ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Jan 25, 2025, 01:04 AM IST
2 | Kannada Prabha

ಸಾರಾಂಶ

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಾಂತ್ರಿಕತೆಗಳನ್ನು ಅವಿಷ್ಕರಿಸಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರೇಷ್ಮೆ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಿ ಎಂದು ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಮತ್ತು ಅಂತಾರಾಷ್ಟ್ರೀಯ ರೇಷ್ಮೆ ಆಯೋಗದ ಮಹಾ ಕಾರ್ಯದರ್ಶಿ ಪಿ. ಶಿವಕುಮಾರ್ ತಿಳಿಸಿದರು.

ನಗರದ ಮಾನಂದವಾಡಿ ರಸ್ತೆಯಲ್ಲಿರುವ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಕೇಂದ್ರ ರೇಷ್ಮೆ ಮಂಡಳಿಯು ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಾಂತ್ರಿಕತೆಗಳನ್ನು ಅವಿಷ್ಕರಿಸಿದೆ. ಈ ತರಬೇತಿ ಶಿಬಿರದಲ್ಲಿ ತಾಂತ್ರಿಕತೆಗಳನ್ನು ವಿಜ್ಞಾನಿಗಳು ತರಬೇತಿ ಅವಧಿಯಲ್ಲಿ ಪ್ರಯೋಗಿಕವಾಗಿ ವಿವರಿಸುತ್ತಾರೆ. ಅದನ್ನು ತಾವು ಅರಿತು ತಮ್ಮ ದೇಶಗಳಿಗೆ ಹೋದ ಮೇಲೆ ರೇಷ್ಮೆ ಕೃಷಿಯಲ್ಲಿ ಆಳವಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಅಂತಾರಾಷ್ಟ್ರೀಯ ರೇಷ್ಮೆ ಆಯೋಗದ ಕೇಂದ್ರ ಸ್ಥಾನವನ್ನು ಭಾರತಕ್ಕೆ 2013ರಲ್ಲಿ ತರಲಾಯಿತು. ನಂತರ ಸದಸ್ಯ ರಾಷ್ಟ್ರಗಳ ಸಂಖ್ಯೆಯು 13 ರಿಂದ 23ಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಕೇಂದ್ರ ರೇಷ್ಮೆ ಮಂಡಳಿಯ ತಾಂತ್ರಿಕ ನಿರ್ದೇಶಕರಾದ ಡಾ.ಎಸ್. ಮಂಥಿರಾ ಮೂರ್ತಿ ಮಾತನಾಡಿ, ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯು ಬಹಳ ಮುಖ್ಯವಾದ ಪಾತ್ರ ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂದಿಸಿದಂತೆ ತಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳನ್ನು ಆವಿಷ್ಕಾರ ಮಾಡಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಮೊಟ್ಟೆ ತಯಾರಿಕೆ ಬಗ್ಗೆಯು ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ಇಥಿಯೋಪಿಯಾ, ಘಾನ, ಫಿಲಿಪೈನ್ಸ್, ಉಗಾಂಡಾ, ಥೈಲ್ಯಾಂಡ್, ರೊಮೇನಿಯಾ ಹಾಗೂ ದಕ್ಷಿಣ ಸುಡಾನ್ ದೇಶಗಳಿಂದ 22 ಅಭ್ಯರ್ಥಿಗಳು ಭಾಗವಹಿಸಿದ್ದರು.

ಐಎಸ್‌ಸಿಯ ಸಹಾಯಕ ಕಾರ್ಯದರ್ಶಿ ಪದ್ಮನಾಬ ನಾಯಕ್, ಸಂಸ್ಥೆಯ ಪ್ರಭಾರ ನಿರ್ದೇಶಕಿ ಡಾ.ಎಸ್. ಬಾಲಸರಸ್ವತಿ, ವಿಜ್ಞಾನಿಗಳಾದ ಡಾ.ಎಲ್. ಕುಸುಮಾ, ಡಾ.ಆರ್. ಮೀನಾಲ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