ಹದಗೆಟ್ಟ ರಸ್ತೆಯಲ್ಲಿ ಸಂಚಾರವೇ ನರಕಯಾತನೆ!

KannadaprabhaNewsNetwork |  
Published : May 29, 2025, 12:26 AM IST
ಮಹಾವೀರ ವೃತ್ತದಿಂದ ಶಿಕ್ಷಕರ ಕಾಲೋನಿಯ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿರುವುದು. | Kannada Prabha

ಸಾರಾಂಶ

ತೇರದಾಳ ಪಟ್ಟಣದ ಮಹಾವೀರ ವೃತ್ತದಿಂದ ಶಿಕ್ಷಕರ ಕಾಲೋನಿಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಇತ್ತ ತಿರುಗಿಯೂ ನೋಡುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ತೇರದಾಳ (ರ-ಬ)

ಪಟ್ಟಣದ ಮಹಾವೀರ ವೃತ್ತದಿಂದ ಶಿಕ್ಷಕರ ಕಾಲೋನಿಯವರೆಗೆ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಇತ್ತ ತಿರುಗಿಯೂ ನೋಡುತ್ತಿಲ್ಲ. ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಅಲ್ಪಸಂಖ್ಯಾತರೆ ಹೆಚ್ಚಿನ ಸಂಖ್ಯೆಯಲ್ಲಿ ವಾಸಮಾಡುವ ವಿವೇಕಾನಂದ ಕಾಲೋನಿ, ಶಿಕ್ಷಕರ ಕಾಲೋನಿ, ಸವದಿ ನಗರ, ಶಿವಾನಂದ ಗಲ್ಲಿಯ ನಿವಾಸಿಗಳು ಈ ಮಾರ್ಗದ ಮೂಲಕ ಸಂಚರಿಸುತ್ತಾರೆ. ಜೆವಿ ಮಂಡಳದ ಎರಡು ಪ್ರೌಢಶಾಲೆಗಳು, ಪ್ರಾಥಮಿಕ ಶಾಲೆ, ಪಿಯು ಹಾಗೂ ಪದವಿ ಕಾಲೇಜುಗಳು, ಪಾಲಿಟೆಕ್ನಿಕ್ ಕಾಲೇಜು, ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಗುರುಕುಲ ವಸತಿ ನಿಲಯ, ಕಾಲೇಜು, ಬಾಲಕರ ಹಾಗೂ ಬಾಲಕಿಯರ ವಸತಿ ನಿಲಯಗಳು ಇಲ್ಲಿವೆ. ಹೀಗಾಗಿ ವಿದ್ಯಾರ್ಥಿಗಳು, ಪಾಲಕರು ಈ ಮಾರ್ಗವಾಗಿ ಹೆಚ್ಚಾಗಿ ಓಡಾಡುತ್ತಾರೆ.

ಮಹಾರಾಷ್ಟ್ರ, ಗೋವಾ, ಗುಜರಾತ ಸೇರಿದಂತೆ ಬೇರೆ ರಾಜ್ಯಗಳಿಂದ ಮೆಡಿಕಲ್ ವಿದ್ಯಾರ್ಥಿಗಳ ಪಾಲಕರು ಆಗಾಗ್ಗೆ ನಗರಕ್ಕೆ ಬಂದುಹೋಗುತ್ತಾರೆ. ಗುರುಕುಲ ಆವರಣದಲ್ಲಿರುವ ಮಂಗಲ ಕಾರ್ಯಾಲಯದಲ್ಲಿ ಮದುವೆ ಇತರ ಕಾರ್ಯಕ್ರಮ ವರ್ಷಪೂರ್ತಿ ನಡೆಯುತ್ತವೆ. ಹೀಗಾಗಿ ನಿತ್ಯ ನೂರಾರು ಜನರು ಸಂಚರಿಸುತ್ತಾರೆ.

ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಶಾಲಾ-ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಸಾಗುವಾಗ ಅನೇಕ ಬಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಹನುಮಾನ ದೇವಸ್ಥಾನ ಬಳಿಯಲ್ಲಿನ ಚರಂಡಿ ಪೈಪ್ ಮೇಲೆಯೇ ಕಾಣುತ್ತಿದೆ. ಬೈಕ್ ಸವಾರರಿಗೆ ತುಂಬಾ ತೊಂದರೆಯಾಗುತ್ತಿದೆ. ಸುಮಾರು ೫೦೦ ರಿಂದ ೮೦೦ಮೀ. ಉದ್ದದ ರಸ್ತೆಯ ದುರಸ್ತಿ ಕಾರ್ಯಕ್ಕೂ ಹಣ ಇಲ್ಲವೆಂದರೆ ಹೇಗೆ ? ಎಂದು ಮಹಾರಾಷ್ಟ್ರದ ರಾಜಾರಾಮ್ ಪಾಟೀಲ, ಮುಕುಂದ ಪದಕೆ ಅಚ್ಚರಿ ವ್ಯಕ್ತಪಡಿಸಿದರು.

