ಕಾಳಿ ಸೇತುವೆಗೆ ವಿದ್ಯುದ್ದೀಪವಿಲ್ಲದೇ ಸಂಚಾರಕ್ಕೆ ಸಮಸ್ಯೆ

KannadaprabhaNewsNetwork |  
Published : Mar 10, 2025, 12:19 AM IST
ಕಾಳಿ ಸೇತುವೆಯ ಒಂದು ಭಾಗ ಕತ್ತಲೆಯಿಂದ ಕೂಡಿರುವುದು. | Kannada Prabha

ಸಾರಾಂಶ

ಒಂದು ಸೇತುವೆ ಕುಸಿದು ಬಿದ್ದ ಕಾರಣ, ಒಂದೇ ಸೇತುವೆಯಲ್ಲಿ ವಾಹನಗಳು ಸಂಚಾರ ಮಾಡಬೇಕಿದೆ.

ಜಿ.ಡಿ. ಹೆಗಡೆ

ಕಾರವಾರ: ಇಲ್ಲಿನ ಕಾಳಿನದಿಗೆ ಕಟ್ಟಲಾದ ಸೇತುವೆಗೆ ಬೀದಿ ದೀಪ ಅಳವಡಿಸದೇ ವಾಹನಗಳ, ಪಾದಚಾರಿಗಳ ಓಡಾಟಕ್ಕೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಒಂದು ಸೇತುವೆ ಕುಸಿದು ಬಿದ್ದ ಕಾರಣ, ಒಂದೇ ಸೇತುವೆಯಲ್ಲಿ ವಾಹನಗಳು ಸಂಚಾರ ಮಾಡಬೇಕಿದ್ದು, ಅಪಾಯಕ್ಕೆ ಎಡೆಮಾಡಿಕೊಡುವಂತಿದೆ.

ಚತುಷ್ಪಥ ರಸ್ತೆಯಾದರೂ ಸೇತುವೆ ಕುಸಿದು ಬಿದ್ದ ಕಾರಣ ಕಾರವಾರದ ಕಡೆಯಿಂದ ಗೋವಾ ಕಡೆ ಸಾಗಲು, ಗೋವಾ ಕಡೆಯಿಂದ ಕಾರವಾರದ ಕಡೆಗೆ ಬರಲು ಒಂದೇ ಸೇತುವೆ ಬಳಕೆ ಮಾಡಲಾಗುತ್ತಿದೆ. ಈ ಸೇತುವೆಯ ಕಾರವಾರ ಭಾಗಕ್ಕೆ ಅಳವಡಿಸಿರುವ ಹೈಮಾಸ್ಕ್ ದೀಪ ಉರಿಯುತ್ತಿದೆ. ಆದರೆ ಮತ್ತೊಂದು ಬದಿಗೆ ಅಳವಡಿಸಲಾದ ಹೈಮಾಸ್ಕ್ ದೀಪ ಉರಿಯುತ್ತಿಲ್ಲ. ಸೇತುವೆಯ ಪಕ್ಕದಲ್ಲಿ ಮೂರರಿಂದ ನಾಲ್ಕು ಎಲ್‌ಇಡಿ ಬಲ್ಬ್ ಅಳವಡಿಕೆ ಮಾಡಲಾಗಿದ್ದು, ಇದ್ಯಾವುದೂ ಬೆಳಕು ನೀಡುತ್ತಿಲ್ಲ. ಭಾರಿ ವಾಹನಗಳೂ ಇದೇ ಸೇತುವೆಯನ್ನು ಬಳಕೆ ಮಾಡುತ್ತಿದ್ದು, ರಾತ್ರಿ ವೇಳೆ ಬೇರೆ ಬೇರೆ ಊರುಗಳಿಗೆ ತೆರಳುವ ಸಾಕಷ್ಟು ಖಾಸಗಿ ಬಸ್‌ಗಳ ಸಂಚಾರ ಇರುತ್ತದೆ. ಈ ನಡುವೆ ದ್ವಿಚಕ್ರ ವಾಹನ ಸವಾರರು ಜೀವ ಭಯದಿಂದಲೇ ಸೇತುವೆ ಮೇಲೆ ಸಂಚಾರ ಮಾಡುವಂತಾಗಿದೆ.

