ಮಹಾಕುಂಭದಲ್ಲಿ ದುರಂತ ಬಿಜೆಪಿ ವೈಫಲ್ಯಕ್ಕೆ ಸಾಕ್ಷಿ: ಸಚಿವ ಎನ್‌.ಎಸ್‌.ಬೋಸರಾಜು

KannadaprabhaNewsNetwork | Published : Feb 20, 2025 12:45 AM

ಸಾರಾಂಶ

ಬಿಜೆಪಿಗರು ಧರ್ಮ, ಆಚಾರ, ನಂಬಿಕೆಯ ಹೆಸರಿನಲ್ಲಿ ಜನರ ಮನೋಭಾವನೆ ಮುಂದಿಟ್ಟು ಕೊಂಡು ಅವರನ್ನು ಸಮಸ್ಯೆಗೆ ತಳ್ಳುತ್ತಿದ್ದಾರೆ. ಆಗಿರುವ ದುರಂತಗಳು, ಸಾವು-ನೋವಿನ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ ಎಂದು ಸಚಿವ ಬೋಸರಾಜು ಗಂಭೀರವಾಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಉತ್ತರಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಪದೇ ಪದೆ ದುರಂತ ಸಂಭವಿಸುತ್ತಿದ್ದು, ಇದು ಕೇಂದ್ರ ಮತ್ತು ಅಲ್ಲಿನ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳ ಬೇಜವಾಬ್ದಾರಿತನ ಹಾಗೂ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಆರೋಪಿಸಿದರು.ಸ್ಥಳೀಯ ಸಚಿವರ ಕಚೇರಿಯಲ್ಲಿ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಕೇಂದ್ರದ ಮೋದಿ ಹಾಗೂ ಯುಪಿಯ ಯೋಗಿ ಡಬಲ್‌ ಎಂಜಿನ್‌ ಸರ್ಕಾರ ಅವರಿಬ್ಬರೂ ಶಕ್ತಿಮಾನ್‌ಗಳಾಗಿದ್ದಾರೆ. ಸಾವಿರಾರು ಕೋಟಿ ವೆಚ್ಚದಲ್ಲಿ ಕುಂಭಮೇಳ ಆಯೋಜಿಸಿದ್ದು, ರಾಜ್ಯ ಸೇರಿ ಎಲ್ಲೆಡೆ ಬ್ಯಾನರ್‌ಗಳನ್ನು ಹಾಕಿ ಪ್ರಚಾರ ಮಾಡಿ ಕೋಟ್ಯಾಂತರ ಜನರನ್ನು ಬರುವಂತೆ ಸ್ವಾಗತಿಸುತ್ತಿದ್ದಾರೆ. ಅದರೆ, ಅವರಿಗೆ ಅಗತ್ಯವಾದ ಸವಲತ್ತುಗಳು, ಸಾರಿಗೆ, ರೈಲು ಇತರೆ ಸೇವೆಗಳನ್ನು ಸಮರ್ಪಕವಾಗಿ ನೀಡದ ಕಾರಣಕ್ಕೆ ಬೆಂಕಿ ಅವಘಡ, ಅಪಘಾತ, ಕಾಲ್ತುಳಿತದ ದುರ್ಘಟನೆಗಳು ಸಂಭವಿಸಿವೆ. ಬಿಜೆಪಿಗರು ಧರ್ಮ, ಆಚಾರ, ನಂಬಿಕೆಯ ಹೆಸರಿನಲ್ಲಿ ಜನರ ಮನೋಭಾವನೆ ಮುಂದಿಟ್ಟು ಕೊಂಡು ಅವರನ್ನು ಸಮಸ್ಯೆಗೆ ತಳ್ಳುತ್ತಿದ್ದಾರೆ. ಆಗಿರುವ ದುರಂತಗಳು, ಸಾವು-ನೋವಿನ ಬಗ್ಗೆ ಎಲ್ಲಿಯೂ ಮಾತನಾಡುವುದಿಲ್ಲ ಎಂದು ಗಂಭೀರವಾಗಿ ಆರೋಪಿಸಿದರು.ಸುಳ್ಳು ಸುದ್ದಿ ಹಬ್ಬಿಸುವವರು ಬಿಜೆಪಿಗರು:

