- ಬೋಗಳೆರಹಟ್ಟಿಯ ಟ್ರ್ಯಾಕ್ಟರ್ ಚಾಲಕ ಮಂಜಣ್ಣ ಆರೋಪಿ । ಪೋಕ್ಸೋ ಕಾಯ್ದೆ, ಅತ್ಯಾಚಾರ ಪ್ರಕರಣ ದಾಖಲು
ಕನ್ನಡಪ್ರಭ ವಾರ್ತೆ ಜಗಳೂರು
ಮದುವೆಯ ಆಮಿಷವೊಡ್ಡಿ 16 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗಿ ಹೆರಿಗೆಯಾಗುವವರೆಗೂ ಇಡೀ ಕೃತ್ಯ ಮುಚ್ಚಿಟ್ಟಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬನ ಘೋರ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಜಗಳೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.ಬೋಗಳೆರಹಟ್ಟಿ ಗ್ರಾಮದ ಟ್ರ್ಯಾಕ್ಟರ್ ಚಾಲಕ ಮಂಜಣ್ಣ (30) ಬಂಧಿತ ಆರೋಪಿ. ಜಗಳೂರು ಪೊಲೀಸರು ಮಂಜಣ್ಣನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸದ್ಯಕ್ಕೆ ಕಾಮುಕ ಮಂಜಣ್ಣನನ್ನು ದಾವಣಗೆರೆ ಜಿಲ್ಲಾ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಕೆಲವು ತಿಂಗಳುಗಳಿಂದ ಅಪ್ರಾಪ್ತೆಯು ತೀವ್ರ ಕೈ-ಕಾಲು ಬಾವು ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ಆದರೆ, ತೀವ್ರ ಮೂಢನಂಬಿಕೆಗೆ ಒಳಗಾಗಿದ್ದ ಆಕೆಯ ಪೋಷಕರು, ಮಗಳಿಗೆ ದೆವ್ವವೋ, ಭೂತದ ಗಾಳಿ ಸೋಕಿದೆ ಎಂದು ಭಾವಿಸಿದ್ದರು. ಇದಕ್ಕಾಗಿ ಉಕ್ಕಡಗಾತ್ರಿ ಹಾಗೂ ನಾಯಕನಹಟ್ಟಿ ಬಳಿಯ ಬೋಸದೇವರಹಟ್ಟಿ ದೇವಾಲಯಗಳಿಗೆ ಮಗಳನ್ನು ಕರೆದೊಯ್ದು ಪೂಜೆ, ಹರಕೆ ಮಾಡಿಸಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
- - -
* ಮದುವೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯಅಪ್ರಾಪ್ತೆ ಮಗಳಿಗೆ ಮಗು ಜನಿಸಿದ್ದರಿಂದ ಆತಂಕಕ್ಕೊಳಗಾದ ಪೋಷಕರು ಆಕೆಯನ್ನು ಸಮಾಧಾನಪಡಿಸಿ, ವಿಚಾರಿಸಿದ್ದಾರೆ. ಆಗ ಪೋಷಕರ ಹೊಲಕ್ಕೆ ಟ್ರ್ಯಾಕ್ಟರ್ ಉಳುಮೆ ಮಾಡಲು ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವುದು ಬಯಲಾಗಿದೆ. ಹೊಲಕ್ಕೆ ಬರುತ್ತಿದ್ದ ಮಂಜಣ್ಣ ಅಪ್ರಾಪ್ತೆಯೊಂದಿಗೆ ಮೊಬೈಲ್‌ನಲ್ಲಿ ನಿಕಟ ಸಂಪರ್ಕ ಬೆಳೆಸಿಕೊಂಡಿದ್ದ. 2025ರ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ "ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ " ಎಂದು ನಂಬಿಸಿದ್ದಾನೆ. ಅಪ್ರಾಪ್ತೆಯ ಪ್ರತಿರೋಧದ ನಡುವೆಯೂ ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಹೆದರಿಸಿದ್ದರಿಂದ ಪ್ರಾಣಭಯಕ್ಕೆ ಹೆದರಿ ಇಷ್ಟು ದಿನ ವಿಷಯ ಮುಚ್ಚಿಟ್ಟಿದ್ದಾಗಿ ಅಪ್ರಾಪ್ತೆ ಪೋಷಕರಿಗೆ ತಿಳಿಸಿದ್ದಾಳೆ.
(ಬಾಕ್ಸ್-2)
- - -