ರೈಲು ಹಳಿ ಮೇಲೆ ಬಿಎಂಟಿಸಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂ ಆಗಿರುವ ಘಟನೆ ಸೋಮವಾರ ಕಾಡುಗೋಡಿ ಸಮೀಪದ ಸಾದರಮಂಗಲ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ರೈಲು ಹಳಿ ಮೇಲೆ ಬಿಎಂಟಿಸಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವ ವೇಳೆ ರೈಲು ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂ ಆಗಿರುವ ಘಟನೆ ಸೋಮವಾರ ಕಾಡುಗೋಡಿ ಸಮೀಪದ ಸಾದರಮಂಗಲ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ಸಾದರಮಂಗಲ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ಬಸ್ಸನ್ನು ಹಿಂದೆ ತೆಗೆದುಕೊಳ್ಳುವಾಗ ಈ ಅವಘಡ ಸಂಭವಿಸಿದ್ದು, ಅದೃಷ್ಟವಶಾತ್ ಬಸ್ನಲ್ಲಿ ಪ್ರಯಾಣಿಕರು ಇರಲಿಲ್ಲ. ಹೀಗಾಗಿ ನಡೆಯಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಘಟನೆ ವಿವರ:
ಸೋಮವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಸಾದರಮಂಗಲ ಡಿಪೋ 51ರ ಕೆಎ57 ಎಫ್6000 ನಂಬರ್ನ ಬಸ್ ಕಾಡುಗೋಡಿ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಚಾಲಕ ರಿವರ್ಸ್ ತೆಗೆದುಕೊಳ್ಳಲು ರೈಲ್ವೆ ಪ್ಯಾರಲಲ್ ರಸ್ತೆಯ ರೈಲು ಹಳಿ ಮೇಲೆ ನುಗ್ಗಿಸಿದ್ದಾನೆ. ಈ ವೇಳೆ ಏಕಾಏಕಿ ಬಂದ ರೈಲು ಡಿಕ್ಕಿ ಹೊಡೆದಿದ್ದು ಬಸ್ ಹಿಂಭಾಗ ಸಂಪೂರ್ಣ ಜಖಂ ಆಗಿದೆ.
ಈ ಘಟನೆಯಲ್ಲಿ ಬಸ್ ನಿರ್ವಾಹಕ ಶ್ರೀನಿವಾಸ್ ಎಂಬುವರು ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಮತ್ತು ಬಿಎಂಟಿಸಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿದ್ದಾರೆ. ಚಾಲಕನ ಅಜಾಗರೂಕತೆಯಿಂದ ಘಟನೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಚಾಲಕನ ವಿರುದ್ಧ ದೂರು ದಾಖಲು:
ಹೂಡಿ ಮತ್ತು ವೈಟ್‌ಫೀಲ್ಡ್ ರೈಲ್ವೆ ನಿಲ್ದಾಣದ ಮಧ್ಯೆ ಈ ಘಟನೆ ಜರುಗಿದ್ದು, ಈ ಸಂಬಂಧ ರೈಲ್ವೆ ಇಲಾಖೆಯ ಸೀನಿಯರ್ ಸೆಕ್ಷನ್ ಎಂಜಿನಿಯರ್ ಮುತ್ತು ಎಂಬುವರು ನೀಡಿದ ದೂರಿನನ್ವಯ ಬಸ್ ಚಾಲಕ ಷಣ್ಮುಗ ಎಂಬಾತ ವಿರುದ್ಧ ಕಂಟೋನ್ಮೆಂಟ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.