ಬಿಂದುಮಾಧವ ಮಣ್ಣೂರ
ಕನ್ನಡಪ್ರಭ ವಾರ್ತೆ ಅಫಜಲಪುರತಾಲೂಕಿನ ರೈತರ ಜೀವನಾಡಿ ಭೀಮಾ ನದಿ ಸುಮಾರು ನಾಲ್ಕೈದು ತಿಂಗಳಿನಿಂದ ಬತ್ತಿ ಹೋಗಿರುವುದರಿಂದ ನದಿ ತೀರದ ಗ್ರಾಮಗಳ ರೈತರಿಗೆ ತೀವ್ರ ಸಂಕಷ್ಟ ಎದುರಾಗಿದೆ.
ಮಹಾರಾಷ್ಟ್ರದ ಉಜನಿ ಜಲಾನಯನ ಪ್ರದೇಶದಲ್ಲಿ ವಾಡಿಕೆ ಮಳೆಯಾಗದಿರುವುದರಿಂದ ಜಲಾಶಯದಲ್ಲಿ ನೀರು ಸಂಗ್ರಹ ಕನಿಷ್ಠ ಮಟ್ಟಕ್ಕೆ ತಲುಪಿದೆ. ಇದರಿಂದಾಗಿ ಭೀಮಾ ನದಿಗೆ ಮಹಾರಾಷ್ಟ್ರ ನೀರು ಹರಿಸುವುದನ್ನು ನಿಲ್ಲಿಸಿದೆ.ಸೋಲಾಪುರ ನಗರಕ್ಕೆ ಉಜನಿ ಜಲಾಶಯದಿಂದ ಸೀನ ನದಿಯ ಮೂಲಕ ಪರ್ಯಾಯವಾಗಿ ನೀರು ಪೂರೈಕೆ ಮಾಡುತ್ತಿರುವುದಿಂದ ಭೀಮಾ ನದಿಗೆ ನೀರು ಬಿಡದಿರುವುದು ನದಿ ಪಾತ್ರದ ಜನರಿಗೆ ಮತ್ತಷ್ಟು ಸಂಕಷ್ಟವನ್ನುಂಟು ಮಾಡಿದೆ.
ಭೀಮಾ ನದಿ ಬತ್ತಿರುವುದರಿಂದ ನದಿ ತೀರದ ತಾಲೂಕಿನ ಸುಮಾರು 40 ಹಳ್ಳಿಗಳ ಜನರು ಪರಿತಪಿಸುವಂತಾಗಿದೆ.ನದಿ ತೀರದ ರೈತರ ಕಬ್ಬು ಬಾಳೆ ಸೂರ್ಯಕಾಂತಿ ಶೇಂಗಾ ಸೇರಿದಂತೆ ವಿವಿಧ ಬೆಳೆಗಳಿಗೆ ತುಂಬಾ ತೊಂದರೆಯಾಗುತ್ತಿದೆ
ಕೃಷ್ಣಾ ಎಡ ದಂಡೆ ಕಾಲುವೆ ಮೂಲಕ ನೀರು ಬಿಡಲಾಗುತ್ತಿದ್ದರೂ ತಾಲೂಕಿನ ಕೊನೆ ಹಳ್ಳಿಗಳ ವರೆಗೆ ಈ ನೀರು ಹರಿಯುತ್ತಿಲ್ಲ.
ನೀರಿನ ಕೊರತೆಯಿಂದಾಗಿ ವಾಣಿಜ್ಯ ಬೆಳೆಗಳಾದ ಕಬ್ಬು, ಬಾಳೆ ಸೇರಿದಂತೆ ವಿವಿಧ ಬೆಳೆಗಳು ಒಣಗಲಾರಂಭಿಸಿವೆ.ಇನ್ನು ಹಲವಾರು ರೈತರು ನದಿ ನೀರು ಅವಲಂಬಿಸಿ ತೊಗರಿ, ಸೂರ್ಯಕಾಂತಿ, , ಶೇಂಗಾ ಮುಂತಾದ ಬೆಳೆಗಳ ಬಿತ್ತನೆ ಮಾಡಿದ್ದಾರೆ.ಅವುಗಳೂ ಬಾಡಲಾರಂಭಿಸಿವೆ. ಇತ್ತ ಮಳೆಯೂ ಇಲ್ಲ, ಭೀಮಾ ನದಿಯಲ್ಲಿ ನೀರು ಇಲ್ಲದಿರುವುದರಿಂದ ರೈತರು ಅಡಕತ್ತರಿಯಲ್ಲಿ ಸಿಲುಕಿದ್ದಾರೆ.ಮುಂಗಾರು ಸಂಪೂರ್ಣವಾಗಿ ಕೈ ಕೊಟ್ಟದ್ದರಿಂದ ತಾಲೂಕಿನಾದ್ಯಂತ ಬರದ ಛಾಯೆ ಆವರಿಸಿದೆ.ಹಳ್ಳ ಕೊಳ್ಳಗಳಲ್ಲಿ ಹನಿ ನೀರು ಇಲ್ಲ. ಬಾವಿಗಳು ಬರಿದಾಗಿವೆ. ಶೇ50 ರಷ್ಟು ಮಳೆ ಕೊರತೆಯಿಂದ ಬಿತ್ತನೆಯೂ ಆಗದೆ ಇರುವುದರಿಂದ ರೈತರು ಕಂಗಾಲಾಗಿದ್ದಾರೆ.
