ಒಂದು ವಾರದಲ್ಲಿ ಹಾನಗಲ್ಲ ವಾಹನ ಸಂಚಾರ ವ್ಯವಸ್ಥೆ ಸುಗಮ

KannadaprabhaNewsNetwork |  
Published : Aug 14, 2026, 01:45 AM IST
ಹಾನಗಲ್ಲ ತಹಶೀಲ್ದಾರ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ಟಿಂಪೋ, ರಿಕ್ಷಾ ಸಂಘಗಳ ಪದಾಧಿಕಾರಿಗಳನ್ನುದ್ದೇಶಿಸಿ ತಹಶೀಲ್ದಾರ ವಿಠ್ಠಲ ಚೌಗುಲಾ ಮಾತನಾಡಿದರು. | Kannada Prabha

ಸಾರಾಂಶ

ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ವಾಹನ ದಟ್ಟಣೆ ನಿವಾರಣೆ, ವಾಹನ ನಿಲುಗಡೆಗೆ ಹೊಸ ವ್ಯವಸ್ಥೆ ಕಲ್ಪಿಸಲು ಒಂದು ವಾರದ ಕಾಲಾವಕಾಶ ನೀಡಿದ್ದು, ಇದಕ್ಕಾಗಿ ಸಾರ್ವಜನಿಕರು, ರಿಕ್ಷಾ ಟೆಂಪೋ ಸೇರಿದಂತೆ ವಿವಿಧ ವಾಹನಗಳ ಮಾಲೀಕರು ಸಹಕಾರ ನೀಡಬೇಕು ಎಂದು ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗುಲಾ ತಿಳಿಸಿದರು.

ಹಾನಗಲ್ಲ: ಪಟ್ಟಣದ ಬಸ್‌ ನಿಲ್ದಾಣ ಸೇರಿದಂತೆ ವಿವಿಧೆಡೆ ವಾಹನ ದಟ್ಟಣೆ ನಿವಾರಣೆ, ವಾಹನ ನಿಲುಗಡೆಗೆ ಹೊಸ ವ್ಯವಸ್ಥೆ ಕಲ್ಪಿಸಲು ಒಂದು ವಾರದ ಕಾಲಾವಕಾಶ ನೀಡಿದ್ದು, ಇದಕ್ಕಾಗಿ ಸಾರ್ವಜನಿಕರು, ರಿಕ್ಷಾ ಟೆಂಪೋ ಸೇರಿದಂತೆ ವಿವಿಧ ವಾಹನಗಳ ಮಾಲೀಕರು ಸಹಕಾರ ನೀಡಬೇಕು ಎಂದು ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗುಲಾ ತಿಳಿಸಿದರು.

