ಕನ್ನಡಪ್ರಭ ವಾರ್ತೆ ಬೇಲೂರು
ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ, ಆಟೋ ನಿಲ್ದಾಣದ ಪಕ್ಕ ನಾಲ್ಕೈದು ಖಾಸಗಿ ಆಂಬುಲೆನ್ಸ್ ಚಾಲಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂದು ಆಟೋ ಚಾಲಕರು ತಾಲೂಕು ಆಡಳಿತ ವೈದ್ಯಾಧಿಕಾರಿಗಳಿಗೆ ದೂರು ಸಲ್ಲಿಸಿದರು.ಸುಮಾರು ೨೦ ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಗೆ ಬರುವಂತಹ ಒಳರೋಗಿಗಳಿಗೆ ಅನುಕೂಲಕ್ಕಾಗಿ ಆಟೋ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ಆಟೋ ನಿಲ್ದಾಣದಲ್ಲಿ ಹಲವರು ತಮ್ಮ ಆಟೋಗಳನ್ನು ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಎರಡು ದಿನಗಳ ಹಿಂದೆ ಇಲ್ಲಿ ಮತ್ತೆ ಎರಡು ಖಾಸಗಿ ಆಂಬುಲೆನ್ಸ್ ಗಳನ್ನು ರಸ್ತೆಗೆ ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಹಲವಾರು ಬಾರಿ ಸಂಘಟನೆಗಳು ಮೂಲಕ ಮನವಿ ಮಾಡಿದ್ದವು.ಹೊಯ್ಸಳ ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಅಂಜುಮ್ ಮಾತನಾಡಿ, ಸುಮಾರು ೨೦ ವರ್ಷಗಳಿಂದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಆಟೋ ನಿಲ್ದಾಣ ಸ್ಥಾಪಿಸಿ ಬಾಡಿಗೆ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇವೆ. ಹಿಂದೆ ಒಂದು ಖಾಸಗಿ ಆಂಬುಲೆನ್ಸ್ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮೂರ್ನಾಲ್ಕು ಖಾಸಗಿ ಆಂಬುಲೆನ್ಸ್ ಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ನಮಗೂ ತೊಂದರೆಯಾಗುತ್ತಿದೆ. ಕೇಳಿದರೆ ನಮ್ಮ ಮೇಲೆಯೇ ದೌರ್ಜನ್ಯ ಮಾಡಲು ಬರುತ್ತಾರೆ. ಅಲ್ಲದೇ ಇಲ್ಲಿನ ಆಟೋ ನಿಲ್ದಾಣವನ್ನೇ ತೆಗೆಸುತ್ತೇವೆ ಎಂದು ಧಮ್ಕಿ ಹಾಕುತ್ತಾರೆ. ಕೆಲವು ಆಂಬುಲೆನ್ಸ್ ವಾಹನ ಚಾಲಕರ ಬಳಿ ಸರಿಯಾದ ದಾಖಲಾತಿಗಳಿಲ್ಲದೇ ವಾಹನ ಓಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹೊಯ್ಸಳ ಆಟೋ ಚಾಲಕರ ಮತ್ತು ಮಾಲಿಕರ ಸಂಘದ ಅಧ್ಯಕ್ಷ ದೀಪು ಮಾತನಾಡಿ, ಚಾಲಕರೆಂದರೆ ಎಲ್ಲರೂ ಒಂದೇ, ನಾವು ಸಾರ್ವಜನಿಕರ ಸೇವೆ ಮಾಡಲು ಬಂದಿದ್ದೇವೆ. ನಮ್ಮಲ್ಲಿ ಸುಮಾರು ೨೦೦ ಕುಟುಂಬಗಳುನು ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಒಂದು ತಿಂಗಳ ಹಿಂದೆ ಖಾಸಗಿ ಅಂಬುಲೆನ್ಸ್ ಚಾಲಕರು ತಮ್ಮ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ನಮಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಯಾರಿಗೂ ಸಹ ಅನ್ಯಾಯವಾಗದಂತೆ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಬಗೆಹರಿಸುತ್ತಾರೆ ಎಂದು ನಂಬಿದ್ದೇವೆ ಎಂದರು.ತಾಲೂಕು ಆರೋಗ್ಯ ಅಧಿಕಾರಿ ಡಾ ವಿಜಯ್ ಮಾತನಾಡಿ, ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ನಾಲ್ಕು ಅಂಬುಲೆನ್ಸ್ ಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಖಾಸಗಿ ವಾಹನಗಳು ಆಸ್ಪತ್ರೆ ಮುಂಭಾಗದಲ್ಲಿ ನಿಲ್ಲುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಖಾಸಗಿ ಆಂಬುಲೆನ್ಸ್ ಗಳನ್ನು ಯಾರಿಗೂ ತೊಂದರೆಯಾಗದಂತೆ ೧೦೦ ಮೀ. ದೂರದಲ್ಲಿ ನಿಲ್ಲಿಸಬೇಕು. ಈಗಾಗಲೇ ಇಲ್ಲಿ ಆಟೋ ನಿಲ್ದಾಣ ಸುಮಾರು ವರ್ಷಗಳಿಂದ ಇದ್ದು, ಖಾಸಗಿ ಆಂಬುಲೆನ್ಸ್ ಗಳ ತೊಂದರೆಯ ಬಗ್ಗೆ ನಾವು ಮೇಲಾಧಿಕಾರಿಗಳಿಗೆ ದೂರು ನೀಡಲಿದ್ದೇವೆ ಎಂದರು.ಆಟೋ ಚಾಲಕರಾದ ಶೌಕತ್, ರಫೀಕ್, ಲಕ್ಷ್ಮಣ್, ಪಾಂಡು ರವೀಶ್, ಇರ್ಫಾನ್, ಆರೀಫ್, ಮಂಜು, ಸಿದ್ದಿಕ್, ಜಮೀನ್ ಇತರರು ಇದ್ದರು.