ಶಿವಮೊಗ್ಗ: ಡೆತ್ ನೋಟ್ ಬರೆದಿಟ್ಟು ಪಶ್ಚಿಮ ಸಂಚಾರ ಠಾಣೆಯ ಪೊಲೀಸ್ ಹೆಡ್‌ಕಾನ್ಸ್‌ಸ್ಟೇಬಲ್ ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಹೆಡ್ ಕಾನ್‌ಸ್ಟೇಬಲ್ ಮೊಹಮದ್ ಝಕ್ರಿಯ (55) ಅವರು ನೇಣು ಬಿಗಿದುಕೊಂಡಿದ್ದಾರೆ. ಕಳೆದ ಕೆಲವು ದಿನದಿಂದ ಮೊಹಮದ್ ಝಕ್ರಿಯ ಅವರು ರಜೆ ತೆಗೆದುಕೊಂಡಿದ್ದರು. ಈಗ ಮೂರು ದಿನದ ಹಿಂದಷ್ಟೆ ಡ್ಯೂಟಿಗೆ ಬಂದಿದ್ದರು. ಬುಧವಾರ ರಾತ್ರಿ ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಡ್ಯೂಟಿ ನಿರ್ವಹಿಸಿ ಠಾಣೆಗೆ ವಾಪಸಾಗಿದ್ದರು ಎಂದು ಮೂಲಗಳು ತಿಳಿಸಿವೆ.ರಾತ್ರಿ ಠಾಣೆಯಲ್ಲೆ ಝಕ್ರಿಯ ನೇಣಿಗೆ ಕೊರಳೊಡ್ಡಿದ್ದಾರೆ. ಠಾಣೆಯ ಹಿಂಬದಿಯ ಸೆಲ್‌ಗಳಿರುವ ಜಾಗದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಕುರಿತು ಪ್ರತಿಕ್ರಿಯಿಸಿದ ಎಸ್ಪಿ ಬಿ.ನಿಖಿಲ್ ಅವರು, ಜಕ್ರೀಯಾ ಅವರು ಕಳೆದ ಎರಡು ತಿಂಗಳಿನಿಂದ ಅನಾರೋಗ್ಯದ ಕಾರಣ ರಜೆಯಲ್ಲಿದ್ದರು. ಜನವರಿ 6 ರಂದು ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಬುಧವಾರ ರಾತ್ರಿ ಸ್ಟೇಷನ್ ಹೌಸ್ ಆಫೀಸರ್ ಆಗಿ ಇವರನ್ನು ಕರ್ತವ್ಯಕ್ಕೆ ನೇಮಿಸಲಾಗಿತ್ತು. ಗುರುವಾರ ಮುಂಜಾನೆ 5 ರಿಂದ 5.30ರ ಸುಮಾರಿಗೆ ಠಾಣೆಯ ಕಬ್ಬಿಣದ ಬಾಗಿಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಜಕ್ರೀಯಾ ಅವರು ವಾಟ್ಸಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದು, ಸಹೋದ್ಯೋಗಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಇತರರ ಜೊತೆ ಮಾತನಾಡಿ ಕಿಂಡಲ್ ಮಾಡಿದ್ದಾರೆ ಎಂದು ಆರೋಪಿಸಿ ಎಲ್ಲ ಅಧಿಕಾರಿಗಳಿಗೂ ಮೆಸೇಜ್ ಶೇರ್ ಮಾಡಿದ್ದಾರೆ ಎನ್ನಲಾಗಿದೆ. ಜಕ್ರೀಯಾ ಅವರು ಈ ಹಿಂದೆಯೂ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು ಮತ್ತು ಮಾನಸಿಕವಾಗಿ ನೊಂದಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಘಟನೆ ಕುರಿತಾಗಿ ಹೆಚ್ಚಿನ ಮಾಹಿತಿಗೆ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ತಿಳಿಸಿದರು.