ಪೊಲೀಸ್ ಇಲಾಖೆಯಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಸಲ್ಲದು : ಕಾಗೇರಿ

KannadaprabhaNewsNetwork |  
Published : May 29, 2025, 12:24 AM ISTUpdated : May 29, 2025, 01:00 PM IST
vishweshwar hegde kageri

ಸಾರಾಂಶ

ಜಿಲ್ಲೆಯಲ್ಲಿ ಕಳ್ಳ ಮಾರ್ಗದಿಂದ ಗೋ ಸಾಗಾಣಿಕೆ ನಡೆದು ಗೋ ಹತ್ಯೆ ನಡೆಯುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ.

ಶಿರಸಿ: ಜಿಲ್ಲೆಯಲ್ಲಿ ಕಳ್ಳ ಮಾರ್ಗದಿಂದ ಗೋ ಸಾಗಾಣಿಕೆ ನಡೆದು ಗೋ ಹತ್ಯೆ ನಡೆಯುತ್ತಿರುವುದು ಜನರಲ್ಲಿ ಆತಂಕ ಹುಟ್ಟಿಸಿದೆ. ಪೊಲೀಸ್ ಇಲಾಖೆಯ ಆಡಳಿತದಲ್ಲಿ ಕಾಂಗ್ರೆಸ್ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಿ, ಅವರು ಮುಕ್ತವಾಗಿ ಕೆಲಸ ನಿರ್ವಹಸಲು ಅವಕಾಶ ನೀಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.

ಅವರು ಗುರುವಾರ ನಗರದ ಸಂಸದರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ಕೆಎಚ್‌ಬಿ ಕಾಲನಿಯ ವಿವೇಕಾನಂದನಗರ, ಇಸಳೂರಿನಲ್ಲಿ ಕೊಟ್ಟಿಗೆಯಲ್ಲಿದ್ದ ೩ ದನ ಕದ್ದೊಯ್ದಿದ್ದಾರೆ. ಇದು ಆಕಸ್ಮಿಕ ಘಟನೆಯಲ್ಲ. ಮುಸ್ಲಿಮರ ಹಬ್ಬದ ಸಮಯದಲ್ಲಿ ಗೋ ಸಾಗಾಣಿಕೆ ಮತ್ತು ಗೋ ವಧೆ ಹೆಚ್ಚಾಗುತ್ತಿದೆ. ಅಪರಾಧಿ ಮನಸ್ಥಿತಿಯವರಿಗೆ ಕಾಂಗ್ರೆಸ್ ಸರ್ಕಾರ ನಮ್ಮದು ಎಂದುಕೊಂಡಿರುವುದಕ್ಕೆ ಅಪರಾಧಿಗಳಿಂದ ಅಪರಾಧ ಕೃತ್ಯ ಆಗುತ್ತಿದೆ. ಸ್ವತಃ ಗೃಹ ಸಚಿವರು ತನಿಖೆ ಎದುರಿಸುತ್ತಿದ್ದಾರೆ. ಪೊಲೀಸ್ ಇಲಾಖೆ ಅಸಹಾಯಕ ಸ್ಥಿತಿಗೆ ತಲುಪಿದೆ. ಕಾಂಗ್ರೆಸ್ ಪುಡಾರಿಗಳ ಒತ್ತಡಕ್ಕೆ ಮಣಿದು ಪೊಲೀಸ್ ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಪೊಲೀಸ್ ಬೀಟ್ ವ್ಯವಸ್ಥೆ, ಗಸ್ತು ಎಲ್ಲವೂ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.

ನೀತಿ ಆಯೋಗದ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ನಿರಂತರವಾಗಿ ಗೈರಾಗುತ್ತಾರೆ. ಪ್ರಧಾನಮಂತ್ರಿ ಎದುರು ನಿಂತು ಮಾತನಾಡಲು ಧೈರ್ಯವಿಲ್ಲ. ಸಿದ್ದರಾಮಯ್ಯ ಕೇವಲ ಭಾಷಣದಲ್ಲಿ ಮಾತ್ರ ತಮ್ಮ ಪೌರುಷ ತೋರಿಸುವುದನ್ನು ಬಿಟ್ಟು ಪ್ರಧಾನಿ ಬಳಿ ತಮ್ಮ ರಾಜ್ಯಕ್ಕೆ ಅನುದಾನ ಹೇಳಬೇಕಿತ್ತು. ನೀತಿ ಆಯೋಗದ ಎದುರು ಮುಖ ತೋರಿಸಲು ಸಿಎಂ, ಡಿಸಿಎಂಗೆ ಸಾಧ್ಯವಾಗುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ಟ ನಿಡಗೋಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಶಿರಸಿ ನಗರ ಮಂಡಲಾಧ್ಯಕ್ಷ ಆನಂದ ಸಾಲೇರ, ಗ್ರಾಮೀಣ ಮಂಡಲಾಧ್ಯಕ್ಷೆ ಉಷಾ ಹೆಗಡೆ, ನಗರಸಭೆ ಉಪಾಧ್ಯಕ್ಷ ರಮಾಕಾಂತ್ ಭಟ್, ಸಹಕಾರಿ ಪ್ರಕೋಷ್ಠದ ಆರ್.ವಿ. ಹೆಗಡೆ ಚಿಪಗಿ, ರವಿಚಂದ್ರ ಶೆಟ್ಟಿ ಇದ್ದರು.

ಶಿವರಾಮ ಹೆಬ್ಬಾರ ಬಿಜೆಪಿಯಿಂದ ಶಾಸಕರಾದವರು. ಅವರು ಪಕ್ಷದ ಚಟುವಟಿಕೆಯಲ್ಲಿ ಒಂದಾಗಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯ ಪಡೆದು ಕೇಂದ್ರ ಶಿಸ್ತು ಸಮಿತಿ ನಿರ್ಣಯ ಕೈಗೊಂಡಿದೆ. ಬಿಜೆಪಿಯಲ್ಲಿ ಉಸಿರುಗಟ್ಟುವ ಸ್ಥಿತಿ ಇದೆ ಎಂದಾಗ ಶಾಸಕತ್ವಕ್ಕೆ ರಾಜೀನಾಮೆ ನೀಡಿ, ಮುಂದಿನ ರಾಜಕೀಯ ಹೆಜ್ಜೆ ಇಡಬೇಕಿತ್ತು. ಈ ಸ್ಥಾನದ ಪ್ರಯೋಜನ ಪಡೆದು ಬಿಜೆಪಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಇದೊಂದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದರು.

PREV
Read more Articles on

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