ಬಡವರ ಬ್ಯಾಂಕ್‌ ಅಕೌಂಟ್‌ನಿಂದ ಕೋಟ್ಯಂತರ ವಹಿವಾಟು: ಸಿ.ಟಿ.ರವಿ ಆರೋಪ

KannadaprabhaNewsNetwork |  
Published : Jul 14, 2026, 01:15 AM IST
ಷಷಷ | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರಿನ ವಿವಿಧ ಬ್ಯಾಂಕ್‌ಗಳಲ್ಲಿ ಬಡವರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡು ಸಾವಿರಾರು ಖಾತೆ ತೆರೆದು ಕೋಟ್ಯಾಂತರ ರು. ಹಣಕಾಸು ವ್ಯವಹಾರ ನಡೆಸಲಾಗಿದೆ. ಇದು ಚಿಕ್ಕಮಗಳೂರಿನ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಆರ್ಥಿಕ ಹಗರಣ. ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮೂಲಕ ನಡೆಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ಆಗ್ರಹಿಸಿದ್ದಾರೆ.

-ಸಿ.ಟಿ.ರವಿ ಆರೋಪ । ಬಡವರಿಗೆ ಸರ್ಕಾರ ಹಾಗೂ ಮೋದಿ ಹಣ ಬರುತ್ತದೆ ಎಂದು ನಂಬಿಸಿ ವಂಚನೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರಿನ ವಿವಿಧ ಬ್ಯಾಂಕ್‌ಗಳಲ್ಲಿ ಬಡವರ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡು ಸಾವಿರಾರು ಖಾತೆ ತೆರೆದು ಕೋಟ್ಯಾಂತರ ರು. ಹಣಕಾಸು ವ್ಯವಹಾರ ನಡೆಸಲಾಗಿದೆ. ಇದು ಚಿಕ್ಕಮಗಳೂರಿನ ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಆರ್ಥಿಕ ಹಗರಣ. ಪ್ರಕರಣದ ಸಮಗ್ರ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಮೂಲಕ ನಡೆಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಡಾ.ಸಿ.ಟಿ.ರವಿ ಆಗ್ರಹಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬಡವರಿಗೆ ಸರ್ಕಾರ ಹಾಗೂ ಮೋದಿ ಹಣ ಬರುತ್ತದೆ ಎಂದು ನಂಬಿಸಿ ಅವರ ಆಧಾರ್ ಹಾಗೂ ಪಾನ್‌ ಕಾರ್ಡ್ ಪಡೆದು ಹಲವು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯಲಾಗಿದೆ. ಖಾತೆದಾರರಿಗೆ ತಿಳಿಯದಂತೆ ಕೋಟ್ಯಾಂತರ ರು. ವಹಿವಾಟು ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬ್ಯಾಂಕ್ ಖಾತೆಗಳ ಪಾಸ್‌ ಬುಕ್, ಎಟಿಎಂ ಕಾರ್ಡ್ ಹಾಗೂ ಸಿಮ್ ಕಾರ್ಡ್‌ಗಳನ್ನು ಸಹ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದರು.

ಆನ್‌ಲೈನ್ ಬೆಟ್ಟಿಂಗ್, ಡಿಜಿಟಲ್‌ ಅರೆಸ್ಟ್ ಪ್ರಕರಣಗಳಲ್ಲಿ ಮೋಸದಿಂದ ಪಡೆದ ಹಣ ಅಥವಾ ಹ್ಯಾಕ್ ಮಾಡಿದ ಖಾತೆಗಳ ಹಣ ವನ್ನು ಈ ರೀತಿಯಲ್ಲಿ ವರ್ಗಾವಣೆ ಮಾಡಿರುವ ಸಾಧ್ಯತೆ ಇದೆ. ಆದರೆ, ಕೋಟ್ಯಾಂತರ ರು. ವಹಿವಾಟು ನಡೆದಿರುವುದು ಸ್ಪಷ್ಟ ವಾಗಿದ್ದು, ಅದರ ಮೂಲ ಪತ್ತೆ ಹಚ್ಚುವುದು ಅಗತ್ಯ ಎಂದು ತಿಳಿಸಿದರು.

