ಅಮೆರಿಕ ಜತೆ ವಾಣಿಜ್ಯ ಒಪ್ಪಂದಿಂದ ಭಾರತದ ಸಾರ್ವಭೌಮತ್ವಕ್ಕೆ ಪೆಟ್ಟು: ಮಾಧವರೆಡ್ಡಿ ಕರೂರು

KannadaprabhaNewsNetwork |  
Published : Feb 27, 2026, 02:15 AM IST
ಬಳ್ಳಾರಿಯ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ರಾಜ್ಯರೈತ ಸಂಘದಿಂದ ಹಮ್ಮಿಕೊಂಡಿದ್ದ ರೈತ ಜಾಗೃತಿ ಅಧಿವೇಶನಕ್ಕೆ ಹಿರಿಯ ಆರ್ಥಿಕ ಚಿಂತಕ ಡಾ.ಟಿ.ಆರ್‌.ಚಂದ್ರಶೇಖರ್ ಅವರು ಚಾಲನೆ ನೀಡಿದರು.  | Kannada Prabha

ಸಾರಾಂಶ

ಅಮೆರಿಕ ಎಂಬ ಬಂಡವಾಳ ದೇಶ ತನ್ನ ಹಿತಾಸಕ್ತಿಗಾಗಿಯೇ ಕೆಲಸ ಮಾಡುತ್ತದೆಯೇ ವಿನಃ ನೆರೆಯ ರಾಷ್ಟ್ರಗಳ ಹಿತ ಕಾಯಲು ಸಾಧ್ಯವಿಲ್ಲ.

ಬಳ್ಳಾರಿ: ಅಮೆರಿಕ ದೇಶದೊಂದಿಗೆ ಭಾರತ ಮಾಡಿಕೊಂಡಿರುವ ವಾಣಿಜ್ಯ ವ್ಯವಹಾರ ಒಪ್ಪಂದದಿಂದ ದೇಶದ ಕೃಷಿ ವಲಯವನ್ನು ಮತ್ತಷ್ಟು ಬಿಕ್ಕಟ್ಟಿಗೆ ಸಿಲುಕಿಕೊಳ್ಳಲಿದೆ. ಇದರಿಂದ ಕೃಷಿಯನ್ನೇ ಆಶ್ರಯಿಸಿರುವ ರೈತರ ಬದುಕು ಅಪಾಯದ ಅಂಚಿಗೆ ತಲುಪುವ ಸಾಧ್ಯತೆಯಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು ಆತಂಕ ವ್ಯಕ್ತಪಡಿಸಿದರು.ಇಲ್ಲಿನ ಬಿಡಿಎಎ ಫುಟ್‌ಬಾಲ್ ಮೈದಾನ ಸಭಾಂಗಣದಲ್ಲಿ ರಾಜ್ಯರೈತ ಸಂಘ ಹಾಗೂ ಹಸಿರುಸೇನೆಯಿಂದ ಆಯೋಜಿಸಿದ್ದ ಭಾರತ-ಯುಎಸ್‌ ವ್ಯಾಪಾರ ಒಪ್ಪಂದ ಕೃಷಿ ಮತ್ತು ಕೈಗಾರಿಕಾ ವಲಯಗಳ ಮೇಲಿನ ಪರಿಣಾಮ ಕುರಿತು ಜರುಗಿದ ಜಾಗೃತಿ ಅಧಿವೇಶನದಲ್ಲಿ ಅವರು ಮಾತನಾಡಿದರು.

ಅಮೆರಿಕ ಎಂಬ ಬಂಡವಾಳ ದೇಶ ತನ್ನ ಹಿತಾಸಕ್ತಿಗಾಗಿಯೇ ಕೆಲಸ ಮಾಡುತ್ತದೆಯೇ ವಿನಃ ನೆರೆಯ ರಾಷ್ಟ್ರಗಳ ಹಿತ ಕಾಯಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರ ಮಾಡಿಕೊಂಡಿರುವ ವಾಣಿಜ್ಯ ಒಪ್ಪಂದದಿಂದ ಅಲ್ಲಿನ ಕೃಷಿ ಉತ್ಪನ್ನಗಳು ತೆರಿಗೆ ರಹಿತವಾಗಿ ಭಾರತಕ್ಕೆ ಲಗ್ಗೆ ಇಡಲಿದೆ. ಇದರಿಂದ ಸ್ಥಳೀಯ ಉತ್ಪನ್ನಗಳಿಗೆ ದೊಡ್ಡ ಆಘಾತವಾಗಲಿದೆ. ಇಲ್ಲಿನ ಕೃಷಿ ಮಾರುಕಟ್ಟೆಯೇ ಅತಂತ್ರಗೊಳ್ಳುವ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಅಮೆರಿಕಾ ಭಾರತದ ಉತ್ಪನ್ನಗಳ ಮೇಲೆ ಶೇ.18ರಷ್ಟು ತೆರಿಗೆ ಹಾಕುವುದರಿಂದ ಭಾರತದ ಕೃಷಿಕರ ಉತ್ಪನ್ನಗಳು ಅಮೆರಿಕಾವನ್ನು ತಲುಪಲು ಸಾಧ್ಯವಾಗದೆ ಸ್ಥಳೀಯವಾಗಿಯೇ ಮಾರುಕಟ್ಟೆಯನ್ನು ಅವಲಂಬಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಮೆಕ್ಕೆಜೋಳ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬೆಳೆಯುವ ರೈತರು ಬೀದಿಗೆ ಬೀಳಲಿದ್ದಾರೆ ಎಂದು ತಿಳಿಸಿದರು.

