ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಗಂಡಸಿ ಹೋಬಳಿಯ ಗೊಲ್ಲರಹಳ್ಳಿ ಸಮೀಪದಲ್ಲಿರುವ ಐತಿಹಾಸಿಕ ಗಂಗೆಮಡು ಗಂಗಾಧರೇಶ್ವರ ಸ್ವಾಮಿ ಕ್ಷೇತ್ರವನ್ನು ಧಾರ್ಮಿಕ ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೇಗವಾಗಿ ಕೈಗೊಳ್ಳಲಾಗಿದೆ. ದೇವಾಲಯ, ರಸ್ತೆ, ಸಮುದಾಯ ಭವನ, ಗುರುಕುಟೀರ ಸೇರಿದಂತೆ ಹಲವು ಮೂಲಸೌಕರ್ಯ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಭಕ್ತರ ಸೇವೆಗೆ ಸಮರ್ಪಿಸಲಾಗುವುದು ಎಂದು ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ ಅಧ್ಯಕ್ಷ ಗಿರಿಗೌಡ ತಿಳಿಸಿದರು.ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸಂಘದ ಪದಾಧಿಕಾರಿಗಳೊಂದಿಗೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಗಂಗಾಧರೇಶ್ವರ ಸ್ವಾಮಿಯ ನೂತನ ದೇವಾಲಯ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಕನಕ ಪೀಠದ ರಾಜ್ಯಮಟ್ಟದ ಧಾರ್ಮಿಕ ಪ್ರವಾಸಿ ಕ್ಷೇತ್ರದ ಪ್ರವೇಶದ್ವಾರದಲ್ಲಿ ಸುಮಾರು ₹ 1 ಕೋಟಿ ವೆಚ್ಚದಲ್ಲಿ ಭವ್ಯ ಮಹಾದ್ವಾರ ನಿರ್ಮಿಸಲಾಗುತ್ತಿದೆ. ಮಹಾದ್ವಾರದಲ್ಲಿ ಮೈಲಾರಲಿಂಗೇಶ್ವರ, ಬೀರಲಿಂಗೇಶ್ವರ, ರೇವಣಸಿದ್ದೇಶ್ವರ ಹಾಗೂ ಲಕ್ಷ್ಮೀದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.2019ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರಕ್ಕೆ ಭೇಟಿ ನೀಡಿದ ಬಳಿಕ ಅವರ ಮಾರ್ಗದರ್ಶನ ಹಾಗೂ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರ ವಿಶೇಷ ಆಸಕ್ತಿ ಮತ್ತು ಸಹಕಾರದಿಂದ ₹ 1.50 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಲ್ಲದೆ ₹ 80 ಲಕ್ಷ ವೆಚ್ಚದಲ್ಲಿ ಕನಕ ಸಮುದಾಯ ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಜರಾಯಿ ಇಲಾಖೆಯಿಂದ ಬಿಡುಗಡೆಯಾದ 25 ಲಕ್ಷ ರು.ಅನುದಾನ ಸೇರಿದಂತೆ ಒಟ್ಟು ₹ 60 ಲಕ್ಷ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಅಂತಿಮ ಹಂತ ತಲುಪಿದೆ ಎಂದು ವಿವರಿಸಿದರು.

ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರ ಮಾರ್ಗದರ್ಶನದಲ್ಲಿ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘವು 75 ಲಕ್ಷ ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳನ್ನು ಒಳಗೊಂಡ ಗುರುಕುಟೀರ ನಿರ್ಮಿಸುತ್ತಿದ್ದು, ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಹಾಗೂ ಶಿಕ್ಷಕ ಗುತ್ತಿನಕೆರೆ ಬಸವರಾಜು ಮಾತನಾಡಿ, ಸುಮಾರು 30 ಎಕರೆ ವಿಸ್ತೀರ್ಣದ ಶ್ರೀಕ್ಷೇತ್ರದಲ್ಲಿ ಕನಕದಾಸರು, ಕಾಳಿದಾಸರು, ಚಂದ್ರಗುಪ್ತ ಮೌರ್ಯ, ಅಶೋಕ ಚಕ್ರವರ್ತಿ, ಅಕ್ಕ-ಬುಕ್ಕ, ಅಹಲ್ಯಾಬಾಯಿ ಹೋಳ್ಕರ್, ಸಂಗೊಳ್ಳಿ ರಾಯಣ್ಣ, ಮೈಲಾರಲಿಂಗೇಶ್ವರ, ರೇವಣಸಿದ್ದೇಶ್ವರ ಸೇರಿದಂತೆ 40ಕ್ಕೂ ಹೆಚ್ಚು ಮಹಾಪುರುಷರ ಪುತ್ಥಳಿಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್ ಕುಮಾರ್‌, ಸೋಮಶೇಖರ್‌, ಬಸವರಾಜು, ಕುಬೇರ್, ರಮೇಶ್, ನಾಗರಾಜ್, ಬೀರಲಿಂಗೇಗೌಡ, ಬಿ. ಪರಮೇಶ್, ರಂಗಸ್ವಾಮಿ, ಚಿದಾನಂದ, ಕುಮಾರ್, ದಾಸೇಗೌಡ, ಕೃಷ್ಣ, ದಿನೇಶ್, ಸತೀಶ್, ಚಂದ್ರೇಗೌಡ ಸೇರಿದಂತೆ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.