ಕನ್ನಡಪ್ರಭವಾರ್ತೆ ಮಡಿಕೇರಿ
ಕನಕದಾಸರ ಸಮಗ್ರ ಸಾಹಿತ್ಯವು ಕೊಡವ ಭಾಷೆ ಸೇರಿದಂತೆ ಭಾರತದ 14 ಭಾಷೆಗಳಿಗೆ ಅನುವಾದಿಸಲ್ಪಟ್ಟಿದೆ. ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದಿಂದ ಈ ಕೃತಿಗಳನ್ನು ಪ್ರಕಟಿಸಲಾಗಿದೆ.
ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು 2013-24 ನೇ ಸಾಲಿನಲ್ಲಿ ಕನಕದಾಸರ ಸಮಗ್ರ ಸಾಹಿತ್ಯವನ್ನು ಕೊಡವ ಸೇರಿದಂತೆ ಭಾರತದ 14 ಭಾಷೆಗಳಿಗೆ ಅನುವಾದ ಮಾಡುವ ಯೋಜನೆ ಹಮ್ಮಿಕೊಂಡಿತ್ತು. ಪ್ರತೀ ಭಾಷೆಯೂ 3 ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಕೊಡವ ಮತ್ತು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ವಚನ ಸಾಹಿತ್ಯ ಬಿಟ್ಟರೆ ಇಷ್ಟೂ ಭಾಷೆಗಳಲ್ಲಿ ಕೃತಿಯೊಂದು ಪ್ರಕಟವಾಗಿರುವುದು ಇದೇ ಮೊದಲು.ಕನಕದಾಸರ ಸಮಗ್ರ ಸಾಹಿತ್ಯ ಕೃತಿಯು ಕೊಡವ, ಇಂಗ್ಲೀಷ್, ಹಿಂದಿ, ಬೆಂಗಾಳಿ, ಮರಾಠಿ, ಪಂಜಾಬಿ, ಅಸ್ಸಾಮಿ, ಉದು೯, ತೆಲುಗು, ತಮಿಳು, ಮಲಯಾಳಂ, ಕೊಂಕಣಿ, ಬ್ಯಾರಿ, ತುಳು, ತೆಲುಗು, ಮುಂತಾದ 14 ಭಾಷೆಗಳಲ್ಲಿ ಅನುವಾದಗೊಂಡಿದೆ.
ಮೂರು ಸಂಪುಟಗಳ ಪೈಕಿ ಮೊದಲ ಸಂಪುಟದಲ್ಲಿ ಕನಕದಾಸರ 360 ಕೀತ೯ನೆಗಳು ಮತ್ತು ಮುಂಡಿಗೆಗಳು, ಎರಡನೇ ಸಂಪುಟದಲ್ಲಿ ಹರಿಭಕ್ತಿಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ ಕಾವ್ಯಗಳು, ಮೂರನೇ ಸಂಪುಟದಲ್ಲಿ ಮೋಹನ ತರಂಗಿಣಿ ಮಹಾಕಾವ್ಯ ಸಾಹಿತ್ಯಗಳಿವೆ.