ಈ ಹಗರಣ ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಬೇರೆ ಬೇರೆ ಜಿಲ್ಲೆ-ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜಾಲ ಕಾರ್ಯನಿರ್ವಹಿಸುತ್ತಿರುವ ಅನುಮಾನಗಳಿವೆ. ಕೆಲವರು ದುಬೈನಲ್ಲಿ ಕುಳಿತು ಈ ಜಾಲ ನಿಯಂತ್ರಿಸುತ್ತಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಶಿವಮೊಗ್ಗದಲ್ಲಿ ₹87 ಕೋಟಿ ವಹಿವಾಟು ನಡೆದಿದ್ದ ಪ್ರಕರಣದಲ್ಲಿ ಶಿವಮೊಗ್ಗದ ಜಗದೀಶ್, ಅನಂತ್ ಹಾಗೂ ಚಿಕ್ಕಮ ಗಳೂರಿನ ಅರ್ಷದ್ ಬಂಧನಕ್ಕೊಳಗಾಗಿದ್ದರು. ಆ ಸಂದರ್ಭದಲ್ಲೇ ಚಿಕ್ಕಮಗಳೂರು ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸ ಬೇಕಾಗಿತ್ತು ಎಂದು ಹೇಳಿದರು.

ಈಗಾಗಲೇ ದೂರು ನೀಡಿರುವ ಕೆಲ ಪ್ರಕರಣಗಳಲ್ಲಿ ಆನಂದ್‌ ಅವರ ಖಾತೆಯಲ್ಲಿ ₹26.91 ಲಕ್ಷ ಜಮೆ ಹಾಗೂ ₹26.50 ಲಕ್ಷ ಡೆಬಿಟ್‌ ಆಗಿದೆ. ಹನುಮಂತ ಅವರ ಖಾತೆಯಲ್ಲಿ ₹34.78 ಲಕ್ಷ ಜಮಾಗೊಂಡು ₹33.28 ಲಕ್ಷ ಕಡಿತವಾಗಿದೆ. ಮನೆ ಕೆಲಸ ಮಾಡುವ ಅಶ್ವಿನಿ ಖಾತೆಯಲ್ಲಿ ₹28.94 ಲಕ್ಷ ಜಮಾಗೊಂಡು ₹28.72 ಲಕ್ಷ ಡೆಬಿಟ್‌ ಆಗಿದೆ. ಇಂತಹ ಸಾವಿರಾರು ಖಾತೆ ಗಳಲ್ಲಿ ಇದೇ ಮಾದರಿ ಹಣಕಾಸು ವ್ಯವಹಾರ ನಡೆದಿರುವ ಅನುಮಾನವಿದೆ ಎಂದು ಸಿ.ಟಿ.ರವಿ ಹೇಳಿದರು.ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಶಾಂತ್, ಅಸ್ಲಾಂ, ಸಂಜಯ್, ರಾಹುಲ್, ಚೇತನ್ ಹಾಗೂ ಶರತ್‌ ಅಲಿಯಾಸ್‌ ಕಾಂತ್ ಸೇರಿದಂತೆ ಕೆಲವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬ್ಯಾಂಕ್ ಸಿಬ್ಬಂದಿ ಪಾತ್ರವನ್ನೂ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.ಆದರೆ ಬಂಧಿತರೇ ಈ ಹಗರಣದ ಸೂತ್ರಧಾರರೋ ಅಥವಾ ಕೇವಲ ಕೆಳ ಹಂತದ ಕಾರ್ಯಕರ್ತರೋ ಎಂಬುದನ್ನು ಪತ್ತೆ ಹಚ್ಚಬೇಕು. ಈ ಹಗರಣದ ನಿಜವಾದ ಕಿಂಗ್‌ಪಿನ್‌ಗಳನ್ನು ಬಂಧಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಈ ಪ್ರಕರಣದಲ್ಲಿ ಕೆಲವು ರಾಜಕಾರಣಿಗಳೊಂದಿಗೆ ಆರೋಪಿಗಳಿಗೆ ಸಂಪರ್ಕವಿರುವ ಫೋಟೋಗಳ ಕುರಿತು ಮಾಹಿತಿ ಹರಿ ದಾಡುತ್ತಿದೆ. ಕೇವಲ ಫೋಟೋ ಇರುವುದರಿಂದ ಯಾರನ್ನೂ ತಪ್ಪಿತಸ್ಥರೆಂದು ಹೇಳುವುದಿಲ್ಲ. ಆದರೆ,ಆರಂಭಿಕ ಹಂತದಲ್ಲೇ ರಾಜಿ ಪಂಚಾಯಿತಿ ನಡೆಸಲು ಅಥವಾ ಪ್ರಕರಣ ಮುಚ್ಚಿಹಾಕಲು ಯಾರಾದರೂ ಪ್ರಭಾವ ಬೀರಿದ್ದಾರೆಯೇ ಎಂಬುದರ ತನಿಖೆಯೂ ನಡೆಯಬೇಕು. ಇತ್ತೀಚೆಗೆ ಒಬ್ಬ ಜನಪ್ರತಿನಿಧಿ ಜನ್ಮದಿನದಂದು ಆರೋಪಿಗಳು ಫ್ಲೆಕ್ಸ್ ಹಾಕಿ ಸಂಭ್ರಮಿಸಿದ್ದಾರೆ ಎಂಬ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಬೇಕು ಎಂದರು.

