ಕನ್ನಡಪ್ರಭ ವಾರ್ತೆ, ತುಮಕೂರು
ದಿನ ನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವ ಸಾವಿರಾರು ಉದ್ಯೋಗಿ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿರುವ ರೈಲುಗಳು ನಮ್ಮ ಜೀವನಾಡಿಗಳಾಗಿವೆ, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ ಎಂದು ವೇದಿಕೆ ಅಧ್ಯಕ್ಷ ಕರಣಂ ರಮೇಶ್ ತಿಳಿಸಿದರು.ಭಾನುವಾರ ತುಮಕೂರು-ಬೆಂಗಳೂರು ಮೆಮು ರೈಲು ಆರಂಭದ 12ನೇ ವಾರ್ಷಿಕೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದರು. ಉದ್ಯೋಗಿ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಕಚೇರಿ ತಲುಪಲು ರೈಲುಗಳು ಸುಲಭದ ಸಂಚಾರ ವ್ಯವಸ್ಥೆಯಾಗಿವೆ. ಅಲ್ಲದೆ, ಬಡ ಮತ್ತು ಮಧ್ಯಮವರ್ಗದ ಜನಸಾಮಾನ್ಯರ ಸಂಚಾರಕ್ಕೆ ರೈಲುಗಳು ತುಂಬಾ ಸಹಕಾರಿಯಾಗಿವೆ ಎಂದರು.ವೇದಿಕೆ ಕಾರ್ಯದರ್ಶಿ ಸಿ. ನಾಗರಾಜ್ ಮಾತನಾಡಿ, ನಮ್ಮ ಸಂಸದ ವಿ. ಸೋಮಣ್ಣನವರು ರೈಲ್ವೆ ರಾಜ್ಯ ಸಚಿವರಾದ ಮೇಲೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದೆ. ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕೆಳಸೇತುವೆ, ಮೇಲ್ಸೇತುವೆಗಳು ನಿರ್ಮಾಣವಾಗುತ್ತಿವೆ. ಇದರಿಂದ ಜನಸಾಮಾನ್ಯರ ಸುಗಮ ಓಡಾಟಕ್ಕೆ ಅನುಕೂಲವಾಗಿವೆ. ತುಮಕೂರು ರೈಲು ನಿಲ್ದಾಣ, ಅತ್ಯಾಧುನಿಕವಾಗಿ ಮರು ನಿರ್ಮಾಣಗೊಳ್ಳಲಿದೆ ಎಂದರಲ್ಲದೆ, ತುಮಕೂರಿನಿಂದ ಅರಸೀಕೆರೆ ಕಡೆಗೆ ಮತ್ತು ಬೆಂಗಳೂರು ಕಡೆಗೆ ಇನ್ನೂ ಹೆಚ್ಚಿನ ಮೆಮು ರೈಲುಗಳ ಸಂಚಾರದ ಅಗತ್ಯವಿದೆ. ಇದನ್ನು ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಖಜಾಂಚಿ ಆರ್. ಬಾಲಾಜಿ ಮಾತನಾಡಿ, ನಮ್ಮ ವೇದಿಕೆಯ ಕಾರ್ಯಚಟುವಟಿಕೆಗಳಿಗೆ ತುಮಕೂರು ರೈಲು ನಿಲ್ದಾಣವೇ ಆಧಾರವಾಗಿದೆ. ಇದಕ್ಕೆ ರೈಲ್ವೆ ಹಿರಿಯ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಯ ಸಹಕಾರ, ಸಹಾಯದಿಂದ ವೇದಿಕೆ ಮತ್ತು ಇಲಾಖೆ ಸಿಬ್ಬಂದಿಯ ನಡುವೆ ಅವಿನಾಭಾವ ಸಂಬಂಧಕ್ಕೆ ವೇದಿಕೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ವೇದಿಕೆ ಹಿರಿಯ ಸದಸ್ಯರಾದ ಟಿ.ಆರ್. ರಘೋತ್ತಮ ರಾವ್, ಸದಸ್ಯ ಶಿವಕುಮಾರಸ್ವಾಮಿ ಮಾತನಾಡಿದರು.ನಮ್ಮ ರೈಲಿನ 12ನೇ ಜನ್ಮ ದಿನಾಚರಣೆ ಅಂಗವಾಗಿ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರು ಬೆಳಗ್ಗೆಯೇ ನಿಲ್ದಾಣಕ್ಕೆ ಬಂದು ರೈಲಿಗೆ ಮಾವಿನ ತೋರಣ, ಬಾಳೆಕಂದು, ಹೂವುಗಳನ್ನು ಕಟ್ಟಿ ಅಲಂಕರಿಸಿದರು. ರೈಲಿನ ಚಾಲಕರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿ, ಎಲ್ಲರಿಗೂ ಹಂಚಿದರು.ಕಾರ್ಯಕ್ರಮದಲ್ಲಿ ತುಮಕೂರು ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಆರ್. ಬಸವರಾಜು, ಹೆಬ್ಬಾಕ ಮಲ್ಲಿಕಾರ್ಜುನ್, ಬಿಜೆಪಿ ಮುಖಂಡರಾದ ಮಹದೇವಯ್ಯ, ವೀರೇಶ್, ಆರ್‌ಪಿಎಫ್ ಸಬ್ ಇನ್ಸ್ಪೆಕ್ಟರ್ ನಿರ್ಮಲಾಕುಮಾರಿ ಮತ್ತು ಸಿಬ್ಬಂದಿ, ರೈಲ್ವೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಟರಾಜ್ ಮತ್ತು ಸಿಬ್ಬಂದಿ, ಸ್ಟೇಷನ್ ವ್ಯವಸ್ಥಾಪಕ ರಮೇಶ್ ಬಾಬು ಮತ್ತು ಸಿಬ್ಬಂದಿ, ವೇದಿಕೆ ಉಪಾಧ್ಯಕ್ಷರಾದ ಮಾಧವಮೂರ್ತಿ ಗುಡಿಬಂಡೆ, ಪರಮೇಶ್ವರ್, ಜಂಟಿ ಕಾರ್ಯದರ್ಶಿಗಳಾದ ರವಿಶಂಕರ್, ರಾಮಾಂಜನೇಯ, ನಿರ್ದೇಶಕರಾದ ರಘು ರಾಮಚಂದ್ರಯ್ಯ, ದೀಪಕ್, ವೀರಪ್ಪ, ನಾಗೇಂದ್ರ, ಗುರುಪ್ರಸಾದ್, ಅರ್ಷದ್, ವೀರಪ್ಪ, ನಂದಿನಿ, ಉಮಾಶಂಕರ್, ಹುಸೇನ್, ಅಶ್ವತ್ಥನಾರಾಯಣ ಮತ್ತಿತರ ಪ್ರಯಾಣಿಕರು ಭಾಗವಹಿಸಿದ್ದರು.