ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಯಾವುದೇ ಚುನಾವಣೆಗಳು ಬೂತ್ ಮಟ್ಟದಲ್ಲಿ ನಡೆಯುವುದರಿಂದ, ಬೂತ್ ಸಮಿತಿಯೇ ಸುಪ್ರಿಂ ಆಗಿರುತ್ತದೆ ಎಂದು ಶಾಸಕ ಡಾ. ಮಂತರ್ ಗೌಡ ಹೇಳಿದರು.ಇಲ್ಲಿನ ಕೊಡವ ಸಮಾಜದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಪ್ರಚಾರ ಸಮಿತಿ ಹಾಗೂ ಸೋಮವಾರಪೇಟೆ ಬ್ಲಾಕ್ ಸಮಿತಿ ಸಹಯೋಗದಲ್ಲಿ ವಲಯ ಅಧ್ಯಕ್ಷರು, ಬೂತ್ ಅಧ್ಯಕ್ಷರು ಮತ್ತು ಪ್ರಚಾರ ಸಮಿತಿ ಸದಸ್ಯರಿಗೆ ಸೋಮವಾರ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಎಲ್ಲೂ ಬಿಜೆಪಿ ಅಲೆ ಕಾಣುತ್ತಿಲ್ಲ. ರಾಜ್ಯದಲ್ಲಿ ನುಡಿದಂತೆ ಕಾಂಗ್ರೆಸ್‍ನ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಹೇಳಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಬೂತ್ ಸಮಿತಿಗಳು ಪೂರ್ಣಗೊಳ್ಳದ ಸ್ಥಳಗಳಲ್ಲಿ ಪಕ್ಷದ ಹಿರಿಯ ಸದಸ್ಯರು, ಮಹಿಳೆಯರು ಹಾಗೂ ಹಿಂದುಗಳಿದ ವರ್ಗದವರನ್ನು ಸೇರಿ 15 ಮಂದಿ ಸದಸ್ಯರನ್ನೊಳಗೊಂಡ ಬೂತ್ ಸಮಿತಿಯನ್ನು ರಚಿಸಿ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಪ್ರಜಾಪ್ರಭತ್ವ ಮತ್ತು ಸಂವಿಧಾನ ಉಳಿವಿಗಾಗಿ ಈ ಬಾರಿಯ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇಂದು ದೇಶದಲ್ಲಿ ಜನಸಾಮಾನ್ಯರು ಮಾತನಾಡದಂತಹ ಸ್ಥಿತಿ ಇದ್ದು, ಸರ್ವಾಧಿಕಾರದ ಆಡಳಿತ ನಡೆಯುತ್ತಿದೆ. ಚುನಾವಣೆಯಲ್ಲಿ ಬೂತ್ ಸಮಿತಿ ಅಧ್ಯಕ್ಷರು ಯಜಮಾನನಿದ್ದಂತೆ. ಅಭ್ಯರ್ಥಿಯ ಗೆಲುವು ಮತ್ತು ಸೋಲು ಈ ಸಮಿತಿ ಕೈಯಲ್ಲಿದ್ದು, ಬೂತ್ ಸಮಿತಿ ಪದಾಧಿಕಾರಿಗಳು ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.ಕಾರ್ಯಾಗಾರದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಕೆ.ಪಿ.ಸಿ.ಸಿ. ಸದಸ್ಯೆ ಕೆ.ಪಿ. ಚಂದ್ರಕಲಾ, ಬ್ಲಾಕ್ ಅಧ್ಯಕ್ಷ ಬಿ.ಬಿ. ಸತೀಶ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ನಟೇಶ್ ಗೌಡ, ಬ್ಲಾಕ್ ಅಧ್ಯಕ್ಷ ಕೆ.ಎ. ಯಕೂಬ್, ಶೀಲಾ ಡಿಸೋಜ ಇದ್ದರು.