ರೈತರಿಗೆ ಅವಶ್ಯಕತೆ, ಬೇಡಿಕೆಗೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಮೈಸೂರು ಜಿಲ್ಲೆಯ ರೈತರಿಗೆ ಸಾಂಸ್ಥಿಕ, ಹೊರಾಂಗಣ ಮತ್ತು ಆನ್‌ಲೈನ್‌ತರಬೇತಿಗಳನ್ನು ಆಯೋಜಿಸುತ್ತಿದ್ದು ರೈತರು ತರಬೇತಿಯ ಪ್ರಯೋಜನ ಪಡೆಯಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ ವತಿಯಿಂದ 2026-27ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ.ಕೋಟೆ ತಾಲೂಕು ಹಂಪಾಪುರ ಹೋಬಳಿಯ ಚಿಕ್ಕಕೆರೆಯೂರು ಗ್ರಾಮದಲ್ಲಿ ‘ಕೃಷಿ ಬೆಳೆಗಳಲ್ಲಿ ಬೀಜೋಪಚಾರದ ಮಹತ್ವ ಮತ್ತು ಸಮಗ್ರ ಕೃಷಿ ಪದ್ದತಿ ರೇಷ್ಮೆ ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ ಹಾಗೂ ಬಾಳೆ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ’ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ನಡೆಯಿತು.
ಎಚ್.ಡಿ.ಕೋಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೈ. ಪ್ರಸಾದ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಣ್ಣಿನ ಆರೋಗ್ಯದಿಂದ ಬೆಳೆ ಆರೋಗ್ಯ ಕಾಪಾಡಲು ರೈತರು ಏಕ ಬೆಳೆ ಪದ್ಧತಿಗೆ ಕಡಿವಾಣ ಹಾಕಿ ವೈಜ್ಞಾನಿಕವಾಗಿ ಬೆಳೆ ಪರಿವರ್ತನೆ ಮಾಡಬೇಕೆಂದು ತಿಳಿಸಿದರು ಹಾಗೂ ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ತಿಳಿಸಿದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ.ಮಧುಲತಾ ಮಾತನಾಡಿ, ರೈತರಿಗೆ ಅವಶ್ಯಕತೆ, ಬೇಡಿಕೆಗೆ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಮೈಸೂರು ಜಿಲ್ಲೆಯ ರೈತರಿಗೆ ಸಾಂಸ್ಥಿಕ, ಹೊರಾಂಗಣ ಮತ್ತು ಆನ್‌ಲೈನ್‌ತರಬೇತಿಗಳನ್ನು ಆಯೋಜಿಸುತ್ತಿದ್ದು ರೈತರು ತರಬೇತಿಯ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಡಾ.ಆರ್.ಎನ್.ಪುಷ್ಪ, ಸಸ್ಯ ರೋಗ ಶಾಸ್ತ್ರಜ್ಞರು, ಮೈಸೂರು ಅವರು ಬಾಳೆ ಬೆಳೆಯಲ್ಲಿ ರಸಾವರಿ ಪದ್ದತಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಾಳೆಯಲ್ಲಿ ಸೊರಗು ರೋಗ ಹಾಗೂ ಹಸಿಕಾಂಡ ಮೂತಿ ಹುಳುಗಳ ಬಾಧೆಯ ಲಕ್ಷಣಗಳು ಮತ್ತು ನಿರ್ವಹಣಾ ಕ್ರಮಗಳನ್ನು ವಿವರಿಸಿದರು.
ಚಿಕ್ಕಕೆರೆಯೂರು ಗ್ರಾಮದಲ್ಲಿ ಅತಿ ಹೆಚ್ಚು ತರಕಾರಿ ಬೆಳೆಗಾರರು ಇರುವುದರಿಂದ ಟೊಮ್ಯಾಟೊ, ಮೆಣಸಿನಕಾಯಿ, ಕೋಸು ಹಾಗೂ ಕುಂಬಳ ಜಾತಿಯ ತರಕಾರಿಗಳಲ್ಲಿ ಕಂಡು ಬರುವ ವಿವಿಧ ನಂಜುರೋಗಗಳ ಲಕ್ಷಣಗಳು ಹಾಗೂ ನಿರ್ವಹಣಾ ಕ್ರಮಗಳನ್ನು ತಿಳಿಸಿದರು.
