ಹಾವೇರಿ: ಇತ್ತೀಚೆಗೆ ರೋಡ್ ಶೋ ನಡೆಸಿ ಸುದ್ದಿಯಾಗಿದ್ದ ಹಾನಗಲ್ಲ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳಿಗೆ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿರುವ ಬಸವರಾಜ ಎಂಬ ವ್ಯಕ್ತಿಯೊಬ್ಬರು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಜೈಲಿನಲ್ಲಿ ಇತರೆ ಕೈದಿಗಳೊಂದಿಗೆ ಗಲಾಟೆ ಮಾಡುತ್ತಾರೆ, ಅವರಿಗೆ ಜೈಲಿನಲ್ಲಿ ಸಕಲ ಸೌಲಭ್ಯ ಸಿಗುತ್ತಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.ಹಾವೇರಿ ಜೈಲಿನಲ್ಲಿ ಗ್ಯಾಂಗ್ ರೇಪ್ ಆರೋಪಿಗಳು ಆಡಿದ್ದೇ ಆಟವಾಗಿದೆ. ಈ ಆರೋಪಿಗಳಿಗೆ ಜೈಲು ಅನ್ನೋದು ಸ್ವರ್ಗದಂತಿದೆ. ಜೈಲಿನೊಳಗೆ ಯಾರು ಬಂದರೂ ಅವರಿಗೆ ಪ್ರಕರಣದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಹಲ್ಲೆ ಮಾಡುತ್ತಾರೆ. ಇತ್ತೀಚೆಗೆ ಹಿರೇಕೆರೂರು ತಾಲೂಕು ಭೋಗಾವಿ ಗ್ರಾಮದ ದಲಿತ ಯುವಕ ಸುದೀಪ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ. ಜೈಲಿನಲ್ಲಿ ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳು ಹೇಳಿದ ಕೆಲಸವನ್ನು ಉಳಿದವರು ಮಾಡಬೇಕಿದೆ. ಹೊರಗಡೆ ರೋಡ್ ಶೋ ನಡೆಸಿದ್ದಕ್ಕಿಂತ 10 ಪಟ್ಟು ಒಳಗಡೆ ದೌರ್ಜನ್ಯ ಮಾಡುತ್ತಿದ್ದಾರೆ. ಗ್ಯಾಂಗ್‌ರೇಪ್ ಆರೋಪಿಗಳಿಗೆ ದಿನಾ ಗುಟ್ಕಾ, ಬಿರಿಯಾನಿ ಬರುತ್ತೆ. ಜೈಲು ಸಿಬ್ಬಂದಿಗೆ ಏಕವಚನದಲ್ಲೇ ಬೈತಾರೆ, ಆದರೆ ಸಿಬ್ಬಂದಿ ಏನೂ ಮಾಡ್ತಿಲ್ಲ, ಹೀಗಾಗಿ ಅವರನ್ನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಹಾನಗಲ್ಲ ಗ್ಯಾಂಗ್‌ರೇಪ್ ಆರೋಪಿಗಳಿಗೆ ಜಾಮೀನು ಸಿಗುತ್ತಿದ್ದಂತೆ ರೋಡ್ ಶೋ ನಡೆಸಿದ್ದರು. ಈ ಬಗ್ಗೆ ವರದಿಯಾಗುತ್ತಿದ್ದಂತೆ ಹಾನಗಲ್ಲ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದು, ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಅದರೆ ಈಗ ಕಾರಾಗೃಹದಲ್ಲಿ ಗ್ಯಾಂಗ್ ರೇಪ್ ಆರೋಪಿಗಳದ್ದೇ ದರ್ಬಾರ್ ನಡೆಯುತ್ತಿದೆ ಎನ್ನಲಾಗಿದೆ.
ತುಂತುರು ಮಳೆ, ಮೋಡ ಕವಿದ ವಾತಾವರಣ
ಹಾವೇರಿ: ಕೆಲವು ದಿನಗಳಿಂದ ಬಿಡದೇ ಸುರಿದು ಎರಡು ದಿನಗಳಿಂದ ಬಿಡುವು ನೀಡಿದ್ದ ಮಳೆ ಬುಧವಾರ ಮತ್ತೆ ಶುರುವಾಗಿದೆ. ಜಿಲ್ಲಾದ್ಯಂತ ಮೋಡ ಕವಿದ ವಾತಾವರಣವಿದ್ದು, ಕೆಲ ಸಮಯ ತುಂತುರು ಮಳೆಯಾಗಿದೆ.ಜಿಲ್ಲೆಯ ರಾಣಿಬೆನ್ನೂರು, ಹಾವೇರಿ, ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ, ಸವಣೂರು, ಹಿರೇಕೆರೂರು ಸೇರಿದಂತೆ ವಿವಿಧೆಡೆ ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳ ಕಾಲ ಹದಭರಿತ ಮಳೆಯಾಗಿದ್ದು, ಎರಡು ದಿನಗಳಿಂದ ಸ್ವಲ್ಪ ಬಿಡುವು ನೀಡಿತ್ತು. ಆದರೆ ಬುಧವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಕೆಲ ಸಮಯ ತುಂತುರು ಮಳೆಯಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.