ಕನ್ನಡಪ್ರಭ ವಾರ್ತೆ, ತರೀಕೆರೆ
ಮಹಿಳೆ ತಮ್ಮ ಕುಟುಂಬ ಸಮೇತರಾಗಿ ಸಮಾಜ ಸೇವೆಗೆ ತೊಡಗಿಸಿಕೊಂಡರೆ ಸಮಾಜದ ಬದಲಾವಣೆ ಸಾಧ್ಯ ಎಂದು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನ್ ಸಂಸ್ಥೆ ಮುಖ್ಯಸ್ಥ ಡಾ. ಅರವಿಂದ್ ರಾವ್ ಕೇಡಿಗೆ ಅಭಿಪ್ರಾಯ ಪಟ್ಟರು.ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಆಯೋಜಿಸಿದ್ದ ತರೀಕೆರೆ ಪ್ರಗತಿ ಲೆಗೈನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಾತೆಯರು ಅಡುಗೆ ಮನೆಗೆ ಮೀಸಲಾಗದೆ ಸಮಾಜದ ಮುನ್ನೆಲೆಗೆ ಬಂದು ಸಮಾಜ ಸೇವೆಯಲ್ಲಿ ಸಕ್ರಿಯರಾದರೆ ಮಾತ್ರ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಹೇಳಿದರು. ನಿಮ್ಮೆಲ್ಲರ ಸ್ಪೂರ್ತಿ ಮತ್ತು ಉತ್ಸಾಹ ನನ್ನನ್ನು ಮಂಗಳೂರಿನಿಂದ ತರೀಕೆರೆವರೆಗೆ ಬರುವಂತಾಗಿದೆ. ವಯಸ್ಸು ಕೇವಲ ದಾಖಲೆಯೇ ಹೊರತು ಉತ್ಸಾಹಕ್ಕಲ್ಲ. ಈ ಉತ್ಸಾಹದಿಂದ ನಾವು ಸಕ್ರಿಯವಾಗಿ ಸಮಾಜದಲ್ಲಿ ಸೇವೆ ಸಲ್ಲಿಸುವುದರಿಂದ ಜವಾಬ್ದಾರಿಯುತ ನಾಗರಿಕರಾಗಬೇಕಿದೆ ಎಂದು ಹೇಳಿದರು. ನಮ್ಮ ಸಂಸ್ಥೆ 1997ರಲ್ಲಿ ನಮ್ಮ ದೇಶದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬೆಳೆದಿರುವುದು ನಮ್ಮ ಹೆಮ್ಮೆಯಾಗಿದೆ. ನಮ್ಮ ಸಂಸ್ಥೆಯಿಂದ ಅಶಕ್ತರಿಗೆ ಜಲಧಾರೆ ಯೋಜನೆಯಡಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಗಾಲಿಕುರ್ಚಿ, ಅಶಕ್ತ ಮಹಿಳೆಯರ ಸಬಲೀಕರಣಕ್ಕಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತಿದ್ದು, ಇದಕ್ಕಾಗಿ ಸಂಸ್ಥೆ ಸಣ್ಣ ರಾಷ್ಟ್ರೀಯ ನಿಧಿಯಿಂದ ಹಣಕಾಸಿನ ಸಹಕಾರ ನೀಡಲಾಗುತ್ತಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಪ್ರೇಮಾನಂದ್ ಹೆಸರಿನಲ್ಲಿ ಬಿಪಿಎಫ್ ಯೋಜನೆಯಡಿ ವೃತ್ತಿಪರ ಶಿಕ್ಷಣ ಪಡೆಯುವ ಪ್ರತಿ ಬಡ ವಿದ್ಯಾರ್ಥಿಗಳಿಗೆ 10 ಸಾವಿರ ರು. ಪ್ರೋತ್ಸಾಹಧನ ನೀಡಲಾಗಿದೆ. ಈ ಎಲ್ಲಾ ಸಮಾಜಮುಖಿ ಸೇವೆಗಳನ್ನು ಸಾಕಾರಗೊಳಿಸಲು ನಮ್ಮ ಸಂಸ್ಥೆ ಎಲ್ಲಾ ಸದಸ್ಯರ ಪ್ರೋತ್ಸಾಹ ಅತಿಮುಖ್ಯ. ಎಲ್ಲಿ ಒಗ್ಗಟ್ಟು ಇರುತ್ತದೆಯೋ ಅಲ್ಲಿ ಯಶಸ್ಸು ದೊರೆಯುತ್ತದೆ ಎಂದು ಹೇಳಿದರು. ಶಿವಮೊಗ್ಗ ಭಾವನ ಲಾಗಿನ್ ಅಧ್ಯಕ್ಷೆ ಸುರೇಖಾ ಮುರಳೀಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಇದೇ ಸಂದರ್ಭದಲ್ಲಿ ಸಂಸ್ಥೆ ಮುಖ್ಯಸ್ಥರಾದ ನವೀನ್ ಅಮೀನ್, ಚಿತ್ರಕುಮಾರ್, ಪುಷ್ಪಾ ಎಸ್. ಶೆಟ್ಟಿ, ಪುರಸಭಾಧ್ಯಕ್ಷ ಪರಮೇಶ್, ವಾಣಿಶ್ರೀನಿವಾಸ್, ಮಾತನಾಡಿದರು ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾಗಿ ಕಲ್ಪನಾ ಸುಧಾಮ, ಪ್ರಧಾನ ಕಾರ್ಯದರ್ಶಿಯಾಗಿ ಆಶಾ ವಿಠಲ್ ಬೋಸ್ಲೆ, ಖಜಾಂಚಿಯಾಗಿ ಎಂ.ಎಸ್. ವಿಶಾಲಾಕ್ಷಮ್ಮರವರಿಗೆ ಅಧಿಕಾರ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ನೂರಾರು ಸದಸ್ಯರು ಪಾಲ್ಗೊಂಡಿದ್ದರು.
12ಕಟಿಆರ್.ಕೆ.8ಃತರೀಕೆರೆಯಲ್ಲಿ ಪ್ರಗತಿ ಲೆಗೈನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಸೀನಿಯರ್ ಚೇಂಬರ್ ಇಂಟರ್‌ನ್ಯಾಷನ್ ಸಂಸ್ಥೆಯ ಮುಖ್ಯಸ್ಥ ಡಾ. ಅರವಿಂದ್ ರಾವ್ ಕೇಡಿಗೆ ನೆರವೇರಿಸಿದರು.