ಮಕ್ಕಳಿಗೆ ಆರೋಗ್ಯಕರ ಆಹಾರಕ್ಕಾಗಿ ತಾಯಂದಿರಿಗೆ ತರಬೇತಿ!

KannadaprabhaNewsNetwork |  
Published : Sep 13, 2025, 02:06 AM IST
ತಾಯಂದಿರಿಗೆ ತರಬೇತಿ ಕಾರ್ಯಕ್ರಮ  | Kannada Prabha

ಸಾರಾಂಶ

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ವಿದ್ಯಾರ್ಥಿಗಳ ಆಹಾರ ಪದ್ಧತಿ ಬಗ್ಗೆ ಹೆತ್ತವರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದನ್ನು ಅಭಿಯಾನ ರೀತಿಯಲ್ಲಿ ಕೈಗೊಳ್ಳುತ್ತಿದ್ದು, ಮಕ್ಕಳ ತಾಯಂದಿರಿಗೆ ಇದರ ಬಗ್ಗೆ ಅರಿವು ಮೂಡಿಸಲಾರಂಭಿಸಿದೆ

ವಿಶೇಷ ವರದಿ

ಮಂಗಳೂರು: ಶಾಲೆಗಳಿಗೆ ತೆರಳುವ ಮಕ್ಕಳಿಗೆ ಬೇಕಾದ ಆಹಾರವನ್ನು ನಿರ್ವಹಿಸುವುದು ಹೆತ್ತವರಿಗೆ ದೊಡ್ಡ ಸವಾಲು. ಬೇಕಾಬಿಟ್ಟಿ ಆಹಾರ ಸೇವೆಯಿಂದ ಎಳವೆಯಲ್ಲೇ ಶಾಲಾ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ಹೋಗಲಾಡಿಸಲು ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದಿಂದ ವಿದ್ಯಾರ್ಥಿಗಳ ಆಹಾರ ಪದ್ಧತಿ ಬಗ್ಗೆ ಹೆತ್ತವರಿಗೆ ವಿಶೇಷ ಮಾಹಿತಿ ಕಾರ್ಯಕ್ರಮ ಆಯೋಜಿಸುತ್ತಿದೆ. ಇದನ್ನು ಅಭಿಯಾನ ರೀತಿಯಲ್ಲಿ ಕೈಗೊಳ್ಳುತ್ತಿದ್ದು, ಮಕ್ಕಳ ತಾಯಂದಿರಿಗೆ ಇದರ ಬಗ್ಗೆ ಅರಿವು ಮೂಡಿಸಲಾರಂಭಿಸಿದೆ. ಮಕ್ಕಳಿಗೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಏನೇನು ಆಹಾರ ನೀಡಬೇಕು ಎಂಬ ಬಗ್ಗೆ ಆಹಾರ ತಜ್ಞರು ಪಟ್ಟಿ ಸಿದ್ಧಪಡಿಸಿ ಮಾಹಿತಿ ನೀಡುತ್ತಿದ್ದಾರೆ. ಇದರ ಮೊದಲ ಕಾರ್ಯಕ್ರಮ ಮಂಗಳೂರು ನಗರದಲ್ಲಿ ಭಾನುವಾರ ನಡೆದಿದೆ. ವ್ಯಸ್ಥ ಜೀವನ-ಸ್ವಸ್ಥ ಭೋಜನ ಶೀರ್ಷಿಕೆಯಲ್ಲಿ ಪೌಷ್ಟಿಕ ಆಹಾರ ತಯಾರಿಕಾ ಕಾರ್ಯಾಗಾರ ನಡೆಸಿದ್ದು, ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಆಹಾರ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ತಾಯಂದಿರು ಕಾರ್ಯಾಗಾರದ ಪ್ರಯೋಜನ ಪಡೆದಿದ್ದಾರೆ.ಆರೋಗ್ಯ ಆಹಾರದ ಪಟ್ಟಿ ಸಿದ್ಧ:

ಶಾಲಾ ಮಕ್ಕಳ ಆರೋಗ್ಯಕ್ಕೆ ಪೂರಕವಾದ ಆಹಾರದ ಪಟ್ಟಿಯನ್ನು ಆಹಾರ ತಜ್ಞರೇ ಸಿದ್ಧಪಡಿಸಿದ್ದಾರೆ. ಮಧ್ಯಾಹ್ನ ಊಟಕ್ಕೆ ತಂಬುಳಿ, ಉಪಹಾರಕ್ಕೆ ಆರೋಗ್ಯಕರ ಉಂಡೆಗಳು, ಪೌಷ್ಟಿಕ ಲಘು ಆಹಾರಗಳ ಪಟ್ಟಿ ಮಾಡಿದ್ದಾರೆ. ಈ ಆಹಾರಗಳನ್ನು ತಯಾರಿಸುವ ಸುಲಭ ವಿಧಾನಗಳನ್ನೂ ಹೇಳಿಕೊಟ್ಟಿದ್ದಾರೆ. ಮುಖ್ಯವಾಗಿ ನಗರ ಪ್ರದೇಶದ ಮಕ್ಕಳಲ್ಲಿ ಆರೋಗ್ಯ ಹದಗೆಡುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಏನೇನು ಆರೋಗ್ಯ ಮೆನು?

