ಕಿರಿದಾದ ರಸ್ತೆ ಬದಿಯಲ್ಲೇ ಸರಕು ಇಟ್ಟು ಮಾರಾಟ । ನಿಲುಗಡೆಗೆ ಸ್ಥಳ ಇಲ್ಲದೆ ದಟ್ಟಣೆ । ಸಾರ್ವಜನಿಕರ ಆಕ್ರೋಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗೌರಿ ಹಬ್ಬದ ದಿನವಾದ ಶುಕ್ರವಾರ ಪಟ್ಟಣದ ಜನನಿಬಿಡ ರಸ್ತೆಯಾದ ಕಿತ್ತೂರು ರಾಣಿ ಚೆನ್ನಮ್ಮ (ಕೆಆರ್‌ಸಿ) ಜನಸಂದಣಿಯ ಜತೆಗೆ ಬೈಕ್, ಆಟೋ, ಕಾರು, ಸೈಕಲ್ ಸವಾರರ ಸಂಚಾರ ಹೆಚ್ಚಾದ ಹಿನ್ನೆಲೆ ಸಂಚಾರ ದಟ್ಟಣೆ ಉಂಟಾಗಿ ವಾಹನಗಳ ಸವಾರರು, ಪಾದಚಾರಿಗಳು ಸಂಚರಿಸಲು ಪರದಾಡಿದರು.
ಮೊದಲೇ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ಕಿರುದಾಗಿದೆ. ಅಲ್ಲದೆ ಬಹುತೇಕ ಅಂಗಡಿ ಮುಂಗಟ್ಟುಗಳ ಮುಂದೆ ಸರಕು ಇಟ್ಟುಕೊಂಡ ಕಾರಣ ರಸ್ತೆ ಮತ್ತಷ್ಟು ಕಿರಿದಾಗಿದೆ. ಇದು ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.ಗೌರಿ, ಗಣೇಶ ಹಬ್ಬದ ಕಾರಣ ಪಟ್ಟಣದಲ್ಲಿ ಜನರ ಸಂಚಾರ ಹೆಚ್ಚಿದೆ. ಅಲ್ಲದೆ ಹಬ್ಬದ ಸರಕು, ಸಾಮಾಗ್ರಿ, ಬಟ್ಟೆ ಖರೀದಿಸಲು ಜನರು ಬಂದ ಕಾರಣ ಸಂಚಾರಕ್ಕೆ ಈ ರಸ್ತೆಯಲ್ಲಿ ಕಿರಿ ಕಿರಿ ಉಂಟಾಗಿ ಜನರು ಬೇಸತ್ತರು. ರಸ್ತೆ ಬಿಟ್ಟು ಹೋದ್ರೆ ಸಾಕು ಎಂದು ಅಣ್ಣೂರು ಕೇರಿಯ ಮಹಿಳೆಯೊಬ್ಬರು ರಸ್ತೆಯಲ್ಲಿ ಗೊಣಗುತ್ತ ತೆರಳಿದರು.
ಜನಸಂದಣಿ ಹೆಚ್ಚಿದ್ದ ಕಾರಣ ಈ ರಸ್ತೆಯಲ್ಲಿಯೇ ಕಾರು, ಆಟೋ, ಬೈಕ್, ಸೈಕಲ್ ಸವಾರರು ಬಂದ ಕಾರಣ ಆಗಾಗ್ಗೆ ಸಂಚಾರ ದಟ್ಟಣೆ ಆಗಿದೆ. ಪೊಲೀಸರಿಗೆ ಮಾಹಿತಿ ತಿಳಿದು ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಪರಶಿವಮೂರ್ತಿ, ಸಬ್ ಇನ್‌ಸ್ಪೆಕ್ಟರ್ ಸಾಹೇಬ ಗೌಡ ಟ್ರಾಫಿಕ್ ಜಾಂ ತಡೆಗಟ್ಟಲು ಕೆಆರ್‌ಸಿ ರಸ್ತೆಯಲ್ಲಿ ಸಂಚರಿಸಿ ರಸ್ತೆ ಬದಿ ನಿಂತ ಬೈಕ್, ಕಾರು, ಆಟೋಗಳಿಗೆ ಬೇಗ ತೆರಳಿ ಎಂದು ಸೂಚನೆ ನೀಡುತ್ತಿದ್ದರು.ಆಕ್ರೋಶ:
ಪುರಸಭೆ ಮುಖ್ಯಾಧಿಕಾರಿಗಳು ಕಳೆದೊಂದು ವಾರದ ಹಿಂದೆ ಕೆಆರ್‌ಸಿ ರಸ್ತೆಯಲ್ಲಿ ರಸ್ತೆ ಬದಿ ಯಾವುದೇ ಸರಕು, ಸಾಮಾಗ್ರಿ ಇಡಬೇಡಿ ಎಂದು ಎಚ್ಚರಿಕೆ ಕೊಟ್ಟು ಬಂದರೂ ಅಂಗಡಿ ಇಟ್ಟುಕೊಂಡಿರುವ ಬಹುತೇಕ ವರ್ತಕರು ರಸ್ತೆ ಬದಿಯೇ ಸರಕು ಇಟ್ಟಿದ್ದನ್ನು ಕಂಡ ಸಾರ್ವಜನಿಕರು ಪುರಸಭೆ ವಿರುದ್ಧ ಆಕ್ರೋಶ ಹೊರ ಹಾಕಿದರು.ಕೆಆರ್‌ಸಿ ರಸ್ತೆಯಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ಬೈಕ್, ಕಾರು, ಆಟೋಗಳು ಇದೇ ರಸ್ತೆಯಲ್ಲಿ ಸರಕು, ಸಾಮಾಗ್ರಿ ಖರೀದಿಗೆ ರಸ್ತೆ ಬದಿ ನಿಲ್ಲಿಸುತ್ತಿದ್ದ ಕಾರಣ ಟ್ರಾಫಿಕ್ ಜಾಂ ಆಗಿತ್ತು. ರಸ್ತೆಯಲ್ಲಿ ಗಸ್ತು ನಡೆಸಿ ಟ್ರಾಫಿಕ್ ಕಿರಿ ಕಿರಿ ತಪ್ಪಿಸುವ ಕೆಲಸ ಪೊಲೀಸರು ಮಾಡಿದ್ದಾರೆ.
ಸಾಹೇಬ ಗೌಡ ಆರ್.ಬಿ., ಸಬ್ ಇನ್‌ಸ್ಪೆಕ್ಟರ್.