ಹೊನ್ನಾವರ: ನಿಮ್ಮ ಕೆಲಸ ನೀವೆ ಮಾಡಬೇಕು. ನಾವು ಆದೇಶ ಮಾಡಬಹುದು, ನಿಮ್ಮ ಕೆಲಸ ಮಾಡದಿದ್ದರೆ ಯಾರೇ ಹೇಳಿದರೂ ಜಿಲ್ಲೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಅನುದಾನ ತರುವುದು ನಮ್ಮ ಕೆಲಸ. ಜನರ ಕೆಲಸ ಮಾಡಿಕೊಡುವುದು ನಿಮ್ಮ ಕೆಲಸ ಎಂದು ಅಧಿಕಾರಿ ವರ್ಗಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಖಡಕ್ ಎಚ್ಚರಿಕೆ ನೀಡಿದರು.
ಡೆಂಘೀ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಹೆಚ್ಚಿನ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ಜಾಗೃತಿ ಮೂಡಿಸುವಂತೆ ಸೂಚಿಸಿದರು. ಗ್ರಾಮೀಣ ಮಟ್ಟದಲ್ಲಿ ಕಸ ವಿಲೇವಾರಿ ವಾಹನದ ಮೂಲಕ ಜಾಗೃತಿ ಮೂಡಿಸಲು ಹಲವು ವಾಹನಗಳಿಗೆ ಚಾಲಕರೆ ಇಲ್ಲ. ಮಂಕಿ ಪಪಂ ವ್ಯಾಪ್ತಿಗೆ ಎಡು ವರ್ಷದ ಹಿಂದೆ ವಾಹನ ಬಂದರು ಚಾಲಕರಿಲ್ಲ. ಇಂತಹ ವ್ಯವಸ್ಥೆಯಿಂದ ನಾವು ಹೊರಬರಬೇಕಿದೆ. ಗ್ರಾಪಂ ಮಟ್ಟದಲ್ಲಿ ಫಾಗಿಂಗ್ ವ್ಯವಸ್ಥೆ ಕಲ್ಪಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.
ಭಟ್ಕಳ ವ್ಯಾಪ್ತಿಯಲ್ಲಿ ಎಂಡೊಸಲ್ಫಾನ್ ಶಿಬಿರದ ಮೂಲಕ 111 ಹೊಸ ಪ್ರಕರಣ ಪತ್ತೆಯಾಗಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದರು. ಅದೇ ಮಾದರಿಯಲ್ಲಿ ಹೊನ್ನಾವರದಲ್ಲಿಯೂ ಶಿಬಿರ ನಡೆಸಲು ಸಚಿವರು ಸೂಚಿಸಿದರು. ಎಂಡೊಸಲ್ಪಾನ್ ಪೀಡಿತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯ ಒದಗಿಸಬೇಕು. ಇದರಿಂದ ಯಾರೊಬ್ಬರೂ ವಂಚಿತರಾಗದಂತೆ ಕ್ರಮ ವಹಿಸಿ ಎಂದರು.ಪಪಂನಲ್ಲಿ ಇ- ಸ್ವತ್ತು, ಪರವಾನಗಿ ಪತ್ರ ನೀಡಲು ವಿಳಂಬ ಮಾಡುತ್ತಿದ್ದಾರೆ ಎನ್ನುವ ದೂರು ಕೇಳಿ ಬರುತ್ತಿದ್ದು, ಅರ್ಜಿ ಬಂದು 10 ದಿನದೊಳಗೆ ಕೆಲಸ ಮುಗಿಸುವಂತೆ ಮುಖ್ಯಾಧಿಕಾರಿಗಳಿಗೆ ಎಚ್ಚರಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿ ಡಾ. ನಯನಾ ಎಸ್., ಜಿಪಂ ಯೋಜನಾಧಿಕಾರಿ ವಿನೋದ ಅಣ್ವೇಕರ್, ತಹಸೀಲ್ದಾರ್ ರವಿರಾಜ ದಿಕ್ಷೀತ್, ತಾಪಂ ಇಒ ಜಿ.ಎಸ್. ನಾಯ್ಕ ಉಪಸ್ಥಿತರಿದ್ದರು.