ವಿಷಕಾರಿ ತ್ಯಾಜ್ಯ ಹಳ್ಳಕ್ಕೆ, ಅಲ್ಲಿಂದ ಭೀಮೆಯೊಡಲಿಗೆ!

KannadaprabhaNewsNetwork |  
Published : Apr 25, 2025, 12:31 AM IST
ಕೈಗಾರಿಕಾ ಪ್ರದೇಶದಿಂದ ತ್ಯಾಜ್ಯ ನೀರು ಹಳ್ಳಕ್ಕೆ ಬಿಡಲಾಗುತ್ತಿರುವ ದೃಶ್ಯ. | Kannada Prabha

ಸಾರಾಂಶ

ನಿಯಮ ಉಲ್ಲಂಘಿಸುವ ಕಾರ್ಖಾನೆಗಳು: ಜನ-ಜಲ- ಜೀವನದ ಮೇಲೆ ದುಷ್ಪರಿಣಾಮ

ಆನಂದ್‌ ಎಂ.ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾದ ಕೆಮಿಕಲ್‌ ಕಂಪನಿಗಳು ಅಲ್ಲಿನ ವಿಷಕಾರಿ ತ್ಯಾಜ್ಯವನ್ನು ನೇರವಾಗಿ ಹಳ್ಳಕ್ಕೆ ಸೇರುವಂತೆ ಬಿಡುತ್ತಿದ್ದಾರೆ. ಇದು ಜನಜೀವನ-ಜಲಚರಗಳ ಮೇಲೆ ಭಾರಿ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂಬ ತಮ್ಮ ದೂರುಗಳನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸುತ್ತಾರೆ.

ಕೆಲವೊಂದು ಕೆಮಿಕಲ್‌ ಕಂಪನಿಗಳು ಅಲ್ಲಿಂದ ಹೊರಹೊಮ್ಮುವ ದ್ರವ್ಯರೂಪದ ತ್ಯಾಜ್ಯವನ್ನು ಹೊರಚೆಲ್ಲಲು ವೈಜ್ಞಾನಿಕ ರೀತಿಯ ವ್ಯವಸ್ಥೆ ಮಾಡಿಕೊಳ್ಳದೆ, ತೆರೆಮರೆಯಲ್ಲಿ ನಿರ್ಮಿಸಿದ ಪೈಪ್‌ಲೈನ್‌-ಚರಂಡಿಗಳ ಮೂಲಕ ಹಳ್ಳಕ್ಕೆ ಬಿಡುತ್ತಿದ್ದಾರೆ. ಹಳ್ಳದ ನೀರು ಮುಂದೆ ಹರಿದು ಭೀಮಾನದಿಗೆ ಸೇರುತ್ತದೆ. ಭೀಮೆ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಪಶು-ಪಕ್ಷಿಗಳಿಗೆ ಜೀವಜಲ. ಆದರೆ, ಕಲುಷಿತ ನೀರಿನಿಂದ ಜನರ ಆರೋಗ್ಯದ ಸಮಸ್ಯೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಲಚರಗಳ ಸಾವಿಗೂ ಇದು ಕಾರಣವಾಗಿದೆ ಎಂದು ನೋವು ವ್ಯಕ್ತಪಡಿಸುವ ಕಡೇಚೂರಿನ ಹನುಮಂತ, ಈ ಬಗ್ಗೆ ನಮ್ಮಂತಹವರ ದೂರುಗಳ ಪರಿಶೀಲನೆ ನಡೆಸಲು ಕಾರ್ಖಾನೆಗಳ ಪರಿಶೀಲನೆಗೆ ಮೇಲಧಿಕಾರಿಗಳು ಬಂದಾಗ ಮಾತ್ರ ಎಲ್ಲವನ್ನೂ ಸರಿಯಾಗಿಟ್ಟುಕೊಂಡಿದ್ದೇವೆಂದು ತೋರಿಸಿಕೊಡುವ ಕಂಪನಿಗಳು, ನಂತರ ಎಂದಿನಂತೆ ತಮ್ಮ ಚಾಳಿ ಮುಂದುವರೆಸುತ್ತವೆ ಎಂದು ಕಿಡಿ ಕಾರಿದರು. ಸರಣಿ ವರದಿಗಳ ಅಲ್ಲಿನ ಬದುಕು ಬವಣೆಯ ಬಗ್ಗೆ ಬೆಳಕು ಚೆಲ್ಲುತ್ತಿರುವ ‘ಕನ್ನಡಪ್ರಭ’ ಆ ಪ್ರದೇಶದಲ್ಲಿ ಸುತ್ತಾಡಿದಾಗ, ಕೆಲವೊಂದು ಕಂಪನಿಗಳು ದುರ್ನಾತ ಬೀರುವ, ರಾಸಾಯನಿಕ ಮಿಶ್ರಿತ ಕೆಮಿಕಲ್‌ ತ್ಯಾಜ್ಯವನ್ನು ಕದ್ದುಮುಚ್ಚಿ ಹಳ್ಳಕ್ಕೆ ಬಿಡುತ್ತಿರುವ ದೃಶ್ಯಗಳು ಅಲ್ಲಿ ಕಂಡುಬಂದವು. ಸಾರ್ವಜನಿಕ ದೂರುಗಳ ಆಧಾರದಡಿ, 2024 ರ ಡಿಸೆಂಬರ್ ತಿಂಗಳಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಲಹಾ ಸಮಿತಿ ಈ ಭಾಗದಲ್ಲಿ ಪರಿಶೀಲನೆ ಇಂತಹ ಆಘಾತಕಾರಿ ಅಂಶಗಳು ಕಂಡು ಬಂದ ಬಗ್ಗೆ ತಮ್ಮ ವರದಿಯಲ್ಲಿ ತಿಳಿಸಿದ್ದರು ಎನ್ನಲಾಗಿದೆ.