ಆಗೊಮ್ಮೆ, ಈಗೊಮ್ಮೆ ಮಳೆಯ ಸಿಂಚನವಾಗುತ್ತಿದ್ದರೂ ಅದು ಬಿತ್ತನೆಗೆ ಅನುಕೂಲಕರವಾಗಿಲ್ಲ.ಮಳೆಗಾಲ ಆರಂಭವಾಗಿ ತಿಂಗಳು ಕಳೆಯುತ್ತಾ ಬಂದರೂ ಮಳೆಯಾಗದ ಕಾರಣ ಮುಂಗಾರು ಬಿತ್ತನೆ ಕುಂಠಿತವಾಗಿದೆ. ಇನ್ನೊಂದೆಡೆ ಕೊಳವೆ ಬಾವಿ, ತೆರೆದ ಬಾವಿ ಮತ್ತು ಭೀಮಾನದಿ ಬತ್ತಿ ಹೋಗಿದ್ದರಿಂದ ಬೇಸಿಗೆ ಬೆಳೆಗಳು ಒಣಗುತ್ತಿವೆ. ಇನ್ನೊಂದೆಡೆ ದಿನದಿಂಧ ದಿನಕ್ಕೆ ಆಷಾಢ ಮಾಸದ ಗಾಳಿ ಹೆಚ್ಚಾಗುತ್ತಿದ್ದು, ಕೃಷಿಗೆ ಗಂಡಾಂತರ ಎದುರಾಗಿದೆ.ಮಣ್ಣೂರ ಗ್ರಾಮದ ರೈತ ಮುಖಂಡರಾದ ಸಂಜೀವಕುಮಾರ ನನ್ನಾಜಿ ಮಾಹಿತಿ ನೀಡಿ, ಮಳೆಯಿಲ್ಲದೇ ಕಬ್ಬು ಸೇರಿದಂತೆ ವಿವಿಧ ಬೆಳೆಗಳು ಒಣಗಿ ಹೋಗುತ್ತಿವೆ. ಭೀಮಾನದಿಯಲ್ಲೂ ನೀರಿಲ್ಲ.ಕಾಲುವೆಗಳಿಗೂ ನೀರಿಲ್ಲ. ಹೀಗಾಗಿ ನಮ್ಮ ಹೊಲದಲ್ಲಿರುವ ಕಬ್ಬು ಸೇರಿದಂತೆ ಇತರ ಬೆಳೆಗಳಿಗೆ ನೀರು ಇಲ್ಲದ ಕಾರಣ ಬೆಳೆಗಳು ಒಣಗುತ್ತಿವೆ.ಸಂಭಂದಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಆದಷ್ಟು ಬೇಗನೆ ಭೀಮಾನದಿಗೆ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ನೀರು ಬಿಡಿಸುವ ಕೆಲಸ ಮಾಡಬೇಕು.ರೈತರು ಮುಂಗಾರು ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿ ಗೊಬ್ಬರ, ಬೀಜ ಖರೀದಿ ಮಾಡಲು ಮುಂದಾಗಿದ್ದಾರೆ. ಆದರೆ ಮಳೆ ಬರುತ್ತಿಲ್ಲ.ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ಲಘು,ವಾಣಿಜ್ಯ ಬೆಳೆಗಳು ಬೆಳೆಯಲು ಸಾಧ್ಯವಾಗುತ್ತಿಲ್ಲ.
ಹಿಂಗಾರಿಯಲ್ಲಿ ಜೋಳ ಬಿತ್ತನೆ ಮಾಡಿ ವರ್ಷದಲ್ಲಿ 2 ಬೆಳೆ ಬೆಳೆಯುವ ಕನಸು ಭಗ್ನವಾಗಿದೆ ಪ್ರಸ್ತುತ ವರ್ಷ ಅಕಾಲಿಕ ಮಳೆಗಳು ಬರಲೇ ಇಲ್ಲ. ಮೇಲಾಗಿ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆಯುತ್ತಾ ಬಂದರೂ ಮಳೆ ಬರುತ್ತಿಲ್ಲ. ಹೀಗಾಗಿ ಬೇಸಿಗೆ ಬೆಳೆಗಳು ಒಣಗಿ ಹೋಗಿವೆ. ಮುಂಗಾರು ಬಿತ್ತನೆ ಕುಂಠಿತವಾಗಿದೆ.ನಮ್ಮ ಕರಜಗಿ ವಲಯದ ಶೇಷಗಿರಿ ಮಣ್ಣೂರ ಕುಡಗನೂರ ಶಿವೂರ ಹಿರಿಯಾಳ ಉಡಚಣ ಭೋಸಗಾ ದುದ್ದಣಗಿ ಮಂಗಳೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸುಮಾರು ಹತ್ತು ಸಾವಿರ ಎಕರೆ ಕಬ್ಬುನಾಟಿ ಮಾಡಿದ್ದಾರೆ.ಭೀಮಾ ನದಿಯಲ್ಲಿ ನೀರು ಇಲ್ಲದ ಕಾರಣ ಇನ್ನೊಂದು ವಾರ ಮಳೆ ಬರದಿದ್ದರೆ ಬೆಳೆಗಳು ಒಣಗಿ ಹೋಗುತ್ತವೆ.ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುವುದಿಲ್ಲ ಎಂದು ಮಣ್ಣೂರ ಗ್ರಾಮದ ಭೀಮಾ ನದಿ ದಡದಲ್ಲಿ ಜಮೀನುಗಳಿರುವ ರೈತರಾದ ಮಹಮದ ಕರೀಮ ಮಂಗಲಗಿರಿ ಕಾಶಿನಾಥ ಜೇವೂರ ಮಲಕಪ್ಪ ಕರಜಗಿ ವಿಠ್ಠಲ ಅಲ್ಲಾಪೂರ ಮಹಾಂತೇಶ ಜಕಾಪೂರ ತಮ್ಮ ಅಳಲು ತೋಡಿಕೊಂಡರು.