ವಕೀಲ ಹಾಗೂ ಚಾಗನೂರು ವಿಮಾನ ನಿಲ್ದಾಣ ಹೋರಾಟಗಾರ ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಈ ಹಿಂದೆ ವ್ಯಾಪಾರದ ಹೆಸರಿನಲ್ಲಿ ಭಾರತಕ್ಕೆ ಬಂದ ವಿದೇಶಿಯರು ನಮ್ಮನ್ನು ಗುಲಾಮರನ್ನಾಗಿಸಿಕೊಂಡಿದ್ದರು. ಇದೀಗ ವಿದೇಶಿ ಒಪ್ಪಂದಗಳು ಮತ್ತೆ ನಮ್ಮನ್ನು ಗುಲಾಮಗಿರಿಗೆ ತಳ್ಳುತ್ತಿವೆ ಎಂದರು.

ಅಧಿವೇಶನಕ್ಕೆ ಚಾಲನೆ ನೀಡಿದ ಹಿರಿಯ ಆರ್ಥಿಕ ಚಿಂತಕ ಹಾಗೂ ಲೇಖಕ ಡಾ.ಟಿ.ಆರ್‌.ಚಂದ್ರಶೇಖರ್, ಅಮೆರಿಕಾ ಜೊತೆಗಿನ ವಾಣಿಜ್ಯ ಒಪ್ಪಂದ ಇಲ್ಲಿನ ಸಾರ್ವಭೌಮತೆಯನ್ನು ನಾಶ ಮಾಡುತ್ತಿದೆ. ಅಮೆರಿಕದ 12 ಕೋಟಿ ಜನರ ಹಿತಕಾಯಲು ಭಾರತದ 140 ಕೋಟಿ ಜನರನ್ನು ಬಲಿಕೊಡಲಾಗುತ್ತಿದೆ. ರಷ್ಯಾದಿಂದ ಕಡಿಮೆ ಬೆಲೆಗೆ ಸಿಗುತ್ತಿದ್ದ ಪೆಟ್ರೋಲ್‌ನ್ನು ಬಿಟ್ಟು ಅಮೆರಿಕಾದಿಂದ ಖರೀದಿ ಮಾಡಲಾಗುತ್ತಿದೆ. ಕೇಂದ್ರದ ನೀತಿಗಳು ಭಾರತದ ಆರ್ಥಿಕ ಪ್ರಗತಿ ಹಾಗೂ ಸಾರ್ವಭೌಮತೆಗೆ ಕುತ್ತು ತರುತ್ತಿವೆ ಎಂದು ಹೇಳಿದರು.

ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಹುಚ್ಚುಸಾಬ್ ರೂಪಾಯಿ ಮೌಲ್ಯ ಕುಸಿತ ಮತ್ತು ನೋಟ್ ಬ್ಯಾನ್‌ನಿಂದ ಎದುರಾದ ಆರ್ಥಿಕ ಮುಗ್ಗಟ್ಟು ಕುರಿತು ಮಾತನಾಡಿದರು.

ಸಾಹಿತಿ ಸ. ಘುನಾಥ ಅಮೆರಿಕದಂತಹ ದೇಶಗಳೊಂದಿಗೆ ಮಾಡಿಕೊಳ್ಳುವ ವಾಣಿಜ್ಯ ಒಪ್ಪಂದಗಳಿಂದಾಗುವ ಅಪಾಯಗಳನ್ನು ತಿಳಿಸಿದರು. ಗಾಂಧಿಭವನ ಕಾರ್ಯದರ್ಶಿ ಟಿ.ಜಿ.ವಿಠಲ, ರೈತ ಮುಖಂಡರ ಶರಣಗೌಡ ಪಾಟೀಲ್, ಅರವಿಂದಸ್ವಾಮಿ, ಶಿವಕುಮಾರ್, ಗೋಪಾಲ ರೆಡ್ಡಿ, ಬಸವರಾಜಸ್ವಾಮಿ, ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್, ರೈತ ಮುಖಂಡ ಬೈಲೂರು ಲಕ್ಷ್ಮಿಕಾಂತ ರೆಡ್ಡಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಹೋಳಿ ಆಚರಣೆಗೆ ಹಲವು ಕಾರ್ಯಕ್ರಮ
ಪರಿಸರ ಕಾಪಾಡುವಲ್ಲಿ ವಿಫಲವಾಗಿದ್ದಕ್ಕೆ ಭೂಕುಸಿತ, ಪ್ರವಾಹ