ಪೌಷ್ಟಿಕ ಭದ್ರತೆಗಾಗಿ ಮಹಿಳೆಯರು ಕೈ ತೋಟ ಮಾಡಿಕೊಳ್ಳುವುದು ಬಹಳ ಮುಖ್ಯ ಹಾಗೆಯೇ ದಿನನಿತ್ಯದ ಆಹಾರದಲ್ಲಿ ತಾಜಾ ತರಕಾರಿಗಳ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕನ್ನಡಪ್ರಭ ವಾರ್ತೆ ಸುತ್ತೂರು
ನಂಜನಗೂಡಿನ ಧಾನ್ ಫೌಂಢೇಶನ್ ಸಹಯೋಗದೊಂದಿಗೆ ಟಿಎಸ್‌ಪಿ ಯೋಜನೆಯಡಿಯಲ್ಲಿ ರೈತ, ರೈತ ಮಹಿಳೆಯರಿಗೆ ಪೌಷ್ಟಿಕ ಭದ್ರತೆಗಾಗಿ ಕೈತೋಟದ ನಿರ್ಮಾಣ, ನಿರ್ವಹಣೆ ತರಬೇತಿ ಹಾಗೂ ಸಿಡ್ ಕಿಟ್ ವಿತರಣೆ ಕಾರ್ಯಕ್ರಮ ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿತ್ತು.
ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೌಷ್ಟಿಕ ಭದ್ರತೆಗಾಗಿ ಮಹಿಳೆಯರು ಕೈ ತೋಟ ಮಾಡಿಕೊಳ್ಳುವುದು ಬಹಳ ಮುಖ್ಯ ಹಾಗೆಯೇ ದಿನನಿತ್ಯದ ಆಹಾರದಲ್ಲಿ ತಾಜಾ ತರಕಾರಿಗಳ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದೆಂದು ತಿಳಿಸಿದರು.
ಧಾನ್ ಫೌಂಢೇಶನ್ ನಿರ್ದೇಶಕ ಪ್ರಕಾಶ್ ಮುಖ್ಯಅತಿಥಿಯಾಗಿ ಮಾತನಾಡಿ, ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ತರಬೇತಿಗಳನ್ನು ಆಯೋಜಿಲಾಗುತ್ತಿದ್ದು, ರೈತರು ಹಾಗೂ ರೈತ ಮಹಿಳೆಯರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ದಮಯಂತಿ ಪೌಷ್ಟಿಕ ಕೈತೋಟ ಮಾಡುವುದರಿಂದ ಹಾಗೂ ಕೈತೋಟದಲ್ಲಿ ಕೀಟನಾಶಕಗಳ ಬಳಕೆ ಮಾಡದಿರುವುದರಿಂದ ವಿಷ ಮುಕ್ತ ತರಕಾರಿಗಳನ್ನು ಸೇವಿಸಲು ಸಾಧ್ಯವೆಂದು ತಿಳಿಸಿದರು.
ಕೆವಿಕೆಯ ತೋಟಗಾರಿಕೆ ವಿಜ್ಞಾನಿ ಡಾ.ಜಿ.ಎಂ.ವಿನಯ್ ಅವರು ಪೌಷ್ಟಿಕ ಕೈ ತೋಟದ ರಚನೆ ಮತ್ತು ನಿರ್ವಹಣೆ ಹಾಗೂ ಕೈತೋಟದಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಭೂಮಿ ಸಿದ್ಧತೆ, ಬಿತ್ತನೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಸಸ್ಯ ಸಂರಕ್ಷಣೆ ವಿಜ್ಞಾನಿ ಡಾ. ವೈ. ಪಿ.ಪ್ರಸಾದ್ ಕೈತೋಟದಲ್ಲಿ ಬರುವಕೀಟ ಮತ್ತು ರೋಗಗಳ ಸಾವಯವ ನಿರ್ವಹಣಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಎಚ್.ವಿ.ದಿವ್ಯಾ ನಗರಗಳಲ್ಲಿ ಟೆರಸ್ ಗಾರ್ಡನ್ ಹಾಗೂ ಅದರ ಪ್ರಾಮುಖ್ಯತೆ ಮತ್ತು ನಿರ್ವಹಣೆ ಕುರಿತು ಮಾತನಾಡಿದರು. ಗೃಹ ವಿಜ್ಞಾನದ ವಿಜ್ಞಾನಿ ಡಾ. ದೀಪಕ ಪೌಷ್ಟಿಕ ಕೈ ತೋಟದಲ್ಲಿ ಬೆಳೆದ ತರಕಾರಿಗಳ ಪೌಷ್ಟಿಕ ಮಹತ್ವ ಹಾಗೂ ದಿನನಿತ್ಯದ ಆಹಾರದಲ್ಲಿ ವಿವಿಧ ತರಕಾರಿ ಬಳಕೆ ಮಾಡುವುದರಿಂದ ಜೀವನ ಶೈಲಿ ರೋಗಗಳನ್ನು ನಿವಾರಿಸಿಕೊಳ್ಳಬಹುದೆಂದು ತಿಳಿಸಿದರು. ಪೌಷ್ಟಿಕ ಹಾಗೂ ಸಮತೋಲನ ಆಹಾರದ ಪ್ರಾಮುಖ್ಯತೆ ಹಾಗೂ ದೈನಂದಿನ ಆಹಾರದಲ್ಲಿ ತರಕಾರಿಗಳು ಪ್ರಮುಖ ಭಾಗವಾಗಿದ್ದು, ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದಾಗ ತರಕಾರಿಗಳಲ್ಲಿ ಅಧಿಕ ಪ್ರಮಾಣದ ಜೀವಸತ್ವಗಳು, ಖನಿಜ ಲವಣಗಳು, ನಾರಿನಾಂಶ ಹೊಂದಿದ್ದು, ಇವುಗಳ ಸೇವನೆಯಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಹಾಗೂ ರಾಸಾಯನಿಕ ಮುಕ್ತ ತರಕಾರಿಗಳ ಸೇವನೆಯಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು ಎಂದರು.
ಡಾ.ದೀಪಕ ಸ್ವಾಗತಿಸಿದರು, ಎಚ್.ವಿ.ದಿವ್ಯಾ ನಿರೂಪಿಸಿದರು, ಡಾ.ಯು.ಎಂ.ರಕ್ಷಿತ್ ರಾಜ್ ವಂದಿಸಿದರು. 60ಕ್ಕೂ ಹೆಚ್ಚು ರೈತ ಮಹಿಳೆಯರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ರೈತರು, ರೈತ ಮಹಿಳೆಯರಿಗೆ ಪೌಷ್ಟಿಕ ಕೈತೋಟದ ಕಿಟ್ ಹಾಗೂ ಸಸಿಗಳನ್ನು ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.