ಕಂಪ್ಲಿ: ತಾಳೆ ಕೃಷಿಯಿಂದ ರೈತರ ಆದಾಯ ದ್ವಿಗುಣಗೊಳ್ಳಲಿದ್ದು, ರೈತರು ತಾಳೆ ಬೆಳೆಯತ್ತ ಚಿತ್ತ ಹರಿಸಬೇಕು ಎಂದು ಬಳ್ಳಾರಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಜೆ. ಶಂಕರ ಹೇಳಿದರು.
ತಾಲೂಕಿನ ನಂ. 3 ಸಣಾಪುರ ಗ್ರಾಮದ ತಾಳೆ ಬೆಳೆಗಾರರಾದ ಹನುಮಂತರಾವ್, ರಘುರಾಮ್ ಅವರ ತೋಟದಲ್ಲಿ, ತೋಟಗಾರಿಕೆ ಇಲಾಖೆ ಹಾಗೂ ಹಗರಿಯ ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಳೆ ಬೆಳೆ ಯೋಜನೆಯ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲ್ಪವೃಕ್ಷದ ಕೃಷಿಯಂತೆ 30 ಅಡಿ ಅಂತರದಲ್ಲಿ ಬೆಳೆಯುವ ತಾಳೆ ನಿರ್ವಹಣೆಯೂ ಸುಲಭವಾಗಿದೆ. ಇತ್ತೀಚೆಗೆ ತಾಳೆ ಎಣ್ಣೆ ಬೆಲೆ ಏರಿಕೆಯಾಗಿ ಬೆಳೆಗಾರರಿಗೆ ಲಾಭದಾಯಕವಾಗಿದೆ. ತಾಳೆ ಬೆಳೆಯಲ್ಲಿ ಹೊಸ ತಳಿ ಪರಿಚಯಿಸಲಾಗಿದೆ. ಇದು ಕುಬ್ಜ ತಳಿಯಾಗಿದ್ದು, ಮುಳ್ಳು ಕಡಿಮೆ ಇದೆ. ಕಟಾವಿಗೂ ಅನುಕೂಲವಾಗಿದೆ. ಖಾದ್ಯತೈಲ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದನ್ನು ತಪ್ಪಿಸಲು ಸ್ಥಳೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಬೆಳೆಯಬೇಕಿದೆ. ತಾಳೆಗೆ ಇಲಾಖೆಯಿಂದ ಸೂಕ್ತ ಪ್ರೋತ್ಸಾಹ ಬೆಲೆಯೊಂದಿಗೆ ನಾನಾ ಯೋಜನೆಗಳಿದ್ದು ಸದುಪಯೋಗಪಡಿಸಿಕೊಳ್ಳಬೇಕಿದೆ. ತಾಲೂಕಿನ 45 ಹೆಕ್ಟೇರ್ ಸೇರಿ ಜಿಲ್ಲೆಯಾದ್ಯಂತ 500 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯಲಾಗಿದೆ ಎಂದು ತೋಟಗಾರಿಕೆ ರೈತರಿಗೆ ಮಾಹಿತಿ ನೀಡಿದರು. ಜು. 31ರೊಳಗಾಗಿ ಹೆಕ್ಟರ್‌ಗೆ ₹5375 ವಿಮಾ ಮೊತ್ತ ಪಾವತಿಸಿ ಮೆಣಸಿನಕಾಯಿ ಬೆಳೆ ವಿಮೆ ಮಾಡಿಸಬೇಕು ಎಂದು ಹೇಳಿದರು.
ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಎಸ್. ರವಿ ತಾಳೆ ಬೆಳೆ ಕುರಿತು ಸಮಗ್ರ ಮಾಹಿತಿ ನೀಡಿದರು.ಸಣಾಪುರ ಗ್ರಾಪಂ ಅಧ್ಯಕ್ಷ ವೈ. ರಮಣಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮ್ಯಾನೇಜರ್ ಎಸ್. ಹಿರೇಮಠ, ತಾಲೂಕು ಸಹಾಯಕ ತೋಟಗಾರಿಕೆ ಅಧಿಕಾರಿ ಟಿ. ಸುನೀಲ್‌ಕುಮಾರ್, ತಾಪಂ ಮಾಜಿ ಸದಸ್ಯ ವೆಂಕಟರಾಮರಾಜು ಉಪಸ್ಥಿತರಿದ್ದರು.
ಸಣಾಪುರ ಗ್ರಾಮದಲ್ಲಿ ನಡೆದ ತಾಳೆ ಬೆಳೆ ಯೋಜನೆಯ ತರಬೇತಿ ಕಾರ್ಯಕ್ರಮದಲ್ಲಿ ರೈತರು ತಾಳೆ ಬೆಳೆ ಯೋಜನೆಯ ಕರಪತ್ರಗಳನ್ನು ಪ್ರದರ್ಶಿಸಿದರು. ಪ್ರಮುಖರಾದ ಜೆ. ಶಂಕರ, ವೈ. ರಮಣಯ್ಯ, ಹನುಮಂತರಾವ್, ರಘುರಾಮ್ ಇತರರಿದ್ದರು.