ಕಂಬಳ ಓಟಗಾರರ ಗುಣಮಟ್ಟ ಹೆಚ್ಚಿಸಲು ತರಬೇತಿ ಅಗತ್ಯ: ಸುನಿಲ್

KannadaprabhaNewsNetwork |  
Published : Sep 07, 2026, 03:00 AM IST
ಮಿಯ್ಯಾರು ಕಂಬಳ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಕಂಬಳ ಓಟದ ತರಬೇತಿ ಶಿಬಿರ | Kannada Prabha

ಸಾರಾಂಶ

ಕರಾವಳಿಯ ಜನಪ್ರಿಯ ಕ್ರೀಡೆಯಾಗಿರುವ ಕಂಬಳಕ್ಕೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚುತ್ತಿದ್ದು, ಕಂಬಳದಲ್ಲಿ ಭಾಗವಹಿಸುವ ಓಟಗಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಕಂಬಳ ಓಟಗಾರರನ್ನು ರೂಪಿಸಲು ನಿರಂತರ ತರಬೇತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅತ್ಯವಶ್ಯಕ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ಕಾರ್ಕಳ : ಕರಾವಳಿಯ ಜನಪ್ರಿಯ ಕ್ರೀಡೆಯಾಗಿರುವ ಕಂಬಳಕ್ಕೆ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಹೆಚ್ಚುತ್ತಿದ್ದು, ಕಂಬಳದಲ್ಲಿ ಭಾಗವಹಿಸುವ ಓಟಗಾರರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತಮ ಗುಣಮಟ್ಟದ ಕಂಬಳ ಓಟಗಾರರನ್ನು ರೂಪಿಸಲು ನಿರಂತರ ತರಬೇತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅತ್ಯವಶ್ಯಕ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದರು.

ರಾಜ್ಯ ಕಂಬಳ ಅಸೋಸಿಯೇಷನ್ ಹಾಗೂ ಜಿಲ್ಲಾ ಕಂಬಳ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಮಿಯ್ಯಾರು ಕಂಬಳ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ಕಂಬಳ ಓಟದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಂಬಳದ ಜನಪ್ರಿಯತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಓಟಗಾರರ ಸಂಖ್ಯೆಯಷ್ಟೇ ಅವರ ಗುಣಮಟ್ಟವೂ ಹೆಚ್ಚಾಗಬೇಕು. ಇದಕ್ಕಾಗಿ ಯುವ ಓಟಗಾರರಿಗೆ ವೈಜ್ಞಾನಿಕ ಹಾಗೂ ಕ್ರಮಬದ್ಧ ತರಬೇತಿ ನೀಡುವ ಅಗತ್ಯವಿದೆ. ಓಟಗಾರರ ಗುಣಮಟ್ಟ ಹೆಚ್ಚಾದಂತೆ ಅವರಿಗೆ ಅಗತ್ಯವಿರುವ ಸೌಲಭ್ಯಗಳು, ತರಬೇತಿ ಕಾರ್ಯಾಗಾರಗಳು ಹಾಗೂ ತರಬೇತುದಾರರ ಪ್ರಯತ್ನಗಳೂ ಹೆಚ್ಚಾಗಬೇಕು ಎಂದರು. ಕಂಬಳದ ಅಭಿವೃದ್ಧಿಯನ್ನು ಕೇವಲ ಕ್ರೀಡಾ ಕ್ಷೇತ್ರದ ಚಟುವಟಿಕೆಯಾಗಿ ನೋಡದೆ, ರಾಜ್ಯದ ಸಾಂಸ್ಕೃತಿಕ ಪರಂಪರೆ ಹಾಗೂ ಗ್ರಾಮೀಣ ಕ್ರೀಡೆಯಾಗಿ ಪರಿಗಣಿಸಿ ಸರ್ಕಾರದ ಮಟ್ಟದಲ್ಲಿಯೂ ಅಗತ್ಯ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.ರಾಜ್ಯ ಕಂಬಳ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಮಾತನಾಡಿ, ಯುವ ಓಟಗಾರರಿಗೆ ತರಬೇತಿ ನೀಡುವುದರ ಜೊತೆಗೆ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.ರಾಜ್ಯ ಕಂಬಳ ಅಸೋಸಿಯೇಷನ್ ಉಪಾಧ್ಯಕ್ಷ ನವೀನ್ ಚಂದ್ರ ಆಳ್ವ, ಕಂಬಳ ಬುಕ್ ಶೈಲೇಶ್ ಆರಿಗ, ಮಾಜಿ ಎಪಿಎಂಸಿ ಅಧ್ಯಕ್ಷ ಅಂತೋನಿ ಡಿಸೋಜ, ಈದು ಕಂಬಳದ ಅಶೋಕ್ ಕುಮಾರ್ ಜೈನ್, ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಪಿ.ಆರ್. ಶೆಟ್ಟಿ, ಜಿಲ್ಲಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಸಾಧುಸನಿಲ್, ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಜೈನ್, ಕಂಬಳ ಯಜಮಾನ ಚಿಂತನ್ ಎರ್ಮಾಳ್ ಹಾಗೂ ಮಾಜಿ ಅಧ್ಯಕ್ಷ ರೋಹಿತ್ ಹೆಗಡೆ ಎರ್ಮಾಳ್ ಸೇರಿದಂತೆ ಹಲವು ಗಣ್ಯರು ಇದ್ದರು.

ರಾಜ್ಯ ಕಂಬಳ ಸಮಿತಿ ಕೋಶಾಧಿಕಾರಿ ಮಚ್ಚೂರು ಲೋಕೇಶ್, ಕಂಬಳ ಯಜಮಾನ ನಂದಳಿಕೆ ಶ್ರೀಕಾಂತ್ ಭಟ್, ದಯಾನಂದ ಬಂಗೇರ ಸೇರಿದಂತೆ ಹಲವರು ಭಾಗವಹಿಸಿದ್ದರು. ತರಬೇತುದಾರರಾದ ಶಾಂತರಾಂ ಜಯಕರ ಮಡಿವಾಳ, ರವಿಕುಮಾರ್ ಹಾಗೂ ಸಂಜಯ್ ವಸಂತ ಜೋಗಿ ಅವರು ಶಿಬಿರಾರ್ಥಿಗಳಿಗೆ ಕಂಬಳ ಓಟದ ವಿವಿಧ ತಂತ್ರಗಳು ಹಾಗೂ ಓಟದ ಕುರಿತ ತರಬೇತಿ ನೀಡಿದರು. ಸುಮಾರು 215 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಕೃಷ್ಣ ಮಿಷನ್: ಸ್ವಚ್ಛ ಮಂಗಳೂರು ಅಭಿಯಾನ - ಮಾಸಿಕ ಸ್ವಚ್ಛತಾ ಶ್ರಮದಾನ
ಕದ್ರಿ ಕೃಷ್ಣ ವೇಷ ಸ್ಪರ್ಧೆ: ರಾಷ್ಟ್ರೀಯ ಮಕ್ಕಳ ಉತ್ಸವ ಫಲಿತಾಂಶ