*ಸಹಾಯಕ ಆಯುಕ್ತರ ನೇತೃತ್ವದ ಸಮಿತಿ

‘ಕನ್ನಡಪ್ರಭ’ ಸರಣಿ ವರದಿಗಳು ಹಾಗೂ ಬಳ್ಳಾರಿಯ ಜನಸಂಗ್ರಾಮ ಪರಿಷತ್‌ ದೂರಿನನ್ವಯ, ಜಿಲ್ಲಾಧಿಕಾರಿ ಡಾ. ಬಿ.ಸುಶೀಲಾ ಸೂಚನೆ ಮೇರೆಗೆ, ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್‌ ನೇತೃತ್ವದಲ್ಲಿ ರಚಿತಗೊಂಡ ಸಮಿತಿಯು ಕಾರ್ಯಚಟುವಟಿಕೆಗಳನ್ನು ಆರಂಭಿಸಿದೆ. ಈ ಪ್ರದೇಶದ ವ್ಯಾಪ್ತಿಯ ಹಳ್ಳಗಳಲ್ಲಿನ ಕುಡಿಯುವ ನೀರಿನ ಗುಣಮಟ್ಟ (ಕೆಮಿಕಲ್‌ ಅನಾಲಿಸಿಸ್‌) ಪರೀಕ್ಷಿಸಿ, ಮೂರು ದಿನಗಳಲ್ಲೇ ವರದಿ ನೀಡುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಆದೇಶಿಸಲಾಗಿದೆ. ಆ ಭಾಗದಲ್ಲಿ ಜನರ ಆರೋಗ್ಯ ತಪಾಸಣೆಗೆಂದು ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡ ತೆರಳಲಿದೆ. ಗುರುವಾರ ಸಮಿತಿಯು ತಮ್ಮ ಕಚೇರಿಯಲ್ಲಿ ಈ ಕುರಿತು ಗಂಭೀರ ಸಭೆ ನಡೆಸಿದೆ. ಪರಿಸರ ಇಲಾಖೆ, ಕೈಗಾರಿಕಾ ಇಲಾಖೆ, ಕೆಐಎಡಿಬಿ, ತಾಲೂಕು ಪಂಚಾಯಿತಿ, ತಹಸೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಕೈಗಾರಿಕೆಗಳಿಂದ ದುಷ್ಪರಿಣಾಮ ಬೀರುತ್ತಿದೆ ಎಂಬ ಸಾರ್ವಜನಿಕ ಆರೋಪಗಳು ಹಾಗೂ ಕನ್ನಡಪ್ರಭ ಸರಣಿ ವರದಿಗಳ ಗಮನಿಸಿ ಪರಿಶೀಲನೆ ನಡೆಸಲಿದೆ ಎಂದು ಸಹಾಯಕ ಆಯುಕ್ತ ಡಾ. ಹಂಪಣ್ಣ ಸಜ್ಜನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