ತಂಬುಳಿಗಳು: ನೆಲ್ಲಿಕಾಯಿ, ಅಮಟೆಕಾಯಿ, ಸೌತೆಕಾಯಿ, ಹೀರೆ ಪಡುವಲ - ಬಿಂಬುಳಿ, ಮಾವು ಶುಂಠಿ, ಶುಂಠಿ, ಬೆಳ್ಳುಳ್ಳಿ ನೀರುಳ್ಳಿ ಗಡ್ಡೆಗಳ ತಂಬುಳಿ, ತಗತೆ, ನೆಲನೆಲ್ಲಿ, ದಾಳಿಂಬೆ, ದಾಸವಾಳ ಇತ್ಯಾದಿ ತಂಬುಳಿ.ಆರೋಗ್ಯಕರ ಉಂಡೆಗಳು: ಅಕ್ಕಿ ಗೋಧಿ, ರಾಗಿ ಇತ್ಯಾದಿ ಧಾನ್ಯಗಳನ್ನು ಒಣಹಣ್ಣು ಹಲಸಿನ ಬೀಜ, ಕೆಂಪವಲಕ್ಕಿ ಬಳಸಿಕೊಂಡು ರುಚಿಕರ ಉಂಡೆಗಳನ್ನು ತಯಾರಿಸಬಹುದು. ಇವುಗಳನ್ನು ಮಕ್ಕಳು ಉತ್ಸಾಹದಿಂದ ತಿನ್ನುವ ಎನರ್ಜಿ ಬಾರ್‌ ರೀತಿಯಲ್ಲೇ ಕೊಡಬಹುದು.

ಪೌಷ್ಟಿಕ ಲಘು ಆಹಾರ: ಸುಲಭವಾಗಿ ಮಾಡುವ ದೋಸೆ, ಇಡ್ಲಿ ಚಪಾತಿಗಳನ್ನೇ ಬದಲಾವಣೆ ಮಾಡಿಕೊಳ್ಳುವುದು, ಈ ಮೂಲಕ ಚಪಾತಿ ಹಿಟ್ಟಿನ ಜೊತೆಯಲ್ಲಿ ಆರೋಗ್ಯಕರ ಸೊಪ್ಪು ತರಕಾರಿಗಳನ್ನು ಉದಾಹರಣೆಗೆ ಮೆಂತೆಸೊಪ್ಪು ಬೀಟ್ರೋಟ್, ಕ್ಯಾರೆಟ್, ಗೆಣಸು ಇತ್ಯಾದಿ ಮಿಶ್ರಣ ಮಾಡಿಕೊಳ್ಳುವುದು, ಮೊಳಕೆ ಕಾಳುಗಳನ್ನು ಮಕ್ಕಳು ತಿನ್ನುವುದಕ್ಕಾಗಿ ಅವುಗಳನ್ನು ಬೇಲ್‌ಪರಿ ಜೊತೆ ಸೇರಿಸಿ ಕೊಡಬಹುದು.ನಗರ ಪ್ರದೇಶದಲ್ಲಿ ಶಾಲಾ ಮಕ್ಕಳಲ್ಲಿ ಆರೋಗ್ಯ ವ್ಯತ್ಯಯ ಪ್ರಮಾಣ ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತಿದೆ. ಇದನ್ನು ಹತೋಟಿಗೆ ತರಲು ಆಹಾರ ತಜ್ಞರ ಸಲಹೆ ಮೇರೆಗೆ ನಾವು ಮನೆಯ ತಾಯಂದಿರಿಗೆ ನೇರವಾಗಿ ಉತ್ತಮ ಆಹಾರ ತಯಾರಿಗೆ ತರಬೇತಿ ನೀಡುವ ಮೂಲಕ ಮುಂದಿನ ಪೀಳಿಗೆಯ ಆರೋಗ್ಯವನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಇಂತಹ ಅಭಿಯಾನ ಎಲ್ಲ ಕಡೆ ಮುಂದುವರಿಯಬೇಕು.

-ರತ್ನಾಕರ ರಾವ್‌ ಕುಳಾಯಿ, ಕಾರ್ಯದರ್ಶಿ, ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