್ಟನೆ ನೀಡಿದರು.

ತಾಲೂಕು ಕಚೇರಿ ಎನ್ಇಎಸ್ ಬಡಾವಣೆಗೆ ಸ್ಥಳಾಂತರ:

ಹೊಸ ತಾಲೂಕು ಕಚೇರಿಯನ್ನು ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈಗ ಇರುವ ತಾಲೂಕು ಕಚೇರಿ ಸ್ಥಳವನ್ನು ಸ್ಥಳಾಂತರ ಮಾಡಲಾಗುತ್ತದೆ. ಈ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣವಾಗುತ್ತದೆ, ಎನ್ಇಎಸ್ ಬಡಾವಣೆಯಲ್ಲಿ ತಾಲೂಕು ಕಚೇರಿ ಹಾಗೂ ಗುರು ಭವನ ಎರಡೂ ಕೂಡ ಬರಲಿದ್ದು, ತಾಲೂಕಿನ ಜನತೆಗೆ ಅನುಕೂಲ ಮಾಡಿಕೊಡುತ್ತೇವೆ. ಇದಕ್ಕೂ ಎ. ಮಂಜುನಾಥ್ ರವರು ಸಹಕಾರ ನೀಡಬೇಕು, ಅವರ ಸಲಹೆ ಸೂಚನೆಗಳು ಏನಾದರೂ ಇದ್ದರೆ ನನಗೆ ನೀಡಲಿ ಎಂದು ಬಾಲಕೃಷ್ಣ ತಿಳಿಸಿದರು.

Share this article