ಗುಂಡ್ಲುಪೇಟೆಯಲ್ಲಿ ಸುಗಮ ಸಂಚಾರಕ್ಕೆ ಸಂಚಕಾರ: ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್‌

KannadaprabhaNewsNetwork |  
Published : Nov 25, 2024, 01:02 AM IST
ಗುಂಡ್ಲುಪೇಟೇಲಿ ಸುಗಮ ಸಂಚಾರ ಸಂಚಕಾರ!ಮೈಸೂರು ಹೆದ್ದಾರೀಲಿ ವಾಹನಗಳ ನಿಲುಗಡೆ | | Kannada Prabha

ಸಾರಾಂಶ

ಗುಂಡ್ಲುಪೇಟೆ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಬೈಕ್‌, ಕಾರು, ಟೆಂಪೋ ಅಡ್ಡ ನಿಲ್ಲುತ್ತಿವೆ. ಇಲ್ಲಿನ ಪೊಲೀಸರು ಸುಗಮ ಸಂಚಾರಕ್ಕೆ ಮುಂದಾಗುತ್ತಿಲ್ಲ. ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೂ ಬ್ರೇಕ್‌ ಹಾಕುವಲ್ಲಿ ವಿಫಲವಾಗಿದ್ದಾರೆ.

ಮೈಸೂರು ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆ । ಪೊಲೀಸರ ನಿರ್ಲಕ್ಷ್ಯ ಆರೋಪ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಬಹುತೇಕ ರಸ್ತೆಗಳಲ್ಲಿ ಬೈಕ್‌, ಕಾರು, ಟೆಂಪೋ ಅಡ್ಡ ನಿಲ್ಲುತ್ತಿವೆ. ಇಲ್ಲಿನ ಪೊಲೀಸರು ಸುಗಮ ಸಂಚಾರಕ್ಕೆ ಮುಂದಾಗುತ್ತಿಲ್ಲ. ಅಡ್ಡಾದಿಡ್ಡಿ ವಾಹನಗಳ ನಿಲುಗಡೆಗೂ ಬ್ರೇಕ್‌ ಹಾಕುವಲ್ಲಿ ವಿಫಲವಾಗಿದ್ದಾರೆ.

ಕಳೆದೆರಡು ವರ್ಷದಿಂಚೀಗೆ ಗುಂಡ್ಲುಪೇಟೆ ಠಾಣಾ ಸರಹದ್ದು ಸ್ವಲ್ಪ ಕುಗ್ಗಿದೆ. ಗುಂಡ್ಲುಪೇಟೆ ಸರ್ಕಲ್‌ ಬದಲಾಗಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಹುದ್ದೇಗೇರಿದ ಬಳಿಕ ಠಾಣೆಯಲ್ಲಿ ಇಬ್ಬರು ಸಬ್‌ ಇನ್‌ಸ್ಪೆಕ್ಟರ್‌, ಒಬ್ಬ ಸರ್ಕಲ್‌ ಇನ್‌ಸ್ಪೆಕ್ಟರ್‌ ಬದಲಿಗೆ ಒಬ್ಬ ಪೊಲೀಸ್‌ ಇನ್‌ಸ್ಪೆಕ್ಟರ್‌, ಒಬ್ಬರು, ಇಬ್ಬರಲ್ಲ ನಾಲ್ವರು ಸಬ್‌ ಇನ್‌ಸ್ಪೆಕ್ಟರ್‌ ಇದ್ದಾರೆ. ಆದರೆ ಗುಂಡ್ಲುಪೇಟೆ ಪಟ್ಟಣದ ಪರಿಮಿತಿಯ ಹೆದ್ದಾರಿಯಲ್ಲಿ ವಾಹನಗಳು ನಿಲುಗಡೆ ತಪ್ಪಿಸಲು ಆಗಿಲ್ಲ. ಜತೆಗೆ ಪಟ್ಟಣದೊಳಗಿನ ರಸ್ತೆ, ಬ್ಯಾಂಕ್‌ಗಳ ಮುಂದೆ ಜನನಿಬಿಡ ರಸ್ತೆಗಳಲ್ಲಿ ಬೈಕ್‌, ಕಾರು ಮನಬಂದಂತೆ ನಿಲ್ಲಿಸುವುದನ್ನು ತಡೆಯಲು ಆಗಿಲ್ಲ.