ಇದು ಸಾಮಾನ್ಯ ವಂಚನೆ ಪ್ರಕರಣವಲ್ಲ, ಗಂಭೀರ ಸ್ವರೂಪದ ಅಪರಾಧ. ಪ್ರಾಥಮಿಕ ತನಿಖೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಯೇ ನೇರವಾಗಿ ಮೇಲ್ವಿಚಾರಣೆ ಮಾಡಬೇಕು. ಯಾವುದೇ ದಾಖಲೆ ಅಥವಾ ಸಾಕ್ಷ್ಯ ನಾಶವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಲಭ್ಯ ಮಾಹಿತಿ ಸಲ್ಲಿಸಲಾಗುವುದು ಹಾಗೂ ಕೇಂದ್ರ ಗೃಹ ಸಚಿವರು ಮತ್ತು ರಾಜ್ಯ ಮುಖ್ಯಮಂತ್ರಿಗಳಿಗೆ ಸಿಬಿಐ ಮತ್ತು ಇಡಿ ತನಿಖೆ ಕೋರಿ ಪತ್ರ ಬರೆಯುವುದಾಗಿ ತಿಳಿಸಿದರು.

-- ಬಾಕ್ಸ್‌ --

ಮನೆ ಕೆಲಸ, ಪೌರಕಾರ್ಮಿಕರ ಖಾತೆಗೆಯಲ್ಲಿ ಲಕ್ಷಾಂತರ ಹಣ

ಹಗರಣದಲ್ಲಿ ಪೌರಕಾರ್ಮಿಕರು, ಮನೆ ಕೆಲಸ ಮಾಡುವವರು, ಕಾರ್ಪೆಂಟರ್‌ಗಳು, ದಿನಗೂಲಿ ಕಾರ್ಮಿಕರ ಬ್ಯಾಂಕ್‌ ಖಾತೆಗಳಲ್ಲಿ ಲಕ್ಷಾಂತರ ರು. ವಹಿವಾಟು ನಡೆಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅವಿದ್ಯಾವಂತರನ್ನೇ ಗುರಿಯಾಗಿಸಿ ಕೊಂಡಿ ರುವುದು ಗಮನಾರ್ಹ. ಬ್ರೋಕರ್‌ಗಳು ಅಲ್ಪ ಪ್ರಮಾಣದ ಹಣದ ಆಮಿಷವೊಡ್ಡಿ ಅವರ ದಾಖಲೆ ಪಡೆದುಕೊಂಡು ಹಗರಣ ನಡೆಸಲಾಗಿದೆ ಎಂದು ಡಾ.ಸಿ.ಟಿ.ರವಿ ಆರೋಪಿಸಿದರು.(ಸುದ್ದಿಗೋಷ್ಠಿಯ ಫೋಟೋ ಬಳಸಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಗೆಮಡು ಗಂಗಾಧರೇಶ್ವರ ಕ್ಷೇತ್ರದ ಅಭಿವೃದ್ಧಿಗೆ ವೇಗ
ಅರಸೀಕೆರೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