ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸಂವಿಧಾನಿಕ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಬಿಜೆಪಿ ನೇತೃತ್ವದ ಸರ್ಕಾರವನ್ನು ದೇಶದಿಂದ ಕಿತ್ತೊಗೆಯಬೇಕು ಎಂದು ಸಿಪಿಐ(ಎಂಎಲ್)ನ ಮಾಸ್‍ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ ಹೇಳಿದ್ದಾರೆ.ಸಿಪಿಐ(ಎಂಎಲ್) ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪಟ್ಟಣದ ಮಾನಸಹಾಲ್‍ನಲ್ಲಿ ನಡೆದ ಸಿಪಿಐ(ಎಂಎಲ್) ಮಾಸ್‍ಲೈನ್ ಕಾರ್ಯಕರ್ತರ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.2 ಜಿ.ಸ್ಪೆಕ್ಟ್ರಂ ಹಗರಣಕ್ಕಿಂತ ಹತ್ತು ಪಟ್ಟು ದೊಡ್ಡದಾದ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಚುನಾವಣೆ ಬಾಂಡ್ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ತಾರತಮ್ಯದಿಂದ ಕೂಡಿರುವ ಹಾಗು ವಿರೋಧ ಪಕ್ಷಗಳ ವಿರೋಧದ ನಡುವೆ ಏಕಪಕ್ಷಿಯವಾಗಿ ಜಾರಿಗೆ ತಂದಿರುವಪೌರತ್ವ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಹಾಗು ಎಲ್ಲಾ ಸಮುದಾಯಗಳಿಗೆ ಸಮಾನ ಹಕ್ಕುಗಳು ನೆಲದ ಕಾನೂನು ಅಡಿಯಲ್ಲಿ ದೊರಕಬೇಕು. ಇದು ಪ್ರಜಾಪ್ರಭುತ್ವದ ಭೌಗೋಳಿಕವಾದ ಮೂಲಭೂತ ಸಿದ್ಧಾಂತಗಳಲ್ಲಿ ಪ್ರತಿಪಾದನೆಯಾಗಿದೆ ಎಂದರು.ರಾಜ್ಯ ಸಂಘಟಕ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ಅಂದಿನ ಟೆಲಿಕಾಂ ಸಚಿವ ಎ.ರಾಜಾ ಅವರು 2 ಜಿ ಸ್ಪೆಕ್ಟ್ರಂ ಪರವಾನಗಿಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಅದಾಯದಲ್ಲಿ 1,760 ಬಿಲಿಯನ್ ನಷ್ಟವಾಗಿದೆ ಎಂಬ ವಿಷಯದಲ್ಲಿ ಬಿಜೆಪಿ ಕೇಂದ್ರಿಯ ತನಿಖಾ ದಳದಿಂದ ತನಿಖೆ ನಡೆಸಿತ್ತು. ಅಣ್ಣ ಹಜಾರೆ ಬೀದಿಗೆ ಬಂದಿದ್ದರು. ಮೀಡಿಯಾ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದವು. ಈ ಕಾರಣದಿಂದ ಯುಪಿಎ ಅಧಿಕಾರ ಕಳೆದುಕೊಂಡಿತು. ಹಾಗಾಗಿ ಬಾಂಡ್ ಖರೀದಿ ಚುನಾವಣೆ ದೇಣಿಗೆ ಅಲ್ಲ. ಸರ್ಕಾರದ ಅಧಿಕೃತ ಲಂಚದ ವ್ಯವಹಾರವಾಗಿದೆ.ಈ ಕಾರಣದಿಂದ ಎನ್‍ಡಿಎ ಅಧಿಕಾರ ಕಳೆದುಕೊಳ್ಳಬೇಕು. ದೇಶದ ನಾಗರಿಕ ಮತದಾರರು ಭ್ರಷ್ಟರ ವಿರುದ್ಧ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ರಾಜ್ಯ ಸಮಿತಿ ಸದಸ್ಯರಾದ ಕೆ.ಬಿ.ಗೋನಾಳ, ಬಿ.ಎನ್.ಯರದಿಹಾಳ, ರಮೇಶ ಪಾಟೀಲ, ಬಸವರಾಜ ನರೆಗಲ್, ಚಿಟ್ಟಿಬಾಬು, ಕೊಡಗು ಜಿಲ್ಲಾ ಸಮಿತಿಯ ಸುರೇಶ್, ಮಂಜುನಾಥ, ಸಿದ್ದಯ್ಯ ಮತ್ತಿತರರು ಇದ್ದರು.