ಪಟ್ಟಣದೊಳಗಿನ ಟ್ರಾಫಿಕ್‌ ಸಮಸ್ಯೆ ಹೇಳತೀರದಾಗಿದೆ. ಕೆಆರ್‌ಸಿ ರಸ್ತೆ, ಹಳೇ ಬಸ್‌ ನಿಲ್ದಾಣ ಜಾಗವೀಗ ಪಾರ್ಕಿಂಗ್‌ ತಾಣವಾಗಿದೆ. ಕಾಂಗ್ರೆಸ್‌ ಕಚೇರಿ ರಸ್ತೆ, ಪಿಎಲ್‌ಡಿ ಬ್ಯಾಂಕ್‌ ರಸ್ತೆಯಲ್ಲಿ ಬೈಕ್‌ಗಳು ಅಡ್ಡಾದಿಡ್ಡಿಯಾಗಿ ನಿಂತರೂ ಪೊಲೀಸರು ನಿಗಾ ವಹಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಪ್ರವಾಸಿಗರು, ದೇಶ, ವಿದೇಶದ ಪ್ರವಾಸಿಗರು, ಗಣ್ಯರು ಬಂದು ಹೋಗುವ ಪಟ್ಟಣದಲ್ಲಿ ಇರುವ ಒಂದು ಜೋಡಿ ರಸ್ತೆಯಲ್ಲಿ ಅಲ್ಲಲ್ಲಿ ವಾಹನಗಳನ್ನು ಪಾರ್ಕಿಂಗ್‌ ಮಾಡುತ್ತಿದ್ದರೂ ಪೊಲೀಸರು ಹೆದ್ದಾರಿಯಲ್ಲಿ ವಾಹನಗಳ ನಿಲುಗಡೆಗೆ ಬ್ರೇಕ್‌ ಹಾಕುತ್ತಿಲ್ಲ.

ಪಟ್ಟಣದ ಪರಿಮಿತಿಯ ಜೋಡಿ ರಸ್ತೆಯಿದೆ. ಆದರೆ ಸರ್ವೀಸ್‌ ರಸ್ತೆ ಇಲ್ಲ. ಹೆದ್ದಾರಿಯಲ್ಲಿಯೇ ಜನರು ನಡೆದು ಹೋಗುತ್ತಾರೆ. ಜತೆಗೆ ಹೆದ್ದಾರಿ ಬದಿ ವ್ಯಾಪಾರ ಕೂಡ ನಡೆಯುತ್ತಿದೆ. ಇದನ್ನು ಪ್ರಶ್ನಿಸಬೇಕಾದ ಪುರಸಭೆ ಆಡಳಿತ, ಪೊಲೀಸರು ಮೌನ ವಹಿಸಿದ್ದಾರೆ.

ಶಾಸಕರ ಮಾರಿಗೆ ಬೆಲೆ ಇಲ್ಲ:

ಎಚ್.ಎಂ.ಗಣೇಶ್‌ ಪ್ರಸಾದ್‌ ಶಾಸಕರಾದ ಹೊಸದರಲ್ಲಿ ಗುಂಡ್ಲುಪೇಟೆ ಪಟ್ಟಣ ಅಂದವಾಗಿ ಇಡಬೇಕು. ಜತೆಗೆ ಹೆದ್ದಾರಿ ಬದಿ ವಾಹನಗಳು ನಿಲುಗಡೆ ಬೇಕಾಗಿಲ್ಲ ಎಂದು ಸೂಚನೆ ನೀಡಿ ಒಂದೂವರೆ ಕಳೆದರೂ ಪುರಸಭೆ ಹಾಗೂ ಪೊಲೀಸ್‌ ಇಲಾಖೆ ಶಾಸಕರ ಸೂಚನೆ ಪಾಲಿಸುತ್ತಿಲ್ಲ.

