ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಬದಲಾಗುತ್ತಿರುವ ಕಾಲಮಾನದಲ್ಲಿ ಅನ್ನದಾತ ರೈತರು ಬತ್ತದ ಕೃಷಿಯನ್ನು ಉಳಿಸುವ ಅಗತ್ಯ ಇದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಅಭಿಪ್ರಾಯಪಟ್ಟರು.ಅವರು ಸಮೀಪದ ನೀರುಗುಂದ ಗ್ರಾಮದ ಸಮುದಾಯ ಭವನದಲ್ಲಿ ಶ್ರೀ ಕ್ಚೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸೋಮವಾರಪೇಟೆ ತಾಲೂಕು, ಕೃಷಿ ಇಲಾಖೆ, ಸೋಮವಾರಪೇಟೆ ಇವರ ಜಂಟಿ ಆಶ್ರಯದಲ್ಲಿ ಯಂತ್ರಶ್ರೀ ಯೋಜನೆ ಅಡಿಯಲ್ಲಿ ಯಾಂತ್ರಿಕೃತ ಬತ್ತ ನಾಟಿಗೆ ಪೂರಕವಾದ ಸಸಿ ಮಡಿ ತಯಾರಿ ಮತ್ತು ಬಿತ್ತನೆ ಬೀಜೋಪಚಾರ ಮಾಡುವ ವಿಧಾನಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಗದ್ದೆಗಳಲ್ಲಿ ಬತ್ತವನ್ನು ಬೆಳೆಯವುದನ್ನು ಕಡಿಮೆ ಮಾಡುತ್ತಿದ್ದಾರೆ. ಹೀಗಾದರೆ ಮುಂದೊಂದು ದಿನ ಬತ್ತ ನಶಿಸಿ ಹೋಗಬಹುದು ಈ ನಿಟ್ಟಿನಲ್ಲಿ ಬತ್ತವನ್ನು ಉಳಿಸುವುದು ನಮ್ಮೆಲ್ಲಾರ ಕರ್ತವ್ಯವಾಗಿದೆ ಎಂದರು.ಧರ್ಮಸ್ಥಳ ಸಂಸ್ಥೆಯು ಕೃಷಿಗೆ ಆದ್ಯತೆ ನೀಡುತ್ತಿರುವ ನಿಟ್ಟಿನಲ್ಲಿ ಸಂಸ್ಥೆಯು ಕೃಷಿ ಇಲಾಖೆ ಜೊತೆಗೂಡಿ ಯಾಂತ್ರಿಕೃತ ಕೃಷಿ ವಿಧಾನಗಳ ಕುರಿತು ರೈತರಿಗೆ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳುತ್ತಿದೆ ಮತ್ತು ನಮ್ಮ ಸಂಸ್ಥೆಯ ಯಂತ್ರಶ್ರೀ ಕೇಂದ್ರದಲ್ಲಿ ನಾಟಿ ಯಂತ್ರ ಮತ್ತು ಇತರೆ ಕೃಷಿ ಯಂತ್ರಗಳು ಲಭ್ಯ ಇದ್ದು ಇವುಗಳನ್ನು ಬಾಡಿಗೆಗೆ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಾಗಾರದಲ್ಲಿ ಸೋಮವಾರಪೇಟೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೀರಣ್ಣ ಇಲಾಖೆಯಿಂದ ರೈತರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರೆ ಬಿತ್ತನೆ ಬೀಜೋಪಚಾರ ವಿಧಾನದ ಬಗ್ಗೆ ಕೃಷಿ ಇಲಾಖೆಯ ಆತ್ಮ ಯೋಜನೆಯ ಸಹಾಯಕ ತಾಂತ್ರಿಕಾಧಿಕಾರಿ ಬಾಂಧವ್ಯ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ನೀರುಗುಂದ ಗ್ರಾಮದ ಪ್ರಗತಿಪರ ಕೃಷಿಕ ಹೇಮಚಂದ್ರ ಅಧ್ಯಕ್ಷತೆ ವಹಿಸಿ ಕೃಷಿಯ ಬಗ್ಗೆ ಅನುಭವ ಹಂಚಿಕೊಂಡರು. ಕಾರ್ಯಾಗಾರದಲ್ಲಿ ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಗ್ರಾಮಾಭಿವೃದ್ದಿ ಸಂಸ್ಥೆಯ ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಮಾಹಿತಿ ನೀಡಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ರಾಜಣ್ಣ, ಸೇವಾ ಪ್ರತಿನಿಧಿಗಳಾದ ರಾಣಿ, ಶಾರದ, ಫಾತೀಮಾ ಮುಂತಾದವರು ಹಾಜರಿದ್ದರು.