ಎಸ್.ಜಿ. ತೆಗ್ಗಿನಮನಿ
ಪಟ್ಟಣದ ಮಹಾವೀರ ವೃತ್ತದಲ್ಲಿ ಪ್ರತಿ ವಾರಕ್ಕೊಮ್ಮೆ ಕಾಯಿಪಲ್ಯೆ ಸಂತೆ ನಡೆಯುತ್ತದೆ. ಆ ವೇಳೆ ರಸ್ತೆಯಲ್ಲಿ ಮಿತಿ ಮೀರಿದ ವಾಹನ ಸಂಚಾರ, ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿರುವುದರಿಂದ ಜನರಿಗೆ ಓಡಾಡಲು ದಾರಿ ಇಲ್ಲವಾಗಿದೆ.
ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ಬೈಕ್ ಸವಾರರು, ಗೂಡ್ಸ್ ವಾಹನದವರು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದರಿಂದ ಜನರು ಸಂತೆ ಮಾಡಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಬ್ಯಾಂಕ್, ಇತರ ಖಾಸಗಿ ಫೈನಾನ್ಸ್ ಸಂಸ್ಥೆಗಳ ಮುಂದೆ ಬೈಕ್ ಸವಾರರು ನಡುರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿದರೂ ಪೊಲೀಸರು ವಾಹನ ಸವಾರರ ಮೇಲೆ ಕಾನೂನು ಕ್ರಮ ಜರುಗಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂತನ ಮಾರುಕಟ್ಟೆಯ ಕಾಮಗಾರಿಯಿಂದ ಕಾಯಿಪಲ್ಯೆ ಮಾರಾಟ ಮಾಡುವ ವ್ಯಾಪಾರಸ್ಥರು ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತದ ವರೆಗೆ ರಸ್ತೆಯ ಪಕ್ಕದಲ್ಲಿ ಕಾಯಿಪಲ್ಯೆ ಮಾರಾಟ ಮಾಡುತ್ತಿರುವುದರಿಂದ ಜನರಿಗೆ ತೊಂದರೆಯಾಗಿದೆ. ನೂತನ ಮಾರುಕಟ್ಟೆಗೆ ಕಾಯಿಪಲ್ಯೆ ಮಾರುಕಟ್ಟೆ ಸ್ಥಳಾಂತರವಾದ ತಕ್ಷಣವೆ ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸುವ ಸವಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಪಿಐ ಸತ್ಯಪ್ಪ ಮಾಳಗೊಂಡ ಹೇಳಿದ್ದಾರೆ.
ಶೀಘ್ರ ಸ್ಥಳಾಂತರ: ನೂತನ ಕಾಯಿಪಲ್ಯೆ ಮಾರುಕಟ್ಟೆ ಕಾಮಗಾರಿ ಮುಗಿದಿದೆ. 2ರಿಂದ 3 ದಿನಗಳಲ್ಲಿ ರಸ್ತೆಯಲ್ಲಿ ಮಾರಾಟ ಮಾಡುವ ಕಾಯಿಪಲ್ಯೆ ವ್ಯಾಪಾರಸ್ಥರನ್ನು ಹೊಸ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುವುದು ಎಂದು ಪುರಸಭೆ ಅಧಿಕಾರಿ ಸುಭಾಸ ಕುದಂಪುರ ತಿಳಿಸಿದರು.