ಸಾಂಪ್ರದಾಯಿಕ ಪದ್ಧತಿಯಲ್ಲಿ ಕಾಫಿ ಬೆಳೆಯುವುದನ್ನು ಬಿಡಬೇಕು

KannadaprabhaNewsNetwork |  
Published : Sep 22, 2024, 01:49 AM IST
21ಎಚ್ಎಸ್ಎನ್5 : ಕಾಫಿ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಗಣ್ಯರು. | Kannada Prabha

ಸಾರಾಂಶ

ಸಕಲೇಶಪುರ: ಕಾಫಿ ಕೃಷಿ ಸದೃಢಗೊಳ್ಳಬೇಕಾದರೆ ಸಾಂಪ್ರದಾಯಿಕ ವಿಧಾನದಲ್ಲಿ ಕಾಫಿ ಬೆಳೆಯುವ ಪದ್ಧತಿಯನ್ನು ಸಂಪೂರ್ಣ ಕೈಬಿಡುವ ಅಗತ್ಯವಿದೆ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಜಗದೀಶ್ ಹೇಳಿದರು.

ಸಕಲೇಶಪುರ: ಕಾಫಿ ಕೃಷಿ ಸದೃಢಗೊಳ್ಳಬೇಕಾದರೆ ಸಾಂಪ್ರದಾಯಿಕ ವಿಧಾನದಲ್ಲಿ ಕಾಫಿ ಬೆಳೆಯುವ ಪದ್ಧತಿಯನ್ನು ಸಂಪೂರ್ಣ ಕೈಬಿಡುವ ಅಗತ್ಯವಿದೆ ಎಂದು ಕಾಫಿ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಜಗದೀಶ್ ಹೇಳಿದರು.

ಶನಿವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ, ಬದಲಾದ ಹವಾಮಾನದಲ್ಲಿ ಕಾಫಿ ಕೃಷಿಯಲ್ಲಿ ನೀರಾವರಿ ಮತ್ತು ಪೋಷಕಾಂಶಗಳ ನಿರ್ವಹಣೆ ಹಾಗೂ ಯಾಂತ್ರೀಕರಣ ಅಳವಡಿಕೆ ಕುರಿತಾದ ವಿಚಾರ ಸಂಕಿರಣ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಪ್ರಪಂಚದಲ್ಲಿ ಭಾರತ ಏಳನೇ ಕಾಫಿ ಬೆಳೆಯುವ ದೇಶವಾಗಿದ್ದು ೨೦೪೭ಕ್ಕೆ ಕಾಫಿ ಕೃಷಿಯಲ್ಲಿ ಭಾರತ ಮೊದಲ ಸ್ಥಾನಕ್ಕೆ ಏರಿಸುವ ಗುರಿಯೊಂದಿಗೆ ಕಾಫಿಮಂಡಳಿ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾಫಿ ಬೆಳೆಯುವ ಇತರೆ ದೇಶಗಳ ಕಾಫಿ ಇಳುವರಿಗೆ ಹೋಲಿಸಿದರೆ ನಮ್ಮ ದೇಶದ ಕಾಫಿ ಇಳುವರಿ ತೀರ ಕಡಿಮೆ ಇದೆ. ದೇಶದಲ್ಲಿ ಸದ್ಯ ೪೮೦೦ ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದ್ದು ಇದನ್ನು ೮ ಸಾವಿರ ಹೆಕ್ಟೇರ್‌ಗೆ ಏರಿಕೆ ಮಾಡುವ ಗುರಿ ಹೊಂದಲಾಗಿದೆ. ಸದ್ಯ ೩.೩ ಮೆಟ್ರಿಕ್‌ ಟನ್ ಕಾಫಿ ಬೆಳೆಯುತ್ತಿದ್ದು ೯ ಮೆಟ್ರಿಕ್‌ ಟನ್‌ಗೆ ಏರಿಕೆ ಮಾಡುವ ಮೂಲಕ ವಿಶ್ವದಲ್ಲೆ ಅತಿಹೆಚ್ಚು ಕಾಫಿ ಬೆಳೆಯುವ ರಾಷ್ಟ್ರವಾಗಿಸುವ ಗುರಿ ಹೊಂದಲಾಗಿದೆ. ಈ ಗುರಿ ತಲುಪಲು ಕಾಫಿ ಕೃಷಿಯಲ್ಲಿನ ಈಗಿನ ಸಂಪ್ರದಾಯಿಕ ವಿಧಾನವನ್ನು ಬದಲಿಸಿ ಸಂಪೂರ್ಣ ಯಂತ್ರಿಕರಣ ಮಾಡುವ ಉದ್ದೇಶವಿದ್ದು ಇದಕ್ಕೆ ಬೆಳೆಗಾರರ ಸಹಕಾರ ಅಗತ್ಯವಿದೆ ಎಂದರು.

ಪ್ರಗತಿಪರ ಕಾಫಿಬೆಳೆಗಾರ ಹಸುಗುವಳ್ಳಿ ಮೋಹನ್ ಕುಮಾರ್ ಮಾತನಾಡಿ, ಜಾಗತಿಕ ಹವಮಾನ ಬದಲಾವಣೆ ಕಾಫಿ ಬೆಳೆಯ ಮೇಲೆ ನೇರ ಪರಿಣಾಮ ಬೀರುತ್ತಿದ್ದು ೧೯೮೦ರ ನಂತರ ಅತಿವೃಷ್ಟಿ ಹಾಗೂ ಅನಾವೃಷ್ಟಿ ಬೆಳೆಗಾರರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದರಿಂದಾಗಿ ಕಾಫಿ ಹಾಗೂ ಮೆಣಸು ಅತಿಬೇಗ ವಿವಿಧ ರೋಗಗಳಿಗೆ ತುತ್ತಾಗುತ್ತಿವೆ. ಆದ್ದರಿಂದ, ಬದಲಾಗುತ್ತಿರುವ ಹವಮಾನವನ್ನು ತಡೆದುಕೊಳ್ಳುವ ತಳಿಗಳನ್ನು ಕಂಡುಹಿಡಿಯುವ ಅಗತ್ಯವಿದೆ ಎಂದರು.

ತಮಿಳುನಾಡಿನ ಪ್ರಗತಿಪರ ಕಾಫಿ ಬೆಳೆಗಾರ ರೇಗಿಸ್ ಗುಸ್ತವ್ ಮಾತನಾಡಿ, ಸಾಂಪ್ರದಾಯಿಕ ವಿಧಾನದಲ್ಲಿ ಕಾಫಿ ಬೆಳೆಯುವುದರಿಂದ ನಷ್ಟ ಹೊಂದುವುದು ನಿಶ್ಚಿತ, ಕಾಫಿ ಬೆಳೆಯಲ್ಲಿ ಯಾಂತ್ರೀಕರಣದ ಅಳವಡಿಕೆಯಿಂದ ಕಾರ್ಮಿಕರ ಅವಲಂಬನೆಯನ್ನು ತಪ್ಪಿಸಬಹುದಾಗಿದೆ. ವೈಜ್ಞಾನಿಕ ಪದ್ಧತಿಯಿಂದ ಕಾಫಿ ಕೃಷಿಯನ್ನು ಸರಳೀಕರಣಗೊಳಿಸುವುದರೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಮೋಹನ್‌ ಕುಮಾರ್, ಹಾಸನ ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಲೋಹಿತ್, ಕಾಫಿ ಮಂಡಳಿ ಸದಸ್ಯ ಎಚ್ ಎ ಉದಯ್ ಮುಂತಾದವರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