ಅಧಿಕಾರಿಗಳ ವ್ಯಕ್ತಿತ್ವ ವಿಕಸನಕ್ಕೆ ತರಬೇತಿ ಮುಖ್ಯ: ಯೋಗೀಶ್

KannadaprabhaNewsNetwork | Published : Jan 7, 2025 12:15 AM

ಸಾರಾಂಶ

ಅಧಿಕಾರಿಗಳು ಮೊದಲು ಸರ್ಕಾರದ ಸುತ್ತೋಲೆಗಳನ್ನು ತಿಳಿದುಕೊಳ್ಳಬೇಕು. ನಂತರ ಹಾಡಿಗಳಿಗೆ ತೆರಳಿ ಅವರಿಗೆ ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮನೆ, ವಿದ್ಯುತ್ ಇದಿಯಾ, ಓದುತ್ತಿರುವ ಮಕ್ಕಳೆಷ್ಟು, ಶಾಲೆ ಬಿಟ್ಟ ಮಕ್ಕಳೆಷ್ಟು, ಆಶ್ರಯ ಶಾಲೆಗಳಲ್ಲಿ ಸಾಕ್ಷರತೆಯ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಂಡು, ಆ ಸಮುದಾಯದ ಜನರಿಗೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅಧಿಕಾರಿಗಳು ವ್ಯಕ್ತಿತ್ವ ರೂಪಿಸಿಕೊಳ್ಳಲು ತರಬೇತಿ ಬಹಳ ಮುಖ್ಯವಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಟಿ. ಯೋಗೀಶ್ ತಿಳಿಸಿದರು.

ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಆಯೋಜಿಸಿರುವ 5 ದಿನಗಳ ಆಡಳಿತಾತ್ಮಕ ತರಬೇತಿ ಹಾಗೂ ಪುನರ್ ಮನನ ಕಾರ್ಯಾಗಾರವನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಮೊದಲು ಸರ್ಕಾರದ ಸುತ್ತೋಲೆಗಳನ್ನು ತಿಳಿದುಕೊಳ್ಳಬೇಕು. ನಂತರ ಹಾಡಿಗಳಿಗೆ ತೆರಳಿ ಅವರಿಗೆ ಬಿಪಿಎಲ್ ಕಾರ್ಡ್, ಆಯುಷ್ಮಾನ್ ಕಾರ್ಡ್, ಮನೆ, ವಿದ್ಯುತ್ ಇದಿಯಾ, ಓದುತ್ತಿರುವ ಮಕ್ಕಳೆಷ್ಟು, ಶಾಲೆ ಬಿಟ್ಟ ಮಕ್ಕಳೆಷ್ಟು, ಆಶ್ರಯ ಶಾಲೆಗಳಲ್ಲಿ ಸಾಕ್ಷರತೆಯ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಂಡು, ಆ ಸಮುದಾಯದ ಜನರಿಗೆ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಆರ್. ರಾಜ್‌ ಕುಮಾರ್ ಮಾತನಾಡಿ, ಯಾವುದೇ ಇಲಾಖೆಯಲ್ಲಿ ಅಧಿಕಾರಿಗಳಿಗೆ ತರಬೇತಿ ಇಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲ. ಹೀಗಾಗಿ 5 ದಿನಗಳ ಕಾಲ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಡಳಿತಾತ್ಮಕ ತರಬೇತಿ ನೀಡುತ್ತಿದ್ದೇವೆ. ನಿಮ್ಮ ಮೇಲೆ ಇಲಾಖೆ ಸಮುದಾಯ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದು, ಹಾಡಿ ಜನರ ಅಭಿವೃದ್ಧಿ ಮಾಡಲು ಪರಿಣಾಮಕಾರಿಯಾಗಿ ಕೆಲಸ ಮಾಡಲು ನಿಮ್ಮೆಲ್ಲರ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರ ಪ್ರಕಾಶ ಮಾತನಾಡಿ, ಅಧಿಕಾರಿಗಳಿಗೆ ಕಲಿಕೆ ನಿರಂತರ ಆಗಿರಬೇಕು. ಎಸ್ಇಪಿ, ಟಿಎಸ್ಪಿ ಕಾಯಿದೆ ತಿಳಿದುಕೊಳ್ಳಬೇಕು. ಅರಣ್ಯ ಇಲಾಖೆಯ ಕಾಯಿದೆ ಬಗ್ಗೆ ತಿಳುವಳಿಕೆ ಇರಬೇಕು. ಇಲಾಖೆಯ ಅಭಿವೃದ್ಧಿ ಮತ್ತು ಮುಂದಿನ ಯೋಜನೆಗಳನ್ನು ತಯಾರು ಮಾಡಬೇಕು. ಈ ಎಲ್ಲಾ ಸಮರ್ಪಕ ಮಾಹಿತಿ ಒದಗಿಸಿದಾಗ ಮಾತ್ರ ಅಭಿವೃದ್ಧಿ ಮಾಡಲು ಸಹಾಯವಾಗುತ್ತದೆ ಎಂದರು.

ಜಿಲ್ಲಾ ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ಅಧಿಕಾರಿಗಳು ಜ್ಞಾನವನ್ನು ವೃದ್ಧಿ ಮಾಡಿಕೊಳ್ಳಲು ತರಬೇತಿ ಮುಖ್ಯ. ಇಲಾಖೆ ಬಗ್ಗೆ ಮಾಹಿತಿ ಇದ್ದರೆ ಧೈರ್ಯವಾಗಿ ಯಾರಿಗೆ ಬೇಕಾದರೂ ಉತ್ತರ ಕೊಡಬಹುದು. ನೀವು ಶ್ರಮಪಟ್ಟು ಕೆಲಸ ಮಾಡಿದರೆ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ನಿಮ್ಮ ಹುದ್ದೆಗೆ ಮೊದಲು ನೀವು ಗೌರವ ಕೊಡಿ. ಮೊಬೈಲ್ ಬಿಟ್ಟು ಈ ತರಬೇತಿಯ ಸದುಪಯೋಗ ಪಡಿಸಿಕೊಳ್ಳಿರಿ ಎಂದು ತಿಳಿಸಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್, ಸಂಶೋಧನಾಧಿಕಾರಿ ಕೆ. ಶ್ರೀನಿವಾಸ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್, ಡಾ. ಮೋಹನ್, ಕೃಷ್ಣಮೂರ್ತಿ, ಅರುಣ್‌ ಪ್ರಭು, ಜಿ.ಆರ್. ಮಹೇಶ, ಬಿ.ಆರ್. ಭವ್ಯಾ, ಗುಣಧರ್, ಹೇಮಚಂದ್ರ, ಆರ್. ಮಮತಾ, ಎಂ.ಆರ್. ದಾಕ್ಷಾಯಿಣಿ, ಡಾ. ಕುಮಾರ್‌ ಮೊದಲಾದವರು ಇದ್ದರು.

Share this article