ಶಿವಾನಂದ ಗೊಂಬಿ
ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಕುರಿತಂತೆ ಶಿಕ್ಷಕರ ಸಂಘದಲ್ಲಿನ ಭಿನ್ನಮತದಿಂದಾಗಿ ಈ ಸಲ ಕಡ್ಡಾಯ ವರ್ಗಾವಣೆಯೋ? ಹೆಚ್ಚುವರಿ ವರ್ಗಾವಣೆಯೋ? ಎಂಬ ಗೊಂದಲ ಶಿಕ್ಷಕ ಸಮುದಾಯದಲ್ಲಿ ಉಂಟಾಗಿದೆ. ಸರ್ಕಾರವೂ ಯಾವ ರೀತಿಯ ವರ್ಗಾವಣೆ ಮಾಡಬೇಕೆಂದು ತಿಳಿಯದೇ ಇಕ್ಕಟ್ಟಿಗೆ ಸಿಲುಕಿದೆ.
ಆಗಿರುವುದೇನು?:ರಾಜ್ಯದಲ್ಲಿ 1.56 ಲಕ್ಷ ಜನ ಪ್ರಾಥಮಿಕ ಶಾಲಾ ಶಿಕ್ಷಕರಿದ್ದಾರೆ. ಇದರಲ್ಲಿ 35-40 ಸಾವಿರ ಶಿಕ್ಷಕರು (ಶೇ.25) ನಗರ ಅಥವಾ ಪಟ್ಟಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನುಳಿದ 1.15-1.20 ಲಕ್ಷ ಶಿಕ್ಷಕರು (ಶೇ.75) ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಾರೆ. ನಗರ ಅಥವಾ ಪಟ್ಟಣದ ಶಿಕ್ಷಕರಿಗೆ ಎ ವಲಯ, ನಗರ ಅಥವಾ ಪಟ್ಟಣದಿಂದ 10-15 ಕಿಮೀ ದೂರದ ಗ್ರಾಮೀಣ ಪ್ರದೇಶಗಳಲ್ಲಿನ ಶಿಕ್ಷಕರನ್ನು ಬಿ ವಲಯ ಹಾಗೂ ಇದಕ್ಕಿಂತಲೂ ಹೆಚ್ಚು ದೂರದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಸಿ ವಲಯದ ಶಿಕ್ಷಕರೆಂದು ಪರಿಗಣಿಸಲಾಗಿದೆ.ವರ್ಗಾವಣೆ ನೀತಿ ಅನ್ವಯ ಒಂದು ವರ್ಷ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತದೆ. (ಮಕ್ಕಳ ಸಂಖ್ಯೆಗೆ ಅನುಗುಣಕ್ಕಿಂತ ಹೆಚ್ಚು ಶಿಕ್ಷಕರನ್ನು ಹೊಂದಿರುವ ಶಾಲೆಗಳಲ್ಲಿನ ಶಿಕ್ಷಕರ ವರ್ಗಾವಣೆ). ಇನ್ನು ಮರು ವರ್ಷ ವಲಯವಾರು ಅಥವಾ ಕಡ್ಡಾಯ ವರ್ಗಾವಣೆ ಮಾಡಬೇಕಾಗುತ್ತದೆ. ಅಂದರೆ ಎ ವಲಯದಲ್ಲಿ 10-15 ವರ್ಷ ಸೇವೆ ಸಲ್ಲಿಸಿದವರನ್ನು ಬಿ ಅಥವಾ ಸಿ ವಲಯಕ್ಕೆ, ಸಿ ಅಥವಾ ಬಿ ವಲಯದ ಶಿಕ್ಷಕರನ್ನು ಎ ವಲಯಕ್ಕೆ ವರ್ಗಾವಣೆ ಮಾಡಬೇಕು. ಇದು ನಿಯಮ.
2 ವರ್ಷದಿಂದ ಕಡ್ಡಾಯ ವರ್ಗಾವಣೆ ಮಾಡಿಲ್ಲ. ಈ ವರ್ಷವಾದರೂ ಕಡ್ಡಾಯ (ವಲಯವಾರು) ವರ್ಗಾವಣೆ ಮಾಡಲಾಗುತ್ತದೆ ಎಂಬ ಭಾವನೆ ಶಿಕ್ಷಕರದ್ದು. ಆದರೆ ಇದೀಗ ನಗರದಲ್ಲಿನ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಈ ಸಲವೂ ವಲಯವಾರು ವರ್ಗಾವಣೆ ಮಾಡದೇ, ಬರೀ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಮಾಡಬೇಕು ಎಂದು ಮನವಿ ಸಲ್ಲಿಸಿದೆ.. ಜತೆಗೆ ಸರ್ಕಾರದ ಮೇಲೆ ಒತ್ತಡವನ್ನೂ ಹಾಕುವ ಕೆಲಸ ಮಾಡುತ್ತಿದೆ.
ಇದೇ ವರ್ಗಾವಣೆ ವಿಷಯವಾಗಿಯೇ ಒಂದೇ ಆಗಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒಡೆದು ಗ್ರಾಮೀಣ ಶಿಕ್ಷಕರ ಸಂಘ ಹುಟ್ಟುಕೊಂಡಿದೆ. ನಗರದಲ್ಲಿನ ಶಿಕ್ಷಕರಿಗೆ ಮನೆ ಬಾಡಿಗೆ, ಭತ್ಯೆ ಹೆಚ್ಚು. ಆದರೆ ಗ್ರಾಮೀಣ ಭಾಗದ ಶಿಕ್ಷಕರಿಗೆ ಮನೆ ಬಾಡಿಗೆ, ಭತ್ಯೆ ಕಡಿಮೆ. ನಗರ ಭತ್ಯೆ ಬರಲ್ಲ. ಜತೆಗೆ ಪ್ರತಿನಿತ್ಯ 10-20 ಕಿಮೀ ಕ್ರಮಿಸಿ ಶಾಲೆಗೆ ಹೋಗಬೇಕಾದ ಪರಿಸ್ಥಿತಿ. ನಮ್ಮ ಗೋಳನ್ನು ಕೇಳುವವರು ಯಾರು? ನಮಗೇಕೆ ಈ ತಾರತಮ್ಯ. ನಗರದಲ್ಲಿರುವವರು ಕೆಲಕಾಲ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಹಾಲೇಶ ನವಲೆ, ಪ್ರಧಾನ ಕಾರ್ಯದರ್ಶಿ, ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