ತಾಂತ್ರಿಕ ದೋಷದಿಂದಾಗಿ ಗೃಹ ಲಕ್ಷ್ಮೀ ಮತ್ತು ಅಕ್ಕಿ ದುಡ್ಡು ಬರಲು ವಿಳಂಬವಾಗಿವೆ. ಆದರೆ ಈ ಹಿಂದೆಯೂ ಎರಡ್ಮೂರು ತಿಂಗಳು ಹಣ ಬಂದಿರಲಿಲ್ಲ ನಂತರ ಎಲ್ಲವನ್ನೂ ಜಮಾ ಮಾಡಲಾಗಿತ್ತು. ಆದರೆ ಬಿಜೆಪಿಗರು ಜಿಪಂ, ತಾಪಂ ಚುನಾವಣೆವರೆಗೂ ಹಣ ಬರಲ್ಲ ಎನ್ನುವ ಅಪಪ್ರಚಾರ ಮಾಡುತ್ತಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸುವವರು ಬಿಜೆಪಿಗರು, ಕರ್ನಾಟಕದ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುವ ಪ್ರಧಾನಿ ನರೇಂದ್ರ ಮೋದಿ ದೇಶದ ಬೇರೆ ರಾಜ್ಯಗಳಲ್ಲಿ ಚುನಾವಣೆ ನಡೆದರೆ ಅಲ್ಲಿ ಗ್ಯಾರಂಟಿ ಗಳನ್ನು ಘೋಷಿಸುತ್ತಿದ್ದಾರೆ. ಇಡೀ ದೇಶಕ್ಕೆ ಗ್ಯಾರಂಟಿ ಪದವನ್ನು ಪರಿಚಯಿಸಿದ್ದು, ಕಾಂಗ್ರೆಸ್‌ ಅದೂ ಕರ್ನಾಟಕದಿಂದಲೇ ಶಬ್ದ ಬಂದಿದೆ. ಆದರೆ ಬಿಜೆಪಿಯವರು ಇದನ್ನು ಕಾಪಿ ಮಾಡಿ ಮೋದಿ ಗ್ಯಾರೆಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಿಗಿರಿ, ಮುಖಂಡರಾದ ಮಹಮದ್ ಶಾಲಂ, ಕೆ.ಶಾಂತಪ್ಪ, ಜಯಣ್ಣ, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ರಾಮಣ್ಣ ಇರಬಗೇರಾ, ಲಕ್ಷ್ಮಿರೆಡ್ಡಿ, ಅಂಜಿನಯ್ಯ ಕುರಬದೊಡ್ಡಿ, ನಿರ್ಮಲಾ ಬೆಣ್ಣೆ ಸೇರಿ ಇತರರು ಇದ್ದರು.

3 ರಾಜ್ಯಗಳ ಸಿಎಂ ಸಭೆಗೆ ಸಿದ್ಧತೆ

ನವಲಿ ಜಲಾಶಯ ಮೂರು ರಾಜ್ಯಗಳ ಸಿಎಂ ಸಭೆ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಮಯ, ಸ್ಥಳ ನಿಗದಿಗಾಗಿ ಪತ್ರ ವ್ಯವಹಾರ ಸಾಗಿದೆ. ತುಂಗಭದ್ರಾ ಜಲಾಶಯ ಹೂಳಿನ ಸಮಸ್ಯೆ ನಿವಾರಣೆಗಾಗಿ ನಲಿ ಪರ್ಯಾಯ ಜಲಾಶಯ ನಿರ್ಮಾಣದ ವಿಚಾರವಾಗಿ ಆಂಧ್ರ ಮತ್ತು ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಿಗೆ ಈಗಾಗಲೇ ಪತ್ರ ಬರೆದು ಜಂಟಿ ಸಭೆಗೆ ಕೋರಲಾಗಿದೆ. ಮೂರು ರಾಜ್ಯಗಳ ಪ್ರತಿನಿಧಿಗಳಿಂದ ಸಭೆ ನಿರ್ವಹಿಸಿ ಉದ್ದೇಶ ನವಲಿ ಜಲಾಶಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತದೆ. ಒಟ್ಟು 15,000 ಕೋಟಿ ರು. ವೆಚ್ಚದಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳುವ ಯೋಜನೆ ಸಿದ್ಧಪಡಿಸಲಾಗಿದೆ ಎಂದರು. 10 ಕೆಜಿ ಅಕ್ಕಿ ನೀಡಲು ಚಿಂತನೆ

ಚುನಾವಣೆಯಲ್ಲಿ ಕಾಂಗ್ರೆಸ್ ಘೋಷಿಸಿದಂತೆ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ನೀಡಲು ಸಿದ್ಧವಿತ್ತು ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುವ ವಿಚಾರ ವಾಗಿ ಕೇಂದ್ರದ ಬಿಜೆಪಿ ಕುತಂತ್ರದ ರಾಜಕೀಯ ಮಾಡಿತು. ಆದ್ದರಿಂದ ಯೋಜನೆ ಜಾರಿಗೆ ಸಮಸ್ಯೆಯಾಗದಂತೆ 5 ಕೆಜಿ ಅಕ್ಕಿ ಮತ್ತು ಉಳಿದ 5 ಕೆಜಿ ಅಕ್ಕಿ ಬದಲು 170 ರು. ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಇದೀಗ 5 ಕೆಜಿ ಅಕ್ಕಿ ಸರಿಹೋಗುತ್ತದೆ. ಉಳಿದ ಹಣ ಇತರೆ ಖರ್ಚಿಗೆ ಆಗುತ್ತದೆ ಎಂದು ಹೇಳುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಸಚಿವರು ಹೇಳಿದರು.

Share this article