ಗುರುವಾರ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಪುರಸಭೆ, ಪೊಲೀಸ್, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹಾಗೂ ರಿಕ್ಷಾ ಚಾಲಕರ ಸಂಘ, ಟೆಂಪೋ ಚಾಲಕರ ಸಂಘ ಪದಾಧಿಕಾರಿಗಳ ಜಂಟಿ ಸಭೆಯಲ್ಲಿ ಸೂಚನೆ ನೀಡಿದ ಅವರು, ಹಾನಗಲ್ಲ ಬಸ್ ನಿಲ್ದಾಣದ ಬಳಿ ವಿಪರೀತ ವಾಹನ ದಟ್ಟಣೆ ಇದೆ. ಇಲ್ಲಿರುವ ಕಿರಿದಾದ ರಸ್ತೆಗಳು ಇನ್ನಷ್ಟು ವಾಹನ ದಟ್ಟಣೆಯಿಂದ ಸಾರ್ವಜನಿಕರು, ಶಾಲಾ ಮಕ್ಕಳ ಓಡಾಟಕ್ಕೆ ಬಹಳಷ್ಟು ಅನಾನುಕೂಲವಾಗಿದೆ. ಬಸ್‌ನಿಲ್ದಾಣಕ್ಕೆ ಹೊಂದಿಕೊಂಡ ಟಿಜಿ ರಸ್ತೆ ಫುಟ್‌ಪಾತ್ ತುಂಬ ಗೂಡಂಗಡಿಗಳೇ ಇವೆ. ಇದರೊಂದಿಗೆ ರಿಕ್ಷಾಗಳು ಕೂಡ ಯಾವುದೇ ನಿಯಮ ಪಾಲಿಸದೆ ರಸ್ತೆಯನ್ನೆ ಆವರಿಸಿ ನಿಂತಿರುತ್ತವೆ. ಮಹಾತ್ಮಾಗಾಂಧಿ ವೃತ್ತವರೆಗೂ ವಿವಿಧ ಅಂಗಡಿಗಳು, ವಾಹನಗಳ ನಿಲುಗಡೆ ಸೇರಿದಂತೆ ಪ್ರಯಾಣಿಕರಿಗೆ ತೀರ ಅನಾನುಕೂಲವಾಗಿದೆ. ಹಾನಗಲ್ಲ ಶಾಸಕ ಶ್ರೀನಿವಾಸ್ ಮಾನೆ ಅವರು ಕಟ್ಟುನಿಟ್ಟಾಗಿ ಈ ಸಮಸ್ಯೆ ಪರಿಹರಿಸಲು ಸೂಚಿಸಿದ್ದು, ಕೂಡಲೇ ಇದನ್ನು ಸರಿಪಡಿಸಲು ಎಲ್ಲರೂ ಸಹಕರಿಸಬೇಕು. ಬಹುತೇಕ ಹಣ್ಣಿನ ಅಂಗಡಿಗಳು ಫುಟ್‌ಪಾತ್ ಮೇಲೆಯೆ ಇವೆ. ಹೊಸ ನಿಯಮಗಳಿಗೆ ವಿರುದ್ಧವಾಗಿ ನಡೆದರೆ ನಿರ್ದಾಕ್ಷಿಣ್ಯ ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಅಧಿಕಾರಿಗಳು ಹಾಗೂ ವಾಹನ ಚಾಲಕರೊಂದಿಗೆ ಚರ್ಚೆಯ ನಂತರ, ಪಟ್ಟಣದ ಟ್ರಾಫಿಕ್ ನಿಯಂತ್ರಣ, ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ, ತಡಸ್ ಗೊಂದಿ ರಸ್ತೆಯಲ್ಲಿ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ, ಕೂಡಲೇ ಪಾರ್ಕಿಂಗ್‌ಗಾಗಿ ಮಾರ್ಕಿಂಗ, ಆಟೋ ನಿಲ್ದಾಣ, ಸ್ಟೇಟ್ ಬ್ಯಾಂಕ್ ರಸ್ತೆ ದಟ್ಟಣೆ ನಿಯಂತ್ರಣ, ಪಟ್ಟಣದಲ್ಲಿ ಹಗಲು ಹೊತ್ತಿನಲ್ಲಿ ವಾಹನಗಳಿಂದ ವಸ್ತುಗಳ ತೆರವು ನಿಯಂತ್ರಣ, ಪ್ರತಿ ದಿನ ಸಂಜೆ ಹಾಗೂ ಬೆಳಿಗ್ಗೆ ಬಸ್‌ನಿಲ್ದಾಣ ಹಾಗೂ ಮಹಾತ್ಮಾಗಾಂಧಿ ವೃತ್ತದಲ್ಲಿ ಪೊಲೀಸ್ ಕಣ್ಗಾವಲು ಸೇರಿದಂತೆ ೭ ದಿನಗಳಲ್ಲಿ ಎಲ್ಲ ವ್ಯವಸ್ಥೆ ಮಾಡಿ ಸೂಚನೆ ನೀಡಲಾಗುತ್ತದೆ. ಅದಕ್ಕೆ ಸಾರ್ವಜನಿಕರು, ವಾಹನ ಮಾಲೀಕರು ಚಾಲಕರು ಸಹಕರಿಸಬೇಕು ಎಂದು ತಹಸೀಲ್ದಾರ್ ವಿಠ್ಠಲ ಚೌಗುಲಾ ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಸಿಪಿಐ ಬಸವರಾಜ ಹಳಬಣ್ಣನವರ, ಆಡೂರು ಪಿಎಸ್‌ಐ ಕುಮಾರ ಕೂರಗುಂದ, ಕ್ರೈಂ ಪಿಎಸ್‌ಐ ದೀಪಾಲಿ ಗುಡೋಡಗಿ, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಪರಶುರಾಮ ಪ್ರಭಾಕರ, ಸಹಾಯಕ ನಿರೀಕ್ಷಕ ಎಂ.ಬಿ. ಚವ್ಹಾಣ, ಟಿಂಪೋ ಮಾಲೀಕರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಆರ್.ಎಚ್.ರಾಯಪ್ಪ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚುಟುಕುಗಳಿದೆ ಅದ್ಭುತ ಸಂದೇಶ ಶಕ್ತಿ: ಡಾ. ಅನ್ನದಾನೀಶ್ವರ ಶ್ರೀ
ಎಸ್.ಎಸ್. ಪಾಟೀಲ ಶರಣ ಪಥದ ಹಿರಿಯ ಜೀವಿ: ಡಾ. ತೋಂಟದ ಸಿದ್ದರಾಮ ಸ್ವಾಮೀಜಿ