ರಸ್ತೇಲೇ ಪಾರ್ಕಿಂಗ್‌:

ಮೈಸೂರು-ಊಟಿ ಹೆದ್ದಾರಿಯ ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದ ಮುಂದಿನ ಹೆದ್ದಾರಿ, ಸೂರ್ಯ ಬೇಕರಿ, ಬಸ್‌ ನಿಲ್ದಾಣ ಹಾಗೂ ಸಂಗಮ ಪ್ರತಿಷ್ಠಾನದ ಕಟ್ಟಡದ ಮುಂದೆ ನೂರಾರು ಬೈಕ್, ಕಾರುಗಳು ಎಲ್ಲೆಂದರಲ್ಲಿ ನಿಲ್ಲುತ್ತಿವೆ. ದೊಡ್ಡಹುಂಡಿ ಭೋಗಪ್ಪ ಕಾಲೇಜಿನ ಮುಂದಿನ ಫುಟ್‌ಪಾತ್‌ ಇದ್ದೂ ಇಲ್ಲದಂತಾಗಿದೆ. ಕಾರು, ಟೆಂಪೋ ಹೆದ್ದಾರಿಯಲ್ಲಿ ನಿಲ್ಲುವ ಕಾರಣ ಪಾದಚಾರಿಗಳು ಹೆದ್ದಾರಿಯಲ್ಲೇ ನಡೆದುಕೊಂಡು ತೆರಳುತ್ತಿದ್ದಾರೆ.

ಸುಳ್ಳು ಭರವಸೆ?:

ಪುರಸಭೆ ಮುಖ್ಯಾಧಿಕಾರಿ ಹಾಗೂ ಪೊಲೀಸ್‌ ಇನ್‌ಸ್ಪೆಪೆಕ್ಟರ್‌ ಹೆದ್ದಾರಿಯ ವ್ಯಾಪಾರ ಹಾಗೂ ಹೆದ್ದಾರಿಯಲ್ಲಿ ವಾಹನಗಳು ನಿಲ್ಲುವ ಸಂಬಂಧ ಪ್ರಶ್ನಿಸಿದರೆ ಜಂಟಿ ಕಾರ್ಯಾಚರಣೆ ಮಾಡುತ್ತೇವೆ ಎಂದು ಹೇಳಿ ವರ್ಷಗಳೇ ಉರುಳುತ್ತಿದ್ದು, ಪುರಸಭೆ ಹಾಗೂ ಪೊಲೀಸರ ಮಾತು ಸುಳ್ಳಾಗಿವೆ.

ದಂಡ ಪ್ರಯೋಗ ಮಾಡದ ಪೊಲೀಸರು:

ಪಟ್ಟಣದ ಪ್ರಮುಖ ಹೆದ್ದಾರಿಯಲ್ಲಿ ವಾಹನಗಳ ನಿಲ್ಲಿಸುವುದನ್ನುತಡೆಗಟ್ಟಲು ಪೊಲೀಸರು ಮೊದಲಿಗೆ ದಂಡದ ಪ್ರಯೋಗ ಮಾಡಿದರೆ ಹೆದ್ದಾರಿಯಲ್ಲಿ ವಾಹನಗಳು ನಿಲುಗಡೆ ತಪ್ಪಲಿದೆ. ಅಲ್ಲದೆ ಬ್ಯಾಂಕ್‌, ಹೋಟೆಲ್‌, ಬಾರ್‌ಗಳ ಮುಂದೆ ವಾಹನಗಳು ನಿಂತಾಗ ದಂಡ ಹಾಕಿದರೆ ರಸ್ತೆಯ ಬದಿಯಲ್ಲಿ ಪಾದಚಾರಿಗಳು ತಿರುಗಾಡಲು ಅನುಕೂಲವಾಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