ಎಚ್.ಡಿ.ಕೋಟೆ ತಾಲೂಕು ರೇಷ್ಮೆ ವಿಸ್ತರಣಾಧಿಕಾರಿ ದಿವ್ಯ ಅವರು ರೇಷ್ಮೆ:
ಹಿಪ್ಪುನೇರಳೆಯಲ್ಲಿನ ಬೂದು, ಚುಕ್ಕಿ ರೋಗ, ಬೇರು ಗಂಟು, ಕೊಳೆ ರೋಗಗಳ ಬಗ್ಗೆ, ಜೈವಿಕ ಹಾಗೂ ರಾಸಾಯನಿಕ ಗೊಬ್ಬರಗಳ ಬಳಕೆಯ ರೀತಿ, ರೇಷ್ಮೆ ಹುಳು ಮನೆ ಸ್ವಚ್ಚತೆ ಹಾಗೂ ವೆಂಟಿಲೇಶನ್‌ಹಾಗೂ ಪ್ರಯೋಜನದ ಜೊತೆಗೆ ಊಜಿ ಸಮಸ್ಯೆಗೆ ವೈಜ್ಞಾನಿಕ ಹಾಗೂ ತಾಂತ್ರಿಕ ನಿರ್ವಹಣೆ, ಮಾರುಕಟ್ಟೆಯ ಬೆಲೆ ಹಾಗೂ ಇಳುವರಿಗೆ ಬೇಕಿರುವ ಸೂಕ್ತ ಮಾಹಿತಿ, ಇಲಾಖೆಯ ಸೌಲಭ್ಯ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅಧಿಕಾರಿ ಸಿದ್ದಪ್ಪಸ್ವಾಮಿ ಮಾತನಾಡಿ, ರೈತರು ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಮತ್ತು ಸೌಲಭ್ಯಗಳನ್ನು ಪಡೆಯುವಂತೆ ತಿಳಿಸಿದರು.
ಚಂದ್ರಮೌಳೇಶ್ವರ ಮಹಿಳಾ ರೈತ ಉತ್ಪಾದಕರ ಸಂಸ್ಥೆ ಸಿಇಒ ಲಾವಣ್ಯ ಮಾತನಾಡಿ, ಎಫ್.ಪಿ.ಒ. ನಲ್ಲಿ ರೈತ ಮಹಿಳೆಯರ ಪಾತ್ರದ ಬಗ್ಗೆ ತಿಳಿಸಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಕ್ಷಿತ ಮಾತನಾಡಿ, ಪಿ.ಎಂ.ಕಿಸಾನ್, ಇ-ಕೆ.ವೈ.ಸಿ.ಬಗ್ಗೆ ತಿಳಿಸಿದರು. ಎಫ್.ಪಿ.ಒ.ಸಂಸ್ಥೆಯ ಸದಸ್ಯೆ ಸುಮಿತ್ರ ಸ್ವಾಗತಿಸಿ, ನಿರೂಪಿಸಿದರು.
ಕೃಷಿ ಅಧಿಕಾರಿಯಾದ ಸಿದ್ದಪ್ಪಸ್ವಾಮಿ, ಎಫ್.ಪಿ.ಒ. ಸಂಸ್ಥೆಯ ಅಧ್ಯಕ್ಷ ವೀಣಾ, ಉಪಾಧ್ಯಕ್ಷೆ ಸುಂದ್ರಮ್ಮ, ನಿರ್ದೇಶಕರು, ಸದಸ್ಯರು ಹಾಗೂ ಕೃಷಿ ಸಖಿಯರು ಇದ್ದರು. 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆದಕೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.