ಕೆಸರುಮಯವಾದ ರಸ್ತೆ:

ಸ್ವಲ್ಪ ಮಳೆ ಬಂದರೆ ಸಾಕು ರಸ್ತೆಯೆಲ್ಲ ಕೆಸರುಮಯವಾಗುತ್ತದೆ. ಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ. ಗುರುಕುಲ ರಸ್ತೆಗೆ ಗಾಯತ್ರಿ ದೇವಸ್ಥಾನ ರಸ್ತೆ ಬಂದು ಕೂಡುವಲ್ಲಿ ಚರಂಡಿ ನಡು ರಸ್ತೆಯಲ್ಲೇ ಬಾಯಿ ತೆರೆದು ನಿಂತಿದೆ. ಆಗಾಗ್ಗೆ ಅಲ್ಲಿ ಬೈಕ್‌ಗಳು ಸಿಕ್ಕು ಹಾಕೊಂಡು ಬಿದ್ದ ಉದಾಹರಣೆಗಳು ಸಾಕಷ್ಟಿವೆ.

ಬೆಳಕು ನೀಡದ ಬೀದಿದೀಪಗಳು:

ಮಹಾವೀರ ವೃತ್ತದಿಂದ ಶಿಕ್ಷಕರ ಕಾಲೋನಿವರೆಗೆ ಬೀದಿದೀಪಗಳು ತೀರಾ ಕಡಿಮೆ ಬೆಳಕು ಬೀರುತ್ತವೆ. ಕೆಲವು ದೀಪಗಳಂತೂ ಉರಿಯುವುದೇ ಇಲ್ಲ. ರಾತ್ರಿ ವೇಳೆ ಈ ರಸ್ತೆಯ ಮೂಲಕ ಸಂಚರಿಸುವವರಿಗೆ ಕತ್ತಲೆಯೇ ಎದುರಾಗುತ್ತದೆ.

ಬೇಗನೆ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು. ಇಲ್ಲವಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸ್ಥಳೀಯರಾದ ರಾಜೇಂದ್ರ ನಡುವಿನಮನಿ, ಡಾ.ಪಿ.ಆರ್. ಶೇಡಬಾಳ, ಕೆ.ಐ. ಪತ್ತಾರ, ಜಿ.ಎಸ್. ಹಾವನ್ನವರ, ಎಂ.ಡಿ. ಓಗಿ, ಪ್ರವೀಣ ಬಾಳಿಗೇರಿ, ಎಸ್.ಎನ್. ಕೋಹಳ್ಳಿ, ಎಸ್.ಆರ್. ರಾವಳ, ಯುನೂಸ್‌ ಸನದಿ, ಎಂ.ಎ. ಡೋರ್ಲೆ, ಆರ್.ಎಸ್. ಅಲಗುಂಡಿ, ಎಂ.ವಿ. ಪತ್ತಾರ, ಪ್ರಕಾಶ ಹಾಡಕಾರ, ಸುನೀಲ್ ಮಾನೆ, ಕೇದಾರಿ ಪುಟಾಣಿ, ಪ್ರಕಾಶ ನಿಂಬರಗಿ ಸೇರಿದಂತೆ ಅನೇಕರು ಆಗ್ರಹಿಸಿದ್ದಾರೆ.ಮಹಾವೀರ ವೃತ್ತದಿಂದ ಶಿಕ್ಷಕರ ಕಾಲೋನಿಯ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಕಡಿಮೆ ಅನುದಾನದಲ್ಲಿ ದುರಸ್ತಿ ಸಾಧ್ಯವಿಲ್ಲ. ಹೆಚ್ಚಿನ ಅನುದಾನ ತರಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತೇವೆ. ಅನುದಾನ ಬಂದ ಕೂಡಲೆ ರಸ್ತೆ ಸುಧಾರಣೆ ಕಾಮಗಾರಿ ಮಾಡಲಾಗುವುದು. ಎರಡು ದಿನಗಳಲ್ಲಿ ಬೀದಿ ದೀಪ ಸರಿಪಡಿಸಲಾಗುವುದು.

- ಆನಂದ ಕೆಸರಗೊಪ್ಪ, ಮುಖ್ಯಾಧಿಕಾರಿ, ಪುರಸಭೆ ತೇರದಾಳ

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