ಗೋವಾ ಕಡೆಯ, ಕಾರವಾರ ಕಡೆಯ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಸೇತುವೆಯ ಮಧ್ಯಭಾಗದಲ್ಲಿ ತಾತ್ಕಾಲಿಕ ರಸ್ತೆ ಡಿವೈಡರ್ ಅಳವಡಿಕೆ ಮಾಡಲಾಗಿತ್ತು. ಆದರೆ ಬಹುತೇಕ ಕಡೆ ಇವುಗಳು ತುಂಡಾಗಿವೆ. ದ್ವಿಪಥದಲ್ಲಿ ಚಾಲಕನ ಎಡಕ್ಕೆ ಸಾಗುವ ವಾಹನ ಸ್ವಲ್ಪ ಬಲಕ್ಕೆ ಬಂದರೂ ಮತ್ತೊಂದು ವಾಹನಕ್ಕೆ ಬಡಿಯುವಂತಾಗಿದೆ. ಕಾರ್ಗತ್ತಲೆಯಲ್ಲಿ ವಾಹನ ಓಡಿಸುವುದೇ ಸವಾಲಿನ ಕೆಲಸವಾಗಿದೆ.

ಹೈಮಾಸ್ಕ್ ದೀಪ ಹಾಳಾಗಿ ತಿಂಗಳು ಕಳೆದಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ ಕಂಪೆನಿ ಮಾತ್ರ ದುರಸ್ತಿಗೆ, ಬೀದಿ ದೀಪ ಅಳವಡಿಕೆಗೆ ಆಸಕ್ತಿ ತೋರುತ್ತಿಲ್ಲ. ಜಿಲ್ಲಾಡಳಿತ ಈಗಾಗಲೇ ಹಲವು ಬಾರಿ ಕಂಪೆನಿಗೆ ಲೈಟ್ ಅಳವಡಿಕೆ ಮಾಡಲು ಸೂಚಿಸಿದ್ದರೂ ಪ್ರಯೋಜನವಾಗಿಲ್ಲ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಾಳಿ ಸೇತುವೆಯಲ್ಲಿನ ಅಮಾವಾಸ್ಯೆ ಕತ್ತಲನ್ನು ಗಂಭೀರವಾಗಿ ಪರಿಗಣಿಸಿ ಚತುಷ್ಪಥ ಕಾಮಗಾರಿ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿಗೆ ಹೈಮಾಸ್ಕ್ ದುರಸ್ತಿ ಮಾಡಲು, ಸೇತುವೆ ಮೇಲೆ ಅಲ್ಲಲ್ಲಿ ದೀಪ ಅಳವಡಿಸಲು ಸೂಚಿಸಬೇಕಿದೆ.

ಹೈಮಾಸ್ಕ್ ದೀಪ ಅಳವಡಿಸಿರುವುದು ನಗರಸಭೆಯಿಂದ ಆಗಿದೆ. ಆದರೆ ಚತುಷ್ಪಥ, ಸೇತುವೆ ಮಾಡುವ ಸಂದರ್ಭದಲ್ಲಿ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ವಿದ್ಯುತ್ ಕೇಬಲ್‌ಗಳನ್ನು ಕತ್ತರಿಸಿದೆ. ಅವರೆ ದುರಸ್ತಿ ಮಾಡಬೇಕಿದ್ದು, ಇದುವರೆಗೂ ಒಂದು ಭಾಗದ ಹೈಮಾಸ್ಕ್ ದೀಪ ಸರಿಮಾಡಿಲ್ಲ ಎನ್ನುತ್ತಾರೆ ನಗರಸಭೆ ಎಇಇ ಸದಾನಂದ ಸಾಲೇಹಿತ್ತಲ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